ADVERTISEMENT

ಪುಟ್ಟ ಪೋರನ ಬೈಕ್‌ ಕ್ರೇಜ್‌...ಚಿಕ್ಕವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ ಸೂರ್ಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 2:29 IST
Last Updated 14 ನವೆಂಬರ್ 2025, 2:29 IST
ಮಾಗಡಿ ತಾಲ್ಲೂಕಿನ ಹೊಸಹಳ್ಳಿ ಬಾಲಕ ಸೂರ್ಯ ಯಾದವ್ ಟ್ರ್ಯಾಕ್‌ನಲ್ಲಿ ಬೈಕ್ ಸಾಹಸ ಮಾಡುತ್ತಿರುವುದು
ಮಾಗಡಿ ತಾಲ್ಲೂಕಿನ ಹೊಸಹಳ್ಳಿ ಬಾಲಕ ಸೂರ್ಯ ಯಾದವ್ ಟ್ರ್ಯಾಕ್‌ನಲ್ಲಿ ಬೈಕ್ ಸಾಹಸ ಮಾಡುತ್ತಿರುವುದು   

‌ಮಾಗಡಿ: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಮಕ್ಕಳ ಬೈಕ್ ರೇಸ್‌ನಲ್ಲಿ ಐದೂವರೆ ವರ್ಷದ ಪೋರನೊಬ್ಬ ಮೊದಲ ಸ್ಥಾನ ಪಡೆದು ಚಿಕ್ಕವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾನೆ.

ಈ ಸಾಧನೆ ಮಾಡಿರುವ ವಿದ್ಯಾರ್ಥಿ ಕುದೂರು ಹೋಬಳಿ ಹೊಸಹಳ್ಳಿ ಸೂರ್ಯ ಯಾದವ್. ವಿದ್ಯಾಸ್ಫೂರ್ತಿ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದಾನೆ. ತಂದೆ ವಿನಯ್. ಶ್ರೀಗಿರಿಪುರ ಗ್ರಾಪಂ ಸದಸ್ಯ.

ಸೂರ್ಯ ಯಾದವ್ ಸಾಹಸಗಾಥೆಗೆ ಊರಿಗೇ ಊರೇ ಸಂಭ್ರಮಿಸುತ್ತಿದೆ. ಮಗನಿಗೆ ಬೈಕ್ ಬಗೆಗಿನ ಆಸಕ್ತಿಯನ್ನು ಗುರುತಿಸಿದ ವಿನಯ್, ಬೈಕ್ ರೇಸ್‌ ತರಬೇತುದಾರ ಅರುಣ್ ಬಳಿ ತರಬೇತಿ ಕೊಡಿಸಿದ್ದಾರೆ. ನಿತ್ಯವೂ ಸಂಜೆ ಶಾಲೆಯಿಂದ ಬಂದ ಮೇಲೆ ಎರಡು ಗಂಟೆ ಇದಕ್ಕಾಗಿ ತಕ್ಕ ತರಬೇತಿ ಪಡೆಯುತ್ತಾನೆ. ತರಬೇತಿ ನಂತರವೇ ಆ ದಿನದ ಹೋಂ ವರ್ಕ್‌ ಇತ್ಯಾದಿ ಮುಗಿಸುವ ಪರಿಪಾಠ ಬೆಳೆಸಿಕೊಂಡಿದ್ದಾನೆ.

ADVERTISEMENT
ಸೂರ್ಯ ಯಾದವ್

2025ರ ರಾಜ್ಯ ಮಟ್ಟದ ಮಕ್ಕಳ ಬೈಕ್ ರ್‍ಯಾಲಿ ಮಂಗಳೂರು ಪಟ್ಟಣದಲ್ಲಿ ಏರ್ಪಡಿಸಲಾಗಿತ್ತು. ಅಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ತಾಲ್ಲೂಕಿಗೆ ಕೀರ್ತಿ ತಂದಿದ್ದಾನೆ. ಮಗನ ತರಬೇತಿಗೆ ತಂದೆ ತಮ್ಮ ಹೊಲದಲ್ಲೇ ಟ್ರ್ಯಾಕ್‌ ನಿರ್ಮಾಣ ಮಾಡಿಕೊಟ್ಟಿದ್ದಾರೆ. ನಿತ್ಯವೂ ಮಗನ ಜೊತೆಗೆ ನಿಂತು ಅಭ್ಯಾಸ ಮಾಡಿಸುತ್ತಾರೆ. ಮಗ ಅಭ್ಯಾಸ ಮಾಡುವಾಗ ಸಾಕಷ್ಟು ಬಾರಿ ಎದ್ದು ಬಿದ್ದು ಛಲವನ್ನು ಬಿಡದೆ ಆಸಕ್ತಿಯಿಂದ ಅಭ್ಯಾಸ ಮಾಡಿದ್ದರ ಫಲ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಬರಲು ಸಾಧ್ಯವಾಗಿದೆ. ಈಗ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ತರಬೇತಿ ಪಡೆಯುತ್ತಿದ್ದಾನೆ ಎಂದು ತಂದೆ ವಿನಯ್‌ ಮಗನ ಸಾಧನೆಯನ್ನು ಅಭಿಮಾನದಿಂದ ಕೊಂಡಾಡಿದರು.

ಬಾಲಕ ಸಾಧನೆ ಗುರುತಿಸಿ ಶಾಸಕ ಬಾಲಕೃಷ್ಣ ಅವರು ತಾಲ್ಲೂಕು ಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಹಲವು ಸಂಘ–ಸಂಸ್ಥೆಗಳು ಕೂಡ ಗೌರವಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.