
ರಾಮನಗರ: ‘ಬ್ರಿಟಿಷರ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಿದ ಕಿತ್ತೂರು ರಾಣಿ ಚನ್ನಮ್ಮ ಅವರ ಧೈರ್ಯ ಮತ್ತು ಸಾಹಸ ಚರಿತ್ರೆಯ ಪುಟಗಳಲ್ಲಿ ಅಜರಾಮರವಾಗಿದೆ. ಚನ್ನಮ್ಮನ ಹೋರಾಟದ ಕಿಚ್ಚು ಹಾಗೂ ಆದರ್ಶ ಇಂದಿನ ಯುವಜನರಿಗೆ ಪ್ರೇರಣೆಯಾಗಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮ ಉದ್ಫಾಟಿಸಿ ಮಾತನಾಡಿದ ಅವರು, ‘ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದ ಮಹನೀಯರ ಜನ್ಮ ಜಯಂತಿ ಆಚರಿಸುವುದರಿಂದ ಅವರ ಜೀವನ ಸಾಧನೆಯನ್ನು ಮುಂದಿನ ಪೀಳಿಗೆಗೆ ತಲುಪಿಸಿದಂತಾಗುತ್ತದೆ’ ಎಂದರು.
‘ಕಿತ್ತೂರಿನ ರಾಣಿಯಾಗಿದ್ದ ಚನ್ನಮ್ಮ ಅವರು, ಬ್ರಿಟಿಷರ ಬೆದರಿಕೆಗೆ ಬಗ್ಗದೆ ಹೋರಾಡಿ ಮಡಿದರು. ಆ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹೊತ್ತಿಸಿದರು. ವಿದ್ಯಾರ್ಥಿಗಳು ಇಂತಹವರ ಜೀವನಗಾಥೆಯನ್ನು ಓದಬೇಕು. ಚರಿತ್ರೆಯ ಅರಿವಿದ್ದವರಿಗೆ ಮಾತ್ರ ಚರಿತ್ರೆ ಸೃಷ್ಟಿಸಲು ಸಾಧ್ಯ ಎಂಬ ಮಾತನ್ನು ನೆನಪಿಟ್ಟುಕೊಳ್ಳಬೇಕು’ ಎಂದು ತಿಳಿಸಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ. ಸತೀಶ್, ‘ದೇಶದಿಂದ ಬ್ರಿಟಿಷರನ್ನು ಓಡಿಸಬೇಕು ಎಂದು ಹೋರಾಡಿದ ಮಹಿಳೆಯರ ಸಾಲಿನಲ್ಲಿ ಚನ್ಮಮ್ಮ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಅವರ ಆ ಸ್ವಾಭಿಮಾನದ ಹೋರಾಟವು ನಾಡಿಗೆ ದೊಡ್ಡ ಪ್ರೇರಣೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.
ಚನ್ನಮ್ಮ ಅವರ ಕುರಿತು ಉಪನ್ಯಾಸ ನೀಡಿದ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಪುಟ್ಟಸ್ವಾಮಿ, ‘ಚನ್ನಮ್ಮನವರು 1778ರಲ್ಲಿ ಬೆಳಗಾವಿ ಜಿಲ್ಲೆಯ ಕಾಕತಿ ಎಂಬ ಹಳ್ಳಿಯಲ್ಲಿ ಜನಿಸಿದರು. ಅವರ ತಂದೆ ಧೂಳಪ್ಪ ದೇಸಾಯಿ ಮತ್ತು ತಾಯಿ ಪದ್ಮಾವತಿ. ಸಣ್ಣ ವಯಸ್ಸಿನಲ್ಲೇ ಬಿಲ್ಲು ವಿದ್ಯೆ, ಕತ್ತಿ ವರಸೆ ಮತ್ತು ಕುದುರೆ ಸವಾರಿ ಸೇರಿದಂತೆ ಯುದ್ದ ವಿದ್ಯೆಗಳನ್ನು ಚನ್ನಮ್ಮ ಅವರು ಕರಗತ ಮಾಡಿಕೊಂಡಿದ್ದರು’ ಎಂದರು.
‘ಕಿತ್ತೂರು ಸಂಸ್ಥಾನದಲ್ಲಿ 1816ರಿಂದ 1828ರವರೆಗೆ ಚನ್ನಮ್ಮ ಆಡಳಿತ ನಡೆಸಿದರು. ತಮ್ಮ ಸಂಸ್ಥಾನದ ಮೇಲೆ ಬ್ರಿಟಿಷರು ಪ್ರಾಬಲ್ಯ ಸಾಧಿಸಲು ಮುಂದಾದಾಗ ಚನ್ನಮ್ಮ ಪ್ರತಿರೋಧ ತೋರಿದರು. ಸ್ವಾಭಿಮಾನ ಬಿಡದೆ ಬ್ರಿಟಿಷರ ವಿರುದ್ಧ ಹೋರಾಡಿದರು. ಅವರ ಹೋರಾಟದ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲೆ ರಾಧ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿನಿಯೊಬ್ಬರು ಚನ್ನಮ್ಮನ ಕುರಿತು ಏಕಪಾತ್ರಾಭಿನಯ ಪ್ರಸ್ತುತಪಡಿಸಿದರು. ಡಾ. ವಿಶ್ವನಾಥಯ್ಯ ಸ್ವಾಗತಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕ ದೀಪಕ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಶಿವಣ್ಣ, ಅರಣ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.