ADVERTISEMENT

ವೈರಸ್‌ ಭೀತಿ: ವಹಿವಾಟಿಗೆ ಧಕ್ಕೆ

ಶಾಲೆ ಕಾಲೇಜು, ಚಿತ್ರಮಂದಿರ ಬಂದ್: ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 12:23 IST
Last Updated 14 ಮಾರ್ಚ್ 2020, 12:23 IST
ಶಾನ್ ಚಿತ್ರಮಂದಿರ ಶನಿವಾರ ಬಾಗಿಲು ಹಾಕಿತ್ತು
ಶಾನ್ ಚಿತ್ರಮಂದಿರ ಶನಿವಾರ ಬಾಗಿಲು ಹಾಕಿತ್ತು   

ರಾಮನಗರ: ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸಾರ್ವಜನಿಕ ಚಟುವಟಿಕೆಗಳ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿದೆ. ಇದರಿಂದಾಗಿ ನಗರ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಕಡಿಮೆ ಆಗಿದ್ದು, ಬಿಕೋ ಎನ್ನುತ್ತಿದೆ.

ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಶನಿವಾರದಿಂದ ಶಾಲೆ-ಕಾಲೇಜುಗಳು ಮುಚ್ಚಿವೆ. ಚಿತ್ರಮಂದಿರಗಳು ಬಾಗಿಲು ಹಾಕಿದ್ದು, ಬೆಳಗ್ಗೆಯಿಂದಲೇ ಪ್ರದರ್ಶನಗಳು ಬಂದ್‌ ಆಗಿದ್ದವು. ಅಂಗನವಾಡಿಗಳನ್ನೂ ಸಹ ಮುಚ್ಚಲಾಗಿತ್ತು. ಎರಡನೇ ಶನಿವಾರ ಆದ್ದರಿಂದ ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳೂ ಬಾಗಿಲು ಹಾಕಿದ್ದವು. ದೊಡ್ಡ ಅಂಗಡಿ ಮಳಿಗೆಗಳನ್ನು ಮುಚ್ಚುವಂತೆ ಆದೇಶವಿತ್ತು. ಸಾರಿಗೆ ಸೇವೆ ಎಂದಿನಂತೆ ಇದ್ದರೂ ಹೆಚ್ಚು ಪ್ರಯಾಣಿಕರು ಇರಲಿಲ್ಲ. ನಿತ್ಯ ಬೆಂಗಳೂರಿಗೆ ತೆರಳುವ ಸಾವಿರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಮನೆಯಲ್ಲೇ ಉಳಿದ ಕಾರಣ ಕೆಎಸ್ಆರ್‌ ಟಿಸಿ ಬಸ್‌ ನಿಲ್ದಾಣ ಖಾಲಿಯಾಗಿತ್ತು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಕಡಿಮೆ ಇತ್ತು. ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ವಹಿವಾಟು ಎಂದಿನಂತೆ ಇತ್ತು. ಎಪಿಎಂಸಿ ಆವರಣದಲ್ಲಿ ತರಕಾರಿ ಮಾರಾಟ ಇತ್ತಾದರೂ ಜನಸಂದಣಿ ಕಡಿಮೆ ಆಗಿತ್ತು.

ಹೋಟೆಲ್‌ಗಳು, ಬಾರ್‌ ಮತ್ತು ರೆಸ್ಟೋರೆಂಟ್‌ಗಳ ಮೇಲೂ ಅನೇಕ ವ್ಯಾಪಾರ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದರಿಂದಾಗಿ ವಹಿವಾಟು ಕುಸಿಯುವ ಸಾಧ್ಯತೆ ಇದೆ. ಆಸ್ಪತ್ರೆಗಳು, ಔಷಧ ಅಂಗಡಿಗಳೂ ಸೇರಿದಂತೆ ವೈದ್ಯಕೀಯ ಸೇವೆಗೆ ಯಾವುದೇ ಅಡ್ಡಿ ಆಗಿಲ್ಲ.

ADVERTISEMENT

'ನಗರದಲ್ಲಿ ಕೇವಲ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಜನರು ಆಸಕ್ತಿ ತೋರುತ್ತಿದ್ದಾರೆ. ಮದುವೆ ಸೀಸನ್ ಇದ್ದರೂ ವೈರಸ್‌ ಭೀತಿಯ ಹಿನ್ನೆಲೆಯಲ್ಲಿ ಜವಳಿ ಖರೀದಿ ಹೆಚ್ಚಾಗಿ ನಡೆದಿಲ್ಲ' ಎಂದು ಎಂ.ಜಿ. ರಸ್ತೆಯ ವರ್ತಕ ರಫೀಕ್‌ ಮಾಹಿತಿ ನೀಡಿದರು.

'ತರಕಾರಿ ಖರೀದಿಗೂ ಜನರು ಮುಂದೆ ಬರುತ್ತಿಲ್ಲ. ಬೆಳಿಗ್ಗೆಯಿಂದ ವ್ಯಾಪಾರವೂ ಇಲ್ಲ. ಹೀಗೆ ಆದರೆ ದಿನದ ಸಂಪಾದನೆ ನಂಬಿಕೊಂಡಿರುವವರಿಗೆ ಬಲು ಕಷ್ಟ' ಎಂದು ಹಳೇ ಬಸ್‌ ನಿಲ್ದಾಣ ಬಳಿಯ ತರಕಾರಿ ವ್ಯಾಪಾರಿ ಸುರೇಶ್‌ ಹೇಳಿದರು.

ಪ್ರವಾಸಿ ತಾಣಗಳು ಖಾಲಿ

ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳು ಸದ್ಯ ಜನರಿಲ್ಲದೇ ಬಿಕೋ ಎನ್ನುತ್ತಿವೆ. ರಾಮನಗರದ ಜನಪದ ಲೋಕ, ರಾಮದೇವರ ಬೆಟ್ಟ, ರಂಗರಾಯರದೊಡ್ಡಿ ಕೆರೆ ಮೊದಲಾದ ಕಡೆಗಳಲ್ಲೂ ಜನರು ವಿರಳವಾಗಿದ್ದಾರೆ. ಜಿಲ್ಲೆಯ ಸಂಗಮ, ಮೇಕೆದಾಟು ಸೇರಿದಂತೆ ಬಹುತೇಕ ಪ್ರವಾಸಿ ತಾಣಗಳಲ್ಲಿ ಜನರ ಸಂಖ್ಯೆ ಕಡಿಮೆ ಇದೆ. ಧಾರ್ಮಿಕ ಕ್ಷೇತ್ರಗಳಿಗೆ ಬರುವವರ ಸಂಖ್ಯೆಗೂ ಕಡಿಮೆ ಆಗಿದೆ. ಇಲ್ಲಿಗೆ ಬರುವ ಹೊರ ರಾಜ್ಯ, ವಿದೇಶಿ ಪ್ರವಾಸಿಗರ ಮೇಲೆ ಪ್ರವಾಸಿ ಮಿತ್ರ ಸಿಬ್ಬಂದಿ ನಿಗಾ ವಹಿಸಿದ್ದಾರೆ.

ಬರೀ ವದಂತಿ

ಜಿಲ್ಲೆಯಲ್ಲಿ ಈವರೆಗೆ ಒಂದೂ ಕೋವಿಡ್-19 ಪ್ರಕರಣ ಪತ್ತೆ ಆಗಿಲ್ಲ. ಆದರೆ ಅಲ್ಲೊಬ್ಬರಿಗೆ, ಇಲ್ಲೊಬ್ಬರಿಗೆ ಸೋಂಕು ತಗುಲಿದೆ ಎಂದು ವದಂತಿ ಹಬ್ಬಿಸಲಾಗುತ್ತಿದೆ.

ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಇರುವ ಬೃಹತ್‌ ಕಾರ್ಖಾನೆಯೊಂದರ ವಿದೇಶಿ ಉದ್ಯೋಗಿ ಒಬ್ಬರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದು, ಅವರನ್ನು ತಪಾಸಣೆಗೆ ಒಳಪಡಿಸಬೇಕು. ಕೈಗಾರಿಕಾ ಪ್ರದೇಶದಲ್ಲಿರುವ ಎಲ್ಲ ಹೊರ ರಾಜ್ಯ, ವಿದೇಶಿ ನೌಕರರನ್ನೂ ತಪಾಸಣೆ ಮಾಡಬೇಕು ಎಂದು ಕೋರಿ ಕಾರ್ಮಿಕರ ಯೂನಿಯನ್‌ ಕಾರ್ಖಾನೆ ಮುಖ್ಯಸ್ಥರಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿತ್ತು.

'ಜನವರಿಯಲ್ಲಿ ಆ ವ್ಯಕ್ತಿ ವಿದೇಶದಿಂದ ಕಾರ್ಖಾನೆಗೆ ವಾಪಸ್ ಆಗಿದ್ದು, ಕೆಲವು ದಿನದ ಹಿಂದಷ್ಟೇ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಪರೀಕ್ಷೆ ಮಾಡಿಸಿದ್ದು, ಕೋವಿಡ್-19 ಸೋಂಕು ತಗುಲಿಲ್ಲ ಎಂದು ವರದಿ ಬಂದಿದೆ. ಈ ಬಗ್ಗೆ ಕಾರ್ಖಾನೆಯವರೂ ಮಾಹಿತಿ ನೀಡಿದ್ದಾರೆ. ಅದೆಲ್ಲ ವದಂತಿ ಅಷ್ಟೇ' ಎಂದು ಜಿಲ್ಲಾಧಿಕಾರಿ ಅರ್ಚನಾ ಸ್ಪಷ್ಟನೆ ನೀಡಿದರು. ಕಾಲೇಜು ವಿದ್ಯಾರ್ಥಿಯೊಬ್ಬನಲ್ಲಿ ರೋಗದ ಲಕ್ಷಣ ಕಾಣಿಸಿಕೊಂಡಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸುದ್ದಿ ಹಬ್ಬಿತ್ತು. ಅದೂ ವದಂತಿ ಎಂದು ಅಧಿಕಾರಿಗಳು ತಿಳಿಸಿದರು.

***
ಜಿಲ್ಲೆಯಲ್ಲಿ ಈವರೆಗೆ ಒಂದೂ ಕೋವಿಡ್-19 ಪ್ರಕರಣ ಪತ್ತೆ ಆಗಿಲ್ಲ. ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದರೆ ಪ್ರಕರಣ ದಾಖಲಿಸಲಾಗುವುದು
-ಎಂ.ಎಸ್‌. ಅರ್ಚನಾ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.