
ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಕೆಪಿಎಸ್ ಶಾಲೆಗೆ ಸುತ್ತಮುತ್ತಲಿನ ಏಳು ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ವಿಲೀನ ಮಾಡುತ್ತಿರುವ ಸರ್ಕಾರದ ಕ್ರಮ ಖಂಡಿಸಿ, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘದ (ಎಐಡಿಎಸ್‌ಒ) ನೇತೃತ್ವದಲ್ಲಿ ಗ್ರಾಮಸ್ಥರು ನಗರದ ಸಾತನೂರು ಸರ್ಕಲ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ವಿಲೀನಗೊಳ್ಳುತ್ತಿರುವ ಶಾಲೆಗಳ ಸಂತೆಮೊಗೇನಹಳ್ಳಿ, ಹೊಡಿಕೆ ಹೊಸಹಳ್ಳಿ, ಕನ್ನಿದೊಡ್ಡಿ, ಅಮ್ಮಳ್ಳಿದೊಡ್ಡಿ, ಸುಣ್ಣಘಟ್ಟ, ಎಸ್.ಎಂ. ದೊಡ್ಡಿ ಹಾಗೂ ಚನ್ನಂಕೇಗೌಡನದೊಡ್ಡಿ ಗ್ರಾಮಸ್ಥರು, ‘ನಮ್ಮೂರ ಶಾಲೆ ಮುಚ್ಚಲು ನಾವು ಅವಕಾಶ ನೀಡುವುದಿಲ್ಲ’ ಎಂದು ಘೋಷಣೆಗಳನ್ನು ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್, ‘ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರದ ಯೋಜನೆಯ ಅನುಷ್ಠಾನಕ್ಕೆ ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಸಭೆ ಬಳಿಕ ಮಾತನಾಡಿರುವ ಸಚಿವ ಎಚ್.ಕೆ. ಪಾಟೀಲ ಅವರು ಯೋಜನೆ ಜಾರಿಗಾಗಿ ಕೆಲವು ಸರ್ಕಾರಿ ಶಾಲೆಗಳನ್ನು ಮುಚ್ಚಬೇಕಾಗುತ್ತದೆ ಎಂದಿದ್ದಾರೆ’ ಎಂದರು.
‘ಸರ್ಕಾರದ ಅ. 15ರ ಆದೇಶದ ಪ್ರಕಾರ, ಈ ಶಾಲೆಗಳು ವ್ಯವಸ್ಥೆಯು ಹೊರಗುತ್ತಿಗೆಯಿಂದ ನಡೆಯಬೇಕು, ತಮ್ಮ ಆದಾಯವನ್ನು ತಾವೇ ಸೃಷ್ಟಿಸಿಕೊಳ್ಳಬೇಕು ಎಂದಿದೆ. ಮಂಡ್ಯದಲ್ಲಿರುವ ಕೆಪಿಎಸ್ ಶಾಲೆಗೆ ಬರುವ ಮಕ್ಕಳು ತಿಂಗಳಿಗೆ ₹4,800 ಕೊಟ್ಟು ಬಸ್‌ಗಳಲ್ಲಿ ಶಾಲೆಗೆ ಬರಬೇಕು. ಹೊಂಗನೂರಿನ ಶಾಲೆಗೂ ಇದೇ ಗತಿ ಬರಲಿದೆ. ಸರ್ಕಾರಿ ಶಾಲೆಗಳು ನಮ್ಮ ಹಕ್ಕು. ಸರ್ಕಾರ ಅವುಗಳನ್ನು ಮುಚ್ಚಬಾರದು’ ಎಂದು ಆಗ್ರಹಿಸಿದರು.
ಸಂತೆ ಮೊಗೆನಹಳ್ಳಿಯ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ‘ಮೂರು ತಿಂಗಳಿಂದ ನಮ್ಮೂರಿಗೆ ಶಾಲೆ ಮುಚ್ಚಬೇಕೆಂಬ ಆದೇಶವನ್ನು ಶಿಕ್ಷಣ ಇಲಾಖೆ ಕಳಿಸಿದೆ. ಇದುವರೆಗೆ ನಮ್ಮೂರಿಗೆ ಬಾರದ ಅಧಿಕಾರಿಗಳು ತಿಂಗಳ ಹಿಂದೆ ಬಂದು, ನಿಮ್ಮ ಮಕ್ಕಳನ್ನು ಹೊಂಗನೂರಿನ ಮ್ಯಾಗ್ನೆಟ್ ಶಾಲೆಗೆ ಕಳಿಸಬೇಕು ಎಂದು ಒತ್ತಾಯಿಸಿದರು’ ಎಂದು ಹೇಳಿದರು.
‘ಸಮುದಾಯದತ್ತ ಶಾಲೆ ಎಂದು ಹೇಳಿ, ಇದೀಗ ಸಮುದಾಯವನ್ನು ಶಿಕ್ಷಣದಿಂದಲೇ ದೂರ ಮಾಡಲು ಹೊರಟಿದ್ದಾರೆ. ಹೊಂಗನೂರಿಗೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ, ಪೋಷಕರೇ ₹750 ಕೊಟ್ಟು ಮಕ್ಕಳನ್ನು ಬಸ್‌ಗಳಲ್ಲಿ ಕಳಿಸುತ್ತಿದ್ದಾರೆ. ಕಡ್ಡಾಯ ಪ್ರಾಥಮಿಕ ಶಿಕ್ಷಣ ಎಂದು ಹೇಳಿ, ಅದೇ ಮಕ್ಕಳಿಂದ ಶಿಕ್ಷಣ ಕಸಿಯುತ್ತಿದ್ದಾರೆ. ನಮಗೆ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಬೇಡ. ಏನೇ ಆದರೂ ನಮ್ಮೂರ ಸರ್ಕಾರಿ ಶಾಲೆ ಮುಚ್ಚಲು ನಾವು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
ಈ ಸಭೆಯ ಅಧ್ಯಕ್ಷತೆಯನ್ನು ಅಪೂರ್ವ, AIDSO ರಾಜ್ಯ ಉಪಾಧ್ಯಕ್ಷರು ವಹಿಸಿಕೊಂಡಿದ್ದರು. AIDSO ಬೆಂಗಳೂರು ದಕ್ಷಿಣ ಎಲ್ಲಾ ಸಂಚಾಲಕರಾದ, ರೋಹಿತ್, ಪ್ರಾಸ್ತಾವಿಕ ನುಡಿಯನ್ನು ಮಂಡಿಸಿದರು. ಬಹಿರಂಗ ಪ್ರತಿಭಟನಾ ಸಭೆಯಲ್ಲಿ AIDSO ಕರ್ನಾಟಕ ರಾಜ್ಯ ಅಧ್ಯಕ್ಷರಾದ ಅಶ್ವಿನಿ. ಕೆ. ಎಸ್, AIDSO ಬೆಂಗಳೂರು ಜಿಲ್ಲಾ ಕಾರ್ಯದರ್ಶಿಗಳಾದ ಕಲ್ಯಾಣ್ ಕುಮಾರ್. ವಿ ಉಪಸ್ಥಿತರಿದ್ದರು, ಹಲವು ರೈತ ಕನ್ನಡಪರ ಹಾಗೂ ಎಸ್ ಟಿ ಎಂ ಸಿ ಸಂಘಟನೆಗಳು ಬೆಂಬಲಿಸಿದರು.
ಪ್ರತಿಭಟನಾ ಸಭೆ ನಂತರ ಸಂಘಟನೆಯ ಪ್ರಮುಖರು ರಾಮನಗರದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಬಂದು ಯಶವಂತ್ ವಿ. ಗುರುಕರ್ ಅವರಿಗೆ ಮನವಿ ಸಲ್ಲಿಸಿದರು. ಹೊಂಗನೂರಿನ ಕೆಪಿಎಸ್ ಮ್ಯಾಗ್ನೆಟ್ ಶಾಲೆಯಿಂದಾಗಿ, ಸುತ್ತಲಿನ ಶಾಲೆಗಳು ಶಾಶ್ವತವಾಗಿ ಮುಚ್ಚಲಿದ್ದು ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ. ಹಾಗಾಗಿ, ಈ ಯೋಜನೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಸಂಘಟನೆ ರಾಜ್ಯಾಧ್ಯಕ್ಷೆ ಕೆ.ಎಸ್. ಅಶ್ವಿನಿ, ಉಪಾಧ್ಯಕ್ಷೆ ಅಪೂರ್ವ, ಜಿಲ್ಲಾ ಸಂಚಾಲಕ ರೋಹಿತ್, ಜಿಲ್ಲಾ ಕಾರ್ಯದರ್ಶಿ ವಿ. ಕಲ್ಯಾಣ್ ಕುಮಾರ್, ರೈತ ಸಂಘಟನೆ ಮುಖಂಡ ಎಚ್.ಪಿ. ಶಿವಪ್ರಕಾಶ್, ರೈತ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಎಸ್‌ಡಿಎಂಸಿ ಪದಾಧಿಕಾರಿಗಳು ಇದ್ದರು.
ರೈತರು ಕಾರ್ಮಿಕರು ದಿನಗೂಲಿ ಮಾಡುವವರು ಕಷ್ಟಪಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಈ ಶಾಲೆಗಳನ್ನು ಮುಚ್ಚಿದರೆ ಆ ಮಕ್ಕಳ ಗತಿ ಏನು? ಸರ್ಕಾರಿ ಶಾಲೆ ಮುಚ್ಚಲು ಬಿಡಬಾರದು– ಎಚ್. ಪಿ. ಶಿವಪ್ರಕಾಶ್ ಐಐಕೆಕೆಎಂಎಸ್ ಮುಖಂಡ
ಸರ್ಕಾರಿ ಶಾಲೆ ಉಳಿಸಬೇಕು’
‘ಎಲ್ಲಾ ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡಿರುವ ಸರ್ಕಾರ ಇದೀಗ ಗ್ರಾಮಗಳ ಮಟ್ಟದಲ್ಲಿ ಉಳಿದುಕೊಂಡಿರುವ ಶಾಲೆಗಳಿಗೂ ಬೀಗ ಹಾಕಲು ಮುಂದಾಗಿದೆ. ಈ ಮ್ಯಾಗ್ನೆಟ್ ಶಾಲೆಗಳು ಅಸ್ತಿತ್ವಕ್ಕೆ ಬಂದರೆ ಮುಂದೆ ಬಡವರ ಮಕ್ಕಳಿಗೆ ಶಿಕ್ಷಣವು ಕನಸಿನ ಮಾತಾಗುತ್ತದೆ. ಕಳೆದ 2 ತಿಂಗಳ ಹಿಂದೆ ಎಐಡಿಎಸ್‌ಒ ಸಂಘಟನೆಯಿಂದ ಸಾರ್ವಜನಿಕ ಶಿಕ್ಷಣ ಉಳಿಸಲೆಂದೇ 50 ಲಕ್ಷ ಸಹಿ ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆಗ ಒಂದೇ ಒಂದು ಶಾಲೆಯನ್ನು ಮುಚ್ಚುವುದಿಲ್ಲ ಎಂದು ಮಾತು ಕೊಟ್ಟಿದ್ದ ಸರ್ಕಾರ ಈಗ ಯೋಜನೆಯನ್ನು ತಂದಿದೆ. ಸರ್ಕಾರಿ ಶಾಲೆಗಳಿಗೆ ಮಾರಕವಾಗಿರುವ ಈ ಯೋಜನೆಯನ್ನು ಸರ್ಕಾರ ರದ್ದುಪಡಿಸಿ ಶಾಲೆಗಳನ್ನು ಉಳಿಸಬೇಕು’ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಎಂ. ಉಮಾದೇವಿ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.