
ಕನಕಪುರ: ಎಸ್.ಕರಿಯಪ್ಪ ಕೃಷಿ ಕಾಲೇಜು ವತಿಯಿಂದ ಆಯೋಜಿಸಿದ್ದ ಪ್ರಥಮ ವರ್ಷದ ಕೃಷಿ ಮೇಳ ಭಾನುವಾರ ಮುಕ್ತಾಯಗೊಂಡಿತು.
ಎರಡು ದಿನಗಳ ಕಾಲ ನಡೆದ ಕೃಷಿ ಮೇಳದಲ್ಲಿ ತಾಲ್ಲೂಕು ಸೇರಿದಂತೆ ಜಿಲ್ಲೆಯಾದ್ಯಂತ ಸಾವಿರಾರು ರೈತರು, ಕೃಷಿ ಆಸಕ್ತರು, ವಿದ್ಯಾರ್ಥಿಗಳು, ಯುವ ರೈತರು, ಮಹಿಳೆಯರು ಪಾಲ್ಗೊಂಡು ಕೃಷಿ ಮೇಳದ ಲಾಭ ಪಡೆದರು.
150ಕ್ಕೂ ಹೆಚ್ಚು ಮಳಿಗೆ ವ್ಯವಸ್ಥೆ ಮಾಡಲಾಗಿತ್ತು. ಕೃಷಿಗೆ ಸಂಬಂಧಿಸಿದಂತೆ ಅಲಸಂದೆ, ಶೇಂಗಾ ವಿವಿಧ ತಳಿಯ ದೀರ್ಘಾವಧಿ, ಅಲ್ಪಾವಧಿ ಮಧ್ಯಮಾವಧಿ ಭತ್ತ, ರಾಗಿ ವಿವಿಧ ತಳಿಯ ಬಿತ್ತನೆ ಬೀಜಗಳ ಪ್ರದರ್ಶನ ಮತ್ತು ಮಾರಾಟ ಮತ್ತು ಪ್ರದರ್ಶನ ವ್ಯವಸ್ಥೆ ಮಾಡಲಾಗಿತ್ತು.
ರೈತರು ಸೇರಿದಂತೆ ಸಾರ್ವಜನಿಕರು ಮಳಿಗೆಗಳಿಗೆ ಭೇಟಿ ನೀಡಿ ಬೀಜೋಪಚಾರ, ಗೊಬ್ಬರ, ಸಸ್ಯಪಾಲನೆ, ಬೀಜ, ನೀರಾವರಿ, ಬಿತ್ತನೆ ಬೀಜಗಳ ಮಾಹಿತಿ ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಪದ್ಧತಿ, ಹೊಸ ಆವಿಷ್ಕಾರ, ಹೊಸ ಸಂಶೋಧನೆಗಳ ಬಗ್ಗೆ ಕೃಷಿ ಜ್ಞಾನ ಪಡೆದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿದರು.
ಕೃಷಿ ಮೇಳದಲ್ಲಿ ನಾಟಿ ತಳಿಯ ಹಸು, ಕುರಿ, ಮೇಕೆ, ಪ್ರದರ್ಶನ ನಡೆಯಿತು. ಕೃಷಿಗೆ ಸಂಬಂಧಿಸಿದ ಯಂತ್ರೋಪಕರಣ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಟ್ರ್ಯಾಕ್ಟರ್‌ನಲ್ಲಿ ವಿವಿಧ ಬಗೆ ನೇಗಿಲು, ಕಳೆ ತೆಗೆಯುವ ಯಂತ್ರ, ಔಷಧ ಸಿಂಪಡಿಸುವ ಯಂತ್ರ, ಹನಿ ನೀರಾವರಿಗೆ ಬಳಸುವ ಪೈಸ್ ಸೇರಿದಂತೆ ವಿವಿಧ ಯಂತ್ರಗಳ ಮಾರಾಟ ಮಳಿಗೆಗೆ ರೈತರು ಭೇಟಿ ನೀಡಿ ಯಂತ್ರಗಳ ಉಪಯೋಗ ಮತ್ತು ಮಾಹಿತಿ ಪಡೆದರು.
ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ಹೆಚ್ಚು ಪೌಷ್ಟಿಕಾಂಶ ಇರುವ ತರಕಾರಿ, ಸೊಪ್ಪು ಧಾನ್ಯ ಮತ್ತು ಆಹಾರ ಪ್ರದರ್ಶನ ಮಾಡಲಾಯಿತು. ರಾಗಿಯಿಂದ ತಯಾರಿಸಿದ ಬಿಸ್ಕೆಟ್, ವಿವಿಧ ಆಹಾರ ಪದಾರ್ಥಗಳು ಜೋಳದಿಂದ ತಯಾರಿಸಿದ ಚಿಪ್ಸ್ ಮತ್ತೆ ಸಾಲು ಸಾಲು ಮಳಿಗೆಗಳಿಗೆ ಜನರು ಭೇಟಿ ನೀಡಿ ಅದರ ಪ್ರಯೋಜನ ಮತ್ತು ಮಾಹಿತಿ ಪಡೆದರು.
ಕೃಷಿ, ಕೃಷಿಯೇತರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಕೃಷಿ ಮೇಳದಲ್ಲಿ ಕಂಡು ಬಂತು. ಮಕ್ಕಳಿಗೆ ವಿವಿಧ ಬಗೆ ಪುಸ್ತಕ, ರೇಷ್ಮೆಗೂಡಿನಿಂದ ತಯಾರಿಸಿದ ಹಾರ ಮತ್ತು ಅಲಂಕಾರಿಕ ವಸ್ತುಗಳು ಸಾರ್ವಜನಿಕರ ಗಮನ ಸೆಳೆದವು.
ಸೌಂದರ್ಯ ವರ್ಧಕ, ಮಸಾಲೆ ಪದಾರ್ಥ, ನಿತ್ಯೋಪಯೋಗಿ ವಸ್ತು, ಮಾರಾಟ ಮತ್ತು ಪ್ರದರ್ಶನ ಸೇರಿದಂತೆ ವೈವಿಧ್ಯಮ ಮಳಿಗೆಗಳು ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆಯಿತು.
ನರ್ಸರಿಯಲ್ಲಿ ವಿವಿಧ ಬಗೆ ಹೂವು–ಹಣ್ಣು, ತರಕಾರಿ ಗಿಡ ಮಹಿಳೆಯರನ್ನು ಆಕರ್ಷಿಸಿತು. ಸೇಬು, ಬಟರ್ ಫ್ರೂಟ್, ದಾಳಿಂಬೆ, ಕಿತ್ತಳೆ, ಸೀಬೆ ಹಣ್ಣು, ಚೆರ್ರಿ, ಹಣ್ಣಿನ ಗಿಡಗಳು ಸೇರಿದಂತೆ ಮೆಣಸಿನಕಾಯಿ, ಟೊಮೆಟೊ ಪ್ರದರ್ಶನ ಮತ್ತು ಮಾರಾಟ ಮಳಿಗೆ ವ್ಯವಸ್ಥೆಯೂ ಇತ್ತು.
ಕೃಷಿ ಮೇಳದಲ್ಲಿ ಫಲಪುಷ್ಪ ಪ್ರದರ್ಶನ ಹೆಚ್ಚು ಗಮನ ಸೆಳೆಯಿತು. ವಿವಿಧ ಬಗೆ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಹಳದಿ ಮತ್ತು ಬಿಳಿ ಹಾಗೂ ವಿವಿಧ ಬಗೆ ಹೂಗಳಿಂದ ಪೂರ್ಣ ಕುಂಭ ಕಳಸ, ಹಸಿರು ಬಣ್ಣದಿಂದ ಮರದ ಸೊಪ್ಪಿನಿಂದ ಆನೆ ಆಕೃತಿ ಚಿತ್ರಗಳು ಜನರನ್ನು ಆಕರ್ಷಿಸಿತು.
ವಿಶೇಷ ತಳಿ ಹಸು, ಎಮ್ಮೆ, ಕುರಿ ಕೃಷಿ ಮೇಳದಲ್ಲಿ ಹೆಚ್ಚು ಆಕರ್ಷಣೀಯವಾಗಿತ್ತು. ಮಹಿಳೆಯರು, ಮಕ್ಕಳು ಯುವಕರು ಹಾಗೂ ಸಾರ್ವಜನಿಕರು ಅವುಗಳ ಮುಂದೆ ನಿಂತು ಸೆಲ್ಫಿ ತೆಗೆಸಿಕೊಂಡರು.
ಕೃಷಿ ಮೇಳದಲ್ಲಿ ಸಚಿವ ರಾಮಲಿಂಗಾ ರೆಡ್ಡಿ, ಸಂಸದ ಡಾ.ಸಿ.ಎನ್.ಮಂಜುನಾಥ್, ಶಾಸಕರಾದ ಇಕ್ಬಾಲ್ ಹುಸೇನ್, ಎಸ್.ರವಿ, ಸುಧಾಮದಾಸ್ ಕೃಷಿ ಮೇಳದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.