ರಾಮನಗರ: ‘ಬೆಂಗಳೂರು ನಗರಾಭಿವೃದ್ಧಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಬದಲಾವಣೆ ಮಾಡಲು ಮುಂದಾಗಿರುವುದರ ಹಿಂದೆ ಸ್ವಹಿತಾಸಕ್ತಿ ಅಡಗಿದೆ’ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಲ್. ಜೀವನ್ ಆಕ್ರೋಶ ವ್ಯಕ್ತಪಡಿಸಿದರು.
‘ಹೆಸರು ಬದಲಾವಣೆ ಪ್ರಸ್ತಾಪವು ಮೂರ್ಖತನದ ನಡೆಯಾಗಿದೆ. ಹೆಸರನ್ನು ಬದಲಾಯಿಸುವುದರಿಂದ ಜಿಲ್ಲೆಯ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ. ಇವರು ಹೇಳುವಂತೆ ಅಭಿವೃದ್ಧಿ ಹೆಬ್ಬಾಗಿಲು ತೆರೆಯುವುದಿಲ್ಲ. ಬದಲಿಗೆ, ಕೆಲವೇ ರಿಯಲ್ ಎಸ್ಟೇಟ್ ಕುಳಗಳಿಗೆ ಅನುಕೂಲವಾಗುತ್ತದೆ’ ಎಂದು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಜಿಲ್ಲೆ ಹೆಸರು ಬದಲಾವಣೆಯಾದರೆ ರೈತರ ಜಮೀನಿಗೆ ಹೆಚ್ಚಿಗೆ ಬೆಲೆ ಬರುತ್ತದೆ ಎಂದು ಡಿಸಿಎಂ ಅಂದುಕೊಂಡಿದ್ದಾರೆ. ಅದು ಸುಳ್ಳು. ಬದಲಾವಣೆಯಿಂದ ಡಿಕೆಶಿ ಅವರ ವ್ಯವಹಾರ ಮತ್ತು ಉದ್ಯಮ ಬೆಳವಣಿಗೆಗೆ ಅನುಕೂಲವಾಗಲಿದೆ ಅಷ್ಟೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ಇದ್ದರೆ, ತಮ್ಮ ಅಧಿಕಾರ ಬಳಸಿಕೊಂಡು ರಾಮನಗರ ಹೆಸರಿನಲ್ಲೇ ಅಭಿವೃದ್ಧಿ ಮಾಡಲಿ’ ಎಂದರು.
‘ಹೆಸರು ಬದಲಾವಣೆ ಬದಲು ಜಿಲ್ಲೆಯಲ್ಲಿ ಬೇರು ಬಿಟ್ಟಿರುವ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತಕ್ಕೆ ಕಡಿವಾಣ ಹಾಕಲಿ. ದಕ್ಷ ಮತ್ತು ಪಾರದರ್ಶಕ ಆಡಳಿತದೊಂದಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಿ. ಅಗತ್ಯ ಕಚೇರಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ನೇಮಕ ಮಾಡಲಿ. ನೀರಾವರಿ ಸೇರಿದಂತೆ ವಿವಿಧ ಯೋಜನೆಗಳಿಗೆ ಅನುದಾನ ತರಲಿ. ಆಗ ಜಿಲ್ಲೆಯು ತಾನಾಗೇ ಅಭಿವೃದ್ಧಿ ಪಥದಲ್ಲಿ ಸಾಗಲಿದೆ’ ಎಂದು ಹೇಳಿದರು.
‘ಡಿಸಿಎಂ ಪ್ರಸ್ತಾಪವನ್ನು ಕೆಆರ್‌ಎಸ್ ಪಕ್ಷ ವಿರೋಧಿಸುತ್ತದೆ. ಜಿಲ್ಲೆಯ ಜನರ ಭಾವನೆಗಳಿಗೆ ಧಕ್ಕೆ ತರುವ ಇಂತಹ ಪ್ರಸ್ತಾವವನ್ನು ಮುಖ್ಯಮಂತ್ರಿ ಮತ್ತು ಸಚಿವ ಸಂಪುಟ ತಿರಸ್ಕರಿಸಬೇಕು. ರಾಮನಗರ ಎಂಬ ಜಿಲ್ಲೆಯ ಅಸ್ಮಿತೆಯನ್ನು ಹಾಗೆಯೇ ಉಳಿಯುವಂತೆ ಮಾಡಬೇಕು. ಮರು ನಾಮಕರಣದ ಹೆಸರಿನಲ್ಲಿ ಅನಗತ್ಯ ಸಮಸ್ಯೆಗಳನ್ನು ಸೃಷ್ಟಿಗೆ ಅವಕಾಶ ಮಾಡಿಕೊಡಬಾರದು’ ಎಂದು ಆಗ್ರಹಿಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಕಿರಣ್ ಎಚ್., ಮಹಮ್ಮದ್ ಮುಸಾದಿಕ್ ಪಾಷಾ, ಲಿಯಾಖತ್ ಅಲಿ, ರೆಹಮತ್ ಪಾಷಾ ಹಾಗೂ ರಘುನಂದನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.