ಚನ್ನಪಟ್ಟಣ: ಮಾನವೀಯ ಮೌಲ್ಯಗಳ ಮಹಾಪರ್ವವಾಗಿರುವ ‘ಕುಮಾರವ್ಯಾಸ ಭಾರತ’ ಕಾವ್ಯವನ್ನು ಗಮಕ ವಾಚನದ ಮೂಲಕ ಸಾಮಾನ್ಯ ಜನರಿಗೆ ತಲುಪಿಸಬೇಕಿದೆ ಎಂದು ಸಂಸ್ಕೃತಿ ಚಿಂತಕಿ ವಿನೋದಮ್ಮ ಅಭಿಪ್ರಾಯಪಟ್ಟರು.
ನಗರದ ಕುವೆಂಪುನಗರದಲ್ಲಿ ಬೊಂಬೆನಾಡು ಗಮಕ ಪರಂಪರಾ ಸಂಸ್ಕೃತಿ ಟ್ರಸ್ಟ್‌ನಿಂದ ಈಚೆಗೆ ನಡೆದ ಕುಮಾರವ್ಯಾಸ ಭಾರತದ ‘ವಿರಾಟ ಪರ್ವ’ ಸಂಧಿ ಭಾಗದ ಗಮಕವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಮಾರವ್ಯಾಸನ ‘ಕರ್ಣಾಟ ಭಾರತ ಕಥಾಮಂಜರಿ’ ಹಾಡುಗಬ್ಬ ಹಾಗೂ ಕೇಳುಗಬ್ಬದಲ್ಲಿ ರಚನೆಯಾಗಿದೆ. ಮಾನವ ಸಹಜ ಗುಣದೋಷಗಳಿಂದ ಕೂಡಿದ ಪಾತ್ರಗಳು ಜನಸಾಮಾನ್ಯರಿಗೆ ಹತ್ತಿರವಾಗಿವೆ. ಇಂತಹ ಕೃತಿಗಳ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವುದು ಅವಶ್ಯಕ ಎಂದರು.
ಟ್ರಸ್ಟ್ ಅಧ್ಯಕ್ಷ ಪುಟ್ಟಸ್ವಾಮಿಗೌಡ ಮಾತನಾಡಿ, ಕುಮಾರವ್ಯಾಸನ ಕಾವ್ಯ ಕಲಿತವರ ಪಾಲಿಗೆ ಕಲ್ಪತರು. ಕಲಿಯದವರ ಪಾಲಿಗೆ ಕಾಮಧೇನು. ಗಮಕವಾಚನ ಮತ್ತು ವ್ಯಾಖ್ಯಾನವಾದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಪ್ರತಿ ಮನೆಗೆ ಕುಮಾರವ್ಯಾಸಭಾರತವನ್ನು ಕೊಂಡೊಯ್ಯಲಾಗುವುದು ಎಂದರು.
ಟ್ರಸ್ಟ್ ಕಾರ್ಯದರ್ಶಿ ವಸಂತ ಕುಮಾರ್ ಮಾತನಾಡಿದರು. ನಿವೃತ್ತ ಉಪನ್ಯಾಸಕ ಪುಟ್ಟಸ್ವಾಮಿಗೌಡ ವಿರಾಟಪರ್ವ ಸಂಧಿಯ ಪದ್ಯಭಾಗಗಳನ್ನು ವಾಚಿಸಿದರು. ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ವ್ಯಾಖ್ಯಾನ ನೀಡಿದರು.
ಟ್ರಸ್ಟ್ ಸಂಚಾಲಕ ಸಿ.ಕೆ. ಯೋಗಾನಂದ, ಮಮತಾ, ಕರಿಯಪ್ಪ, ರವಿಕುಮಾರ್ ಗೌಡ, ವಿ.ಟಿ.ರಮೇಶ್, ಬಸವರಾಜು, ಆಶಾಲತಾ, ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ, ಟಿ.ಎನ್. ದೇವರಾಜ್, ಎಂ.ಎನ್. ಕೃಷ್ಣಕುಮಾರ್, ಗುರುಮಾದಯ್ಯ, ಕೂರಣಗೆರೆ ಕೃಷ್ಣಪ್ಪ, ಬೆಸ್ಕಾಂ ಶಿವಲಿಂಗಯ್ಯ, ಧರಣೀಶ್ ರಾಂಪುರ, ಪದ್ಮಾವತಿ ವೆಂಕಟಾಚಲ, ಧನಂಜಯ, ರಾಮಚಂದ್ರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.