ADVERTISEMENT

ಬ್ಲ್ಯಾಕ್‌ಮೇಲ್‌ಗೆ ಹೆದರಿ ಪತಿ ಆತ್ಮಹತ್ಯೆ: ಪತ್ನಿ ದೂರು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 16:22 IST
Last Updated 20 ಮಾರ್ಚ್ 2024, 16:22 IST

ಕನಕಪುರ: ಅಪರಿಚಿತ ವ್ಯಕ್ತಿಯೊಬ್ಬರ ಬ್ಲ್ಯಾಕ್‌ಮೇಲ್‌ನಿಂದ ಹೆದರಿ ನನ್ನ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಈಚೆಗೆ ಅರ್ಕಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಮುತ್ತುರಾಜು ಅವರ ಪತ್ನಿ ಶಿಲ್ಪಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ಪತಿ ಮುತ್ತುರಾಜು ಅವರಿಗೆ ಮಾರ್ಚ್ 9ರಂದು ಅಪರಿಚಿತ ವ್ಯಕ್ತಿಯೊಬ್ಬರ ಮೊಬೈಲ್‌ನಿಂದ ಕರೆ ಬಂದಿತ್ತು. ಕರೆ ಮಾಡಿದ್ದ ವ್ಯಕ್ತಿ ಪತಿಗೆ ತಮ್ಮಬಳಿ ಇರುವ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತೇನೆ. ಅದನ್ನು ತಡೆಯಬೇಕಾದರೆ ಹಣ ನೀಡಬೇಕೆಂದು ಬೆದರಿಕೆ ಒಡ್ಡಿದ್ದ. ಅಷ್ಟೇ ಅಲ್ಲ, ಆಡಿಯೊ ವಾಯ್ಸ್ ಮೆಸೇಜ್ ಕೂಡಾ ಕಳಿಸಿದ್ದ’ ಎಂದೂ ಶಿಲ್ಪಾ ಮಂಗಳವಾರ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ತಮ್ಮ ಬಾಮೈದುನನ ಜೊತೆಗೆ ಜೀಪಿನಲ್ಲಿ ಅರ್ಕಾವತ್ ಸೇತುವೆ ಬಳಿ ಮುತ್ತುರಾಜು ತೆರಳಿದ್ದರು. ಅದೇ ವೇಳೆ ಅಪರಿಚಿತ ವ್ಯಕ್ತಿಯ ಮೆಸೇಜ್ ನೋಡಿ ಪುನಃ ಅವರಿಗೆ ಕರೆ ಮಾಡಿದ್ದಾರೆ. ಇದೇ ರೀತಿಯ ಕಿರುಕುಳ ಕೊಟ್ಟರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ಅಪರಿಚಿತ ವ್ಯಕ್ತಿಯು ನೀನು ಸತ್ತರೆ ನನಗೇನೂ ನಷ್ಟವಿಲ್ಲ. ನಾನು ಆ ಮಾಹಿತಿಯನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಬಾರದು ಎಂದರೆ ನೀನು ನನಗೆ ಹಣ ಕಳಿಸು, ಇಲ್ಲವೇ ಸಾಯಿ ಎಂದು ಹೇಳಿದ್ದಾನೆ. ಆ ವ್ಯಕ್ತಿಯ ಕಿರುಕುಳ ತಾಳಲಾರದೇ ಪತಿ ಮುತ್ತುರಾಜು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಅವರು ದೂರಿದ್ದಾರೆ.

ADVERTISEMENT

ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.