ರಾಮನಗರ: ಕೆರೆಗಳು ನೀರಿನ ಸೆಲೆಗಳು. ಕುಡಿಯುವುದಕ್ಕೆ, ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗಾಗಿ ನಿರ್ಮಿಸಿರುವ ಕೆರೆಗಳ ಗಾತ್ರ ದಿನದಿಂದ ದಿನಕ್ಕೆ ಕುಗ್ಗುತ್ತಿದೆ. ಮನುಷ್ಯನ ಭೂ ದಾಹಕ್ಕೆ ಕೆರೆಗಳು ಸಹ ಒತ್ತುವರಿಯಾಗುತ್ತಿವೆ.
ಅದೇ ರೀತಿ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿರುವ ಒಟ್ಟು 1,475 ಕೆರೆಗಳ ಪೈಕಿ 841 ಕೆರೆಗಳ ಒಟ್ಟು 1,174 ಎಕರೆ ಕರೆ ಪ್ರದೇಶವು ಒತ್ತುವರಿಯಾಗಿದೆ. ಸಾರ್ವಜನಿಕ ಬಳಕೆಯ ಕೆರೆಗಳನ್ನು ಒತ್ತುವರಿ ಮಾಡಿರುವವರ ವಿರುದ್ದ ಜಿಲ್ಲಾಡಳಿತ ಸಮರ ಸಾರಿದೆ.
ಕೆರೆಗಳನ್ನು ಅಳತೆ ಮಾಡಿ ಒತ್ತುವರಿಯಾಗಿರುವ ಪ್ರದೇಶವನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದೆ. ಒತ್ತುವರಿಯಾಗಿರುವ ಕೆರೆಗಳ ಪೈಕಿ ಇದುವರೆಗೆ 58 ಕೆರೆಗಳ 131 ಎಕರೆಯನ್ನು ತೆರವುಗೊಳಿಸಿದೆ. ಆ ಮೂಲಕ, ನೀರಿನ ಮೂಲಗಳಾದ ಕೆರೆಗಳನ್ನು ರಕ್ಷಿಸಿ ಮುಂದಿನ ತಲೆಮಾರಿಗೆ ಉಳಿಸುವ ಕೆಲಸಕ್ಕೆ ಕೈ ಹಾಕಿದೆ.
2023ರಿಂದಲೇ ಸರ್ವೆ: ಒತ್ತುವರಿಯಾಗಿರುವ ಕೆರೆಗಳ ಸರ್ವೆ ಹಾಗೂ ತೆರವು ಕಾರ್ಯಕ್ಕೆ 2023ರಲ್ಲಿ ಅಂದಿನ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಕ್ರಿಯಾಯೋಜನೆ ರೂಪಿಸಿ ಚಾಲನೆ ನೀಡಿದ್ದರು. ಭೂ ಮಾಪನ ಇಲಾಖೆಯ ಸುಮಾರು 130 ಅಧಿಕಾರಿಗಳ ತಂಡ ನಾಲ್ಕೈದು ತಿಂಗಳು ಶ್ರಮ ವಹಿಸಿ ಕೆರೆಗಳನ್ನು ಸರ್ವೆ ಮಾಡಿ ಒತ್ತುವರಿ ಗುರುತಿಸಿತ್ತು.
‘ಒತ್ತುವರಿಯಾಗಿರುವ ಬಹುತೇಕ ಕೆರೆಗಳ ಪ್ರದೇಶವು ಅಕ್ಕಪಕ್ಕದ ಜಮೀನುಗಳಿಗೆ ಹೊಂದಿಕೊಂಡಂತಿದೆ. ಮಳೆ ಕೊರತೆಯಿಂದಾಗಿ ನೀರು ಕಡಿಮೆಯಾಗಿದ್ದರಿಂದ ಪಕ್ಕದ ಜಮೀನುಗಳ ಮಾಲೀಕರು ಕೆರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಜಿಲ್ಲಾ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಬಿ.ಆರ್. ಹನುಮೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ತೆರವು ಚುರುಕು: ಕೆರೆಗಳ ಒತ್ತುವರಿ ಗುರುತಿಸಲು ಹಿಂದಿನ ಜಿಲ್ಲಾಧಿಕಾರಿ ಚಾಲನೆ ನೀಡಿದ ಕೆಲವೇ ತಿಂಗಳಲ್ಲಿ ವರ್ಗಾವಣೆಯಾದರು. ಅವರ ಜಾಗಕ್ಕೆ ಬಂದ ಯಶವಂತ್ ವಿ. ಗುರುಕರ್ ಅವರು, ಒತ್ತುವರಿ ಕೆರೆಗಳ ಕುರಿತು ಭೂ ಮಾಪನ ಇಲಾಖೆ ನೀಡಿದ್ದ ವರದಿ ಆಧರಿಸಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
‘ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂಚೆ ಆಯಾ ತಾಲ್ಲೂಕಿನ ತಹಶೀಲ್ದಾರ್ ಅವರು ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡುತ್ತಾರೆ. ನೋಟಿಸ್ ಸ್ವೀಕರಿಸಿದ ಮಾಲೀಕರು ಸ್ವಯಂ ಪ್ರೇರಣೆಯಿಂದ ಒತ್ತುವರಿ ಮಾಡಿಕೊಂಡಿರುವ ಜಾಗ ತೆರವುಗೊಳಿಸಬೇಕು. ಇಲ್ಲದಿದ್ದರೆ, ಜಿಲ್ಲಾಡಳಿತವೇ ತೆರವು ಮಾಡಲಿದೆ’ ಎಂದು ಹನುಮೇಗೌಡ ತಿಳಿಸಿದರು.
‘ತೆರವು ಕಾರ್ಯಾಚರಣೆಗಾಗಿ ತಾಲ್ಲೂಕು ಮಟ್ಟದಲ್ಲಿ ಕಂದಾಯ ಇಲಾಖೆ, ಭೂ ಮಾಪನ ಇಲಾಖೆ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿದೆ. ತಂಡವು ಜೆಸಿಬಿಯೊಂದಿಗೆ ಕೆರೆ ಇರುವ ಸ್ಥಳಕ್ಕೆ ತೆರಳಿ, ಒತ್ತುವರಿ ಪ್ರದೇಶ ತೆರವುಗೊಳಿಸಿ ಕೆರೆ ಜಾಗಕ್ಕೆ ಬೇಲಿ ಹಾಕಲಿದೆ’ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಒತ್ತುವರಿ ಆಗಿರುವ ಕೆರೆಗಳನ್ನು ಗುರುತಿಸಲಾಗಿದೆ. ಒತ್ತುವರಿದಾರರಿಗೆ ನೋಟಿಸ್ ನೀಡಿ ತೆರವು ಕಾರ್ಯಾಚರಣೆ ನಡೆಸುವುದರ ಜೊತೆಗೆ ಮುಂದೆ ಕೆರೆ ಪ್ರದೇಶವನ್ನು ಒತ್ತುವರಿ ಮಾಡದಂತೆ ಬಂದೋಬಸ್ತ್ ಮಾಡಲಾಗುತ್ತಿದೆಯಶವಂತ್ ವಿ. ಗುರುಕರ್ ಜಿಲ್ಲಾಧಿಕಾರಿ ಬೆಂಗಳೂರು ದಕ್ಷಿಣ
ಒತ್ತುವರಿಯಾಗಿರುವ ಕೆರೆ ಪ್ರದೇಶದಲ್ಲಿ ಕೆಲವರು ತೆಂಗು ಅಡಿಕೆ ಸೇರಿದಂತೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆದಿರುವುದು ಕೆರೆಗಳನ್ನು ಅಳತೆ ಮಾಡಿದ ಸಂದರ್ಭದಲ್ಲಿ ಕಂಡುಬಂದಿದೆಬಿ.ಆರ್. ಹನುಮೇಗೌಡ ಉಪ ನಿರ್ದೇಶಕ ಭೂ ದಾಖಲೆಗಳ ಇಲಾಖೆ
ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ನಡೆಸಬೇಕು. ಮುಂದೆ ಒತ್ತುವರಿಗೆ ಅವಕಾಶವಿಲ್ಲದಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ನಿಗಾ ಇಡಬೇಕುಸಿ. ಪುಟ್ಟಸ್ವಾಮಿ ರೈತ ಮುಖಂಡ ಚನ್ನಪಟ್ಟಣ
ಒತ್ತುವರಿ ಪರಿಶೀಲಿಸಿದ್ದ ಉಪ ಲೋಕಾಯುಕ್ತ
ಜಿಲ್ಲೆಯಲ್ಲಿ ಕೆರೆಗಳು ಹೆಚ್ಚಾಗಿರುವ ಚನ್ನಪಟ್ಟಣ ತಾಲ್ಲೂಕಿನಲ್ಲಿ ಕೆರೆಗಳ ಒತ್ತುವರಿ ಕುರಿತು ಬಂದಿದ್ದ ದೂರಿನ ಮೇರೆಗೆ ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಅವರು ಜುಲೈ 5ರಂದು ತಾಲ್ಲೂಕಿಗೆ ಭೇಟಿ ನೀಡಿದ್ದರು. ಶೆಟ್ಟಿಹಳ್ಳಿ ಕೆರೆ ಕುಡಿನೀರು ಕಟ್ಟೆ ಕೆರೆ ರಾಮಮ್ಮನ ಕೆರೆ ಕೂಡ್ಲೂರು ಕೆರೆಗಳ ಒತ್ತುವರಿ ಪ್ರದೇಶವನ್ನು ಖುದ್ದಿ ಪರಿಶೀಲಿಸಿದ್ದರು. ನಂತರ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಫಣೀಂದ್ರ ‘ಬಹುತೇಕ ಕೆರೆಗಳು ಒತ್ತುವರಿಯಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇದನ್ನು ಹೀಗೆಯೇ ಬಿಟ್ಟರೆ ಮುಂದೊಂದು ಕೆರೆಗಳೇ ಇಲ್ಲವಾಗುತ್ತವೆ. ಮೊದಲು ಕೆರೆಗಳ ಪ್ರದೇಶ ಎಷ್ಟಿದೆ ಎಂಬುದನ್ನು ಸರ್ವೆ ಮಾಡಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು. ಅದಕ್ಕೆ ಜಿಲ್ಲಾಧಿಕಾರಿ ತಮ್ಮ ನೇತೃತ್ವದಲ್ಲಿ ಸಮಿತಿ ರಚಿಸಿ ಕಾರ್ಯಾಚರಣೆ ನಡೆಸಬೇಕು’ ಎಂದು ಸೂಚಿಸಿದ್ದರು.
ಚನ್ನಪಟ್ಟಣದಲ್ಲೇ ಹೆಚ್ಚು ಒತ್ತುವರಿ
ಕೆರೆಗಳ ತಾಲ್ಲೂಕು ಎಂದೇ ಪ್ರಸಿದ್ದಿಯಾಗಿರುವ ಚನ್ನಪಟ್ಟಣ ತಾಲ್ಲೂಕಿನಲ್ಲೇ ಅತಿ ಹೆಚ್ಚು ಕೆರೆಗಳಿದ್ದು ಒತ್ತುವರಿಯಾಗಿರುವ ಕೆರೆಗಳ ಸಂಖ್ಯೆಯೂ ಇಲ್ಲೇ ಜಾಸ್ತಿ ಇದೆ. ತಾಲ್ಲೂಕಿನಲ್ಲಿರುವ 417 ಕೆರೆಗಳ ಪೈಕಿ 286 ಕೆರೆಗಳು ಒತ್ತುವರಿಗೆ ಒಳಗಾಗಿವೆ. ಒಟ್ಟು 390 ಎಕರೆ ಒತ್ತುವರಿದಾರರ ಪಾಲಾಗಿದೆ. ಅತಿ ಹೆಚ್ಚು ಕೆರೆಗಳಿರುವ ಎರಡನೇ ಸ್ಥಾನದಲ್ಲಿ ಕನಕಪುರ ತಾಲ್ಲೂಕು ಇದೆ. ಇಲ್ಲಿರುವ 312 ಕೆರೆಗಳ ಪೈಕಿ 135 ಕೆರೆಗಳ 162 ಎಕರೆ ಒತ್ತುವರಿಯಾಗಿದೆ. ಉಳಿದಂತೆ ಮಾಗಡಿಯಲ್ಲಿ 301 ಕೆರೆಗಳ ಪೈಕಿ 174 ಕೆರೆಗಳ 285 ಎಕರೆ ರಾಮನಗರದಲ್ಲಿ 264 ಕೆರೆಗಳ ಪೈಕಿ 143 ಕೆರೆಗಳ 198 ಎಕರೆ ಹಾಗೂ ಹಾರೋಹಳ್ಳಿ ತಾಲ್ಲೂಕಿನಲ್ಲಿ 181 ಕೆರೆಗಳ ಪೈಕಿ 103 ಕೆರೆಗಳ 138 ಎಕರೆ ಒತ್ತುವರಿಯಾಗಿದೆ ಎನ್ನುತ್ತವೆ ಜಿಲ್ಲಾಡಳಿತದ ಮೂಲಗಳು.
131 ಎಕರೆ ಒತ್ತುವರಿ ತೆರವು
ಜಿಲ್ಲೆಯಲ್ಲಿ ಒತ್ತುವರಿಯಾಗಿರುವ 841 ಕೆರೆಗಳ ಪೈಕಿ ಜಿಲ್ಲಾಡಳಿತವು ಇದುವರೆಗೆ 58 ಕೆರೆಗಳಲ್ಲಿ ಒತ್ತುವರಿ ತೆರವುಗೊಳಿಸಿದೆ. ಒತ್ತುವರಿಯಾಗಿರುವ 1174 ಎಕರೆ ಪೈಕಿ 131 ಎಕರೆಯನ್ನು ತೆರವು ಮಾಡಿದೆ. ಈ ಪೈಕಿ ರಾಮನಗರ ತಾಲ್ಲೂಕಿನ 13 ಕೆರೆಗಳ 18 ಎಕರೆ ಚನ್ನಪಟ್ಟಣದ 10 ಕೆರೆಗಳ 22 ಎಕರೆ ಮಾಗಡಿಯ 8 ಕೆರೆಗಳ 19 ಎಕರೆ ಕನಕಪುರದ 17 ಕೆರೆಗಳ 53 ಎಕರೆ ಹಾಗೂ ಹಾರೋಹಳ್ಳಿ ತಾಲ್ಲೂಕಿನ 10 ಕೆರೆಗಳ 18 ಎಕರೆ ಒತ್ತುವರಿಯನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.