ಹಾರೋಹಳ್ಳಿ: ತಾಲ್ಲೂಕಿನ ಮರಳವಾಡಿ ಭಾಗದ ಹನುಮಂತಪುರ, ಚಿಕ್ಕಮರಳವಾಡಿ, ಆನೆಹೊಸಹಳ್ಳಿ, ಕುಲುಮೆದೊಡ್ಡಿ, ಮಲ್ಲಿಗೆಮೆಟ್ಟಿಲು, ಭೈರೇಗೌಡನದೊಡ್ಡಿ ಸೇರಿದಂತೆ ಒಟ್ಟು ಎಂಟು ಕೆರೆಗಳನ್ನು ತುಂಬಿಸುವ ಯೋಜನೆಗೆ ಶನಿವಾರ ಚಾಲನೆ ನೀಡಲಾಗಿದೆ.
ಸರ್ಕಾರದ ಅನುದಾನದಿಂದ ಸಣ್ಣ ನೀರಾವರಿ ಇಲಾಖೆಯು ₹3.24ಕೋಟಿ ವೆಚ್ಚದಲ್ಲಿ ಈ ಕಾಮಗಾರಿಯನ್ನು ಕೈಗೊಂಡಿದೆ. ಬನ್ನೇರುಘಟ್ಟದಿಂದ ಹರಿಯುವ ಸುವರ್ಣಮುಖಿ ನದಿ ನೀರನ್ನು ಪೈಪ್‌ಲೈನ್ ಮೂಲಕ ಈ ಕೆರೆಗಳಿಗೆ ತುಂಬುವ ಪ್ರಕ್ರಿಯೆ ನಡೆಯುತ್ತಿದೆ.
ಮರಳವಾಡಿ ಭಾಗ ಬರಪೀಡಿತ ಪ್ರದೇಶವಾಗಿದ್ದು, ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದೆ ಮತ್ತು ಕೃಷಿ ಮಳೆಯನ್ನೇ ಅವಲಂಬಿಸಿದೆ. ಈ ಯೋಜನೆಯಿಂದ ಅಂತರ್ಜಲ ಮಟ್ಟ ಏರಿಕೆಯಾಗಿ ರೈತರ ಬೆಳೆಗಳಿಗೆ ವರ್ಷಪೂರ್ತಿ ನೀರಿನ ಲಭ್ಯತೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಹನುಮಂತಪುರದ ಕೆರೆಯಲ್ಲಿ ಪೂಜೆ ಸಲ್ಲಿಸಿ ಶನಿವಾರ ಯೋಜನೆಗೆ ಚಾಲನೆ ನೀಡಿದರು.
ಇದೇ ಸಮಯದಲ್ಲಿ ತಾಲೂಕಿನ 181 ಕೆರೆಗಳಲ್ಲಿ 77 ಕೆರೆಗಳ 91 ಎಕರೆ 14 ಗುಂಟೆ ಜಾಗವನ್ನು ಒತ್ತುವರಿದಾರರು ಆಕ್ರಮಿಸಿಕೊಂಡಿದ್ದಾರೆ ಎಂದು ಆರೋಪವಿದೆ. ಶತಮಾನಗಳ ಇತಿಹಾಸ ಹೊಂದಿರುವ ಈ ಕೆರೆಗಳು ಆಕ್ರಮಣದಿಂದ ಹಾನಿಗೊಳಗಾಗಿದ್ದು, ತಾಲ್ಲೂಕು ಆಡಳಿತ ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಕೆರೆಗಳನ್ನು ಅಭಿವೃದ್ಧಿಪಡಿಸಬೇಕೆಂಬ ಒತ್ತಾಯವನ್ನು ಸಾರ್ವಜನಿಕರು ಮತ್ತು ಸಾಮಾಜಿಕ ಕಾರ್ಯಕರ್ತರು ಮಾಡಿದ್ದಾರೆ.
ಕೆರೆಗಳಿಗೆ ನೀರು ತುಂಬಿಸುವುದರಿಂದ ಜನ ಜಾನುವಾರುಗಳಿಗೆ ಉಪಯೋಗವಾಗಲಿದೆ. ಶಾಸಕರು ಮುತುವರ್ಜಿ ವಹಿಸಿ ಕೆರೆ ತುಂಬಿಸುವ ಕೆಲಸ ಮಾಡಿದ್ದಾರೆನವೀನ್ ಕುಮಾರ್ ಮರಳವಾಡಿ ನಿವಾಸಿ
ರೈತರಿಗೆ ಅನುಕೂಲ ಶಾಸಕರು ಕೆರೆಗಳಿಗೆ ನೀರು ತುಂಬಿಸಿ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ಕೆಲಸ ಮಾಡುತ್ತಿದ್ದು ಇದೊಂದು ಉತ್ತಮ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃಧ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚುವುದರ ಜತೆಗೆ ರೈತರಿಗೂ ಅನುಕೂಲವಾಗಲಿದೆ.ಎಚ್.ಎ.ಇಕ್ಬಾಲ್ ಹುಸೇನ್ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.