ರಾಮನಗರ: ಕೇಂದ್ರ ಸರ್ಕಾರ 2013ರಲ್ಲಿ ಜಾರಿಗೆ ತಂದಿರುವ ‘ಭೂ ಸ್ವಾಧೀನ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ–2013’ ಅನ್ನು ಬಿಡದಿ ಸಮಗ್ರ ಉಪನಗರ ಯೋಜನೆ ವಿಷಯದಲ್ಲಿ ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ‘ನಾವು ಕೊಡುವ ಭೂಮಿಗೆ ಯಾವ ಕಾಯ್ದೆಯಡಿ ಪರಿಹಾರ ಕೊಡುತ್ತಾರೆ’ ಎಂಬ ಗೊಂದಲದಲ್ಲಿ ಯೋಜನಾ ವ್ಯಾಪ್ತಿಯ ಜನ ಸಿಲುಕಿದ್ದಾರೆ.
ಯೋಜನೆಗಾಗಿ ಈಗಾಗಲೇ ಗುರುತಿಸಿರುವ 9 ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಸರ್ಕಾರ, ಕರ್ನಾಟಕ ನಗರಾಭಿವೃದ್ಧಿ ಕಾಯ್ದೆ –1987ರ (ಕುಡಾ ಕಾಯ್ದೆ) ಕಲಂ 17 (1) ಹಾಗೂ 17 (3)ರಡಿ ಇದೇ ವರ್ಷದ ಮಾರ್ಚ್ 12ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಮಾರನೇಯ ದಿನವೇ ಈ ಅಧಿಸೂಚನೆ ಕರ್ನಾಟಕ ರಾಜ್ಯ ವಿಶೇಷ ರಾಜ್ಯಪತ್ರದಲ್ಲೂ ಪ್ರಕಟವಾಗಿದೆ.
ಇದರ ಬೆನ್ನಲ್ಲೇ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಜಿಬಿಡಿಎ) ಭೂ ಸ್ವಾಧೀನ ಕುರಿತು, ಜಮೀನುಗಳ ಮಾಲೀಕರಿಗೆ ತಿಳಿವಳಿಕೆ ನೋಟಿಸ್ ನೀಡಿದೆ. ಅದರಲ್ಲಿರುವ 1987ರ ಕಾಯ್ದೆ ಪ್ರಕಾರ ಅಧಿಸೂಚನೆ ಹೊರಡಿಸಲಾಗಿದೆ ಎಂಬ ಸಾಲು ರೈತರನ್ನು ಗೊಂದಲಕ್ಕೀಡು ಮಾಡಿದೆ. 2013ರ ಕಾಯ್ದೆ ಪ್ರಕಾರ, ಭೂ ಸ್ವಾಧೀನ ಮತ್ತು ಪರಿಹಾರ ಪ್ರಕ್ರಿಯೆ ನಡೆಯುವುದಿಲ್ಲವೇ ಎಂಬ ಪ್ರಶ್ನೆಗಳನ್ನು ಸೃಷ್ಟಿಸಿದೆ.
ಸುಳ್ಳು ಸುದ್ದಿ: ‘1987ರ ಕಾಯ್ದೆ ಪ್ರಕಾರ ಬಲವಂತವಾಗಿ ರೈತರ ಜಮೀನುಗಳನ್ನು ಭೂ ಸ್ವಾಧೀನ ಮಾಡಿಕೊಂಡು, ಕಡಿಮೆ ಪರಿಹಾರ ಕೊಡುತ್ತಾರೆ ಎಂಬ ಸುಳ್ಳು ಸುದ್ದಿ ಹಾಗೂ ವದಂತಿಯನ್ನು ಹರಡಲಾಗುತ್ತಿದೆ. ಆ ಮೂಲಕ ಯೋಜನಾ ವ್ಯಾಪ್ತಿಯ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಭೂ ಸ್ವಾಧೀನಕ್ಕೆ ಸಂಬಂಧಿಸಿದ ಮೊದಲ ಅಧಿಸೂಚನೆಯನ್ನು 1987ರ ಕಾಯ್ದೆ ಪ್ರಕಾರವೇ ಹೊರಡಿಸಬೇಕಿದೆ. ಅದರಂತೆ ಅಧಿಸೂಚನೆ ಹೊರಡಿಸಿ ಕಾಯ್ದೆಯ 17, 18, 19, 35 ಹಾಗೂ 36 ಉಪಬಂಧಗಳ ಅನ್ವಯ ಜಿಬಿಡಿಎ ವಿಶೇಷ ಭೂ ಸ್ವಾಧೀನಾಧಿಕಾರಿ–2 ಹಾಗೂ ಅವರ ಸಿಬ್ಬಂದಿ 2013ರ ಕಾಯ್ದೆಯ ಕಲಂ 20ರಿಂದ 23ರಡಿ ಕರ್ತವ್ಯ ನಿರ್ವಹಿಸಲು ಅಧಿಕಾರ ನೀಡಲಾಗಿದೆ’ ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳಿದರು.
‘ಕುಡಾ ಕಾಯ್ದೆಯ ಕಲಂ 17 (1)ರಡಿ ಯೋಜನಾ ವ್ಯಾಪ್ತಿಯ ಜಮೀನುಗಳಲ್ಲಿ ಕೆಲಸ ನಿರ್ವಹಿಸುವ ಪ್ರಾಧಿಕಾರದ ಆಯುಕ್ತರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಗೂ ಪ್ರಾಧಿಕಾರವನ್ನು ಪ್ರತಿನಿಧಿಸಿ ಕೆಲಸ ಮಾಡುವವರಿಗೆ ಅಡ್ಡಿಪಡಿಸುವುದನ್ನು ಅಥವಾ ತಡೆಯುವುದನ್ನು ಮಾಡುವಂತಿಲ್ಲ ಎಂದು ಹೇಳುತ್ತದೆಯಷ್ಟೆ. ಪರಿಹಾರ ಮತ್ತು ಪುನರ್ವಸತಿಗೂ ಕುಡಾ ಕಾಯ್ದೆಗೂ ಸಂಬಂಧವೇ ಇಲ್ಲ. ಅದೇನಿದ್ದರೂ 2013ರ ಕಾಯ್ದೆ ಪ್ರಕಾರವೇ ನಡೆಯಲಿದೆ’ ಎಂದು ಸ್ಪಷ್ಟಪಡಿಸಿದರು.
ಬಿಡದಿ ಸಮಗ್ರ ಉಪನಗರ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ 2013ರ ಕಾಯ್ದೆ ಪ್ರಕಾರವೇ ಪರಿಹಾರ ನಿರ್ಧಾರಣೆ ಪುನರ್ವಸತಿ ಹಾಗೂ ಪುನರ್ ವ್ಯವಸ್ಥೆ ಮಾಡಲಾಗುತ್ತದೆ. ಎಲ್ಲವೂ ಪಾರದರ್ಶಕವಾಗಿ ನಡೆಯಲಿದ್ದು ಯೋಜನೆಯಲ್ಲಿ ರೈತರಿಗೆ ಯಾವುದೇ ರೀತಿಯಲ್ಲೂ ಅನ್ಯಾಯವಾಗುವುದಿಲ್ಲ– ಜಿ.ಎನ್. ನಟರಾಜ್ ಅಧ್ಯಕ್ಷ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಕೇಂದ್ರ ಸರ್ಕಾರವು 2013ರಲ್ಲಿ ಜಾರಿಗೆ ತಂದಿರುವ ‘ಭೂ ಸ್ವಾಧೀನ ಪಾರದರ್ಶಕತೆ ಸೂಕ್ತ ಪರಿಹಾರದ ಹಕ್ಕು ಪುನರ್ವಸತಿ ಮತ್ತು ಪುನರ್‌ನಿರ್ಮಾಣ ಕಾಯ್ದೆ–2013’ರಡಿ ಉಪನಗರಕ್ಕೆ ಭೂ ಸ್ವಾಧೀನ ಮಾಡಿದರೆ ಯೋಜನಾ ಪ್ರದೇಶದಲ್ಲಿರುವ ಶೇ 80ರಷ್ಟು ಜನರ ಒಪ್ಪಿಗೆ ಕಡ್ಡಾಯವಾಗಿ ಬೇಕಾಗುತ್ತದೆ. ಇದರಿಂದ ತಪ್ಪಿಸಿಕೊಳ್ಳಲು ರಾಜ್ಯ ಸರ್ಕಾರವು ಕರ್ನಾಟಕ ನಗರಾಭಿವೃದ್ಧಿ ಕಾಯ್ದೆ–1987ರಡಿ ಭೂ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ರೈತರು ಭೂ ಸ್ವಾಧೀನದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ಸರ್ಕಾರ 2013ರ ಕಾಯ್ದೆ ಬದಲು 1987ರ ಕಾಯ್ದೆಯಡಿ ಅಧಿಸೂಚನೆ ಹೊರಡಿಸಿದೆ. ಆ ಮೂಲಕ ಬಲವಂತವಾಗಿ ಮಾಲೀಕರಿಂದ ಜಮೀನುಗಳನ್ನು ಭೂ ಸ್ವಾಧೀನ ಮಾಡಿಕೊಳ್ಳಲು ಮುಂದಾಗಿದೆ ಎಂಬುದು ಯೋಜನೆ ವಿರೋಧಿಸುತ್ತಿರುವವರ ವಾದವಾಗಿದೆ.
‘ಪರಿಹಾರ–ಪುನರ್ವಸತಿಗೆ 2013ರ ಕಾಯ್ದೆಯೇ ಅಂತಿಮ’
‘ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ 2013ರಲ್ಲಿ ಜಾರಿಗೆ ತಂದಿದ್ದ ‘ಭೂ ಸ್ವಾಧೀನ ಪಾರದರ್ಶಕತೆ ಸೂಕ್ತ ಪರಿಹಾರದ ಹಕ್ಕು ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ–2013’ ಆಧಾರದ ಮೇಲೆಯೇ ಬಿಡದಿ ಸಮಗ್ರ ಉಪನಗರ ಯೋಜನೆಗೆ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಪರಿಹಾರ ನಿರ್ಧಾರಣೆ ಪುನರ್ವಸತಿ ಹಾಗೂ ಪುನರ್ ವ್ಯವಸ್ಥೆ ಮಾಡಲಾಗುತ್ತದೆ. ಭೂ ಸ್ವಾಧೀನಕ್ಕಾಗಿ ಸರ್ಕಾರ ಕುಡಾ ಕಾಯ್ದೆ– 1987ರಡಿ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯನ್ನು ತಪ್ಪಾಗಿ ಅರ್ಥೈಸುತ್ತಿರುವ ಕೆಲವರು ಅದೇ ಕಾಯ್ದೆಯಡಿ ಪರಿಹಾರ ಮತ್ತು ಪುನರ್ವಸತಿ ನೀಡಿ ಅನ್ಯಾಯ ಮಾಡುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್. ನಟರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಅಂಕಿಅಂಶ...
7,481 ಎಕರೆಉಪನಗರ ಯೋಜನೆಗೆ ಸ್ವಾಧೀನವಾಗಲಿರುವ ಭೂಮಿ7,032ಸ್ವಾಧೀನವಾಗಲಿರುವ ಜಮೀನಿನ ಖಾತೆದಾರರು10,450ಯೋಜನಾ ಪ್ರದೇಶದ ಒಟ್ಟು ಸರ್ವೆ ನಂಬರ್‌ಗಳು ಪಟ್ಟಿ...ಎಲ್ಲಿ, ಎಷ್ಟು ಜಮೀನು ಭೂ ಸ್ವಾಧೀನ (ಎಕರೆ–ಗುಂಟೆಗಳಲ್ಲಿ)ಗ್ರಾಮ;ಜಮೀನು;ಖಾತೆದಾರರು;ಒಟ್ಟು ಸರ್ವೆ ನಂಬರ್ಅರಳಾಳುಸಂದ್ರ;1,494.10;1,250;2,064ಬನ್ನಿಗಿರಿ;714.7;641;1,177ಭೈರಮಂಗಲ;1,131.15;1,758;1,847ಹೊಸೂರು;2,544.34;1,796;2,990ಕೆಂಪಯ್ಯನಪಾಳ್ಯ;359.15;406;586ಮಂಡಲಹಳ್ಳಿ;71.34;23;52ಕೆ.ಜಿ.ಗೊಲ್ಲರಪಾಳ್ಯ;314.35;243;221ವಡೇರಹಳ್ಳಿ;65.32;76;103ಕಂಚುಗಾರನಹಳ್ಳಿ;784.37;839;1,410
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.