
ರಾಮನಗರ: ತಾಲ್ಲೂಕಿನ ಬಿಡದಿ ಹೋಬಳಿಯಲ್ಲಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಡಿಎ) ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆಗೆ ಭೂ ಸ್ವಾಧೀನ ವಿರೋಧಿಸುತ್ತಿರುವ ಅರಳಾಳುಸಂದ್ರ ಗ್ರಾಮಸ್ಥರು, ಗುರುವಾರ ಗ್ರಾಮಕ್ಕೆ ಬಂದಿದ್ದ ಶಾಸಕ ಎಚ್.ಸಿ. ಬಾಲಕೃಷ್ಣ ಅವರಿಗೆ ಮುತ್ತಿಗೆ ಹಾಕಿದರು.
ತಮ್ಮ ಪರಿಚಯಸ್ಥರ ಗೃಹ ಪ್ರವೇಶದಲ್ಲಿ ಪಾಲ್ಗೊಳ್ಳಲು ಬಾಲಕೃಷ್ಣ ಅವರು ಬಂದಿರುವ ವಿಷಯ ತಿಳಿಯುತ್ತಿದ್ದಂತೆ, ಗ್ರಾಮಸ್ಥರು ಮನೆಯತ್ತ ಜಮಾಯಿಸಿದರು. ಕಾರ್ಯಕ್ರಮ ಮುಗಿಸಿ ಹೊರಡಲು ಮುಂದಾದ ಶಾಸಕರ ಕಾರು ಅಡ್ಡಗಟ್ಟಿದರು. ಟೌನ್‌ಶಿಪ್ ಯೋಜನೆಗೆ ನಮ್ಮ ವಿರೋಧ ಲೆಕ್ಕಿಸದೆ ಭೂ ಸ್ವಾಧೀನ ಮಾಡಿಕೊಂಡು ಯೋಜನೆ ಅನುಷ್ಠಾನ ಮಾಡಲು ಮುಂದಾಗಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯೋಜನೆ ಕುರಿತು ಇದುವರೆಗೆ ರೈತರ ಜೊತೆ ಸಭೆ ನಡೆಸದೆ ಬೇಜವಾಬ್ದಾರಿ ಪ್ರದರ್ಶಿಸಿದ್ದೀರಿ. ಹೀಗಿರುವಾಗ ನಮ್ಮ ಗ್ರಾಮಕ್ಕೆ ಯಾಕೆ ಬಂದಿದ್ದಿರಿ ಎಂದು ತರಾಟೆಗೆ ತೆಗೆದುಕೊಂಡು ಧಿಕ್ಕಾರ ಕೂಗಿದರು. ಆಗ ಬಾಲಕೃಷ್ಣ ಮತ್ತು ಬೆಂಬಲಿಗರು ಗ್ರಾಮಸ್ಥರನ್ನು ಸಮಾಧಾನಪಡಿಸಲು ಮುಂದಾದಾಗ, ಪರಸ್ಪರ ಮಾತಿನ ಚಕಮಕಿ ನಡೆಯಿತು.
ಮಹಿಳೆಯರು ಸೇರಿದಂತೆ ಎಲ್ಲರೂ ಶಾಸಕರು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಮಾತನಾಡತೊಡಗಿದರು. ತಮ್ಮ ಮತ್ತು ಬೆಂಬಲಿಗರ ಮಾತಿಗೆ ಗ್ರಾಮಸ್ಥರು ಸಮಾಧಾನವಾಗದಿದ್ದನ್ನು ಅರಿತ ಬಾಲಕೃಷ್ಣ ಅವರು ಕಾರು ಏರಿ ಹೊರಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.