ADVERTISEMENT

ಪೂರ್ವಜರು ದಾನಕೊಟ್ಟಿದ್ದ ಜಾಗದಲ್ಲಿ ಸಂಸಾರ ಸಮೇತ ಠಿಕಾಣಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2023, 6:58 IST
Last Updated 29 ಸೆಪ್ಟೆಂಬರ್ 2023, 6:58 IST
ಮಲ್ಲೇನಹಳ್ಳಿ ಶಾಲೆಯಲ್ಲಿ ಖಾಸಗೀ ವ್ಯಕ್ತಿ ವಾಸಿಸುವ ಸಲುವಾಗಿ ವಸ್ತುಗಳನ್ನಿಟ್ಟುಕೊಂಡಿರುವುದು
ಮಲ್ಲೇನಹಳ್ಳಿ ಶಾಲೆಯಲ್ಲಿ ಖಾಸಗೀ ವ್ಯಕ್ತಿ ವಾಸಿಸುವ ಸಲುವಾಗಿ ವಸ್ತುಗಳನ್ನಿಟ್ಟುಕೊಂಡಿರುವುದು   

ಹಾರೋಹಳ್ಳಿ: ಪೂರ್ವಜರು ಶಾಲೆಗೆಂದು ದಾನ ನೀಡಿದ್ದ ಜಾಗವನ್ನು ತನ್ನದು ಎಂದು ದಾನ ನೀಡಿದ್ದ ಕುಟುಂಬದ ವ್ಯಕ್ತಿಯೊಬ್ಬರು ಸಂಸಾರ ಸಮೇತ ಶಾಲೆಯಲ್ಲೇ ಠಿಕಾಣಿ ಹೂಡಿದ್ದಾರೆ.

ಹಾರೋಹಳ್ಳಿ ತಾಲೂಕಿನ ತೋಕಸಂದ್ರ ಗ್ರಾ.ಪಂ ವ್ಯಾಪ್ತಿಯ ಮಲ್ಲೇನಹಳ್ಳಿಯ ನಿವಾಸಿ ಕಾಳೇಗೌಡ ಬಿನ್ ವೀರಭದ್ರ  ಸರ್ಕಾರಿ ಶಾಲೆಯಲ್ಲಿ ಸಂಸಾರ ಹೂಡಿದವರು.  ಕೊರೊನಾ ವೇಳೆ ಮಕ್ಕಳಿಲ್ಲದೆ ಶಾಲೆಯನ್ನು ಮುಚ್ಚಲಾಗಿತ್ತು. ಈ ಸಮಯದಲ್ಲಿ ಇಲ್ಲಿನ ಸರ್ಕಾರಿ ಶಾಲೆಯ ಎರಡು ಕಟ್ಟಡಗಳನ್ನು ಅತಿಕ್ರಮಿಸಿಕೊಂಡಿರುವ ಕಾಳೇಗೌಡ ದಂಪತಿ, ಮಕ್ಕಳು, ಸೊಸೆ ಸೇರಿದಂತೆ ಐವರು ಇಲ್ಲಿ ವಾಸವಾಗಿದ್ದಾರೆ. 

ಮಕ್ಕಳ ದಾಖಲಾತಿಯ ಕೊರತೆಯಿಂದ ನಾಲ್ಕೈದು ವರ್ಷಗಳ ಹಿಂದೆಯೇ ಶಾಲೆಯ ಎರಡು ಕೊಠಡಿಗಳನ್ನು  ಮುಚ್ಚಲಾಗಿದೆ. ಶಾಲೆಯನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಳ್ಳಲು ಮುಂದಾಗಿದ್ದ ಅಧಿಕಾರಿಗಳನ್ನೂ ಕಾಳೇಗೌಡ ಹೆದರಿಸಿ ವಾಪಸ್ ಕಳುಹಿಸಿದ್ದಾರೆ. 

ADVERTISEMENT

ಶಿಶುಪಾಲನಾ ಕೇಂದ್ರ ತೆರೆಯಲು ಆದೇಶ; ಮುಚ್ಚಿರುವ ಸರಕಾರಿ ಶಾಲೆ ಕಟ್ಟಡದಲ್ಲೇ ಶಿಶುಪಾಲನಾ ಕೇಂದ್ರವನ್ನ ತೆರೆಯುವಂತೆ ಸರ್ಕಾರ ಆದೇಶ ಮಾಡಿತ್ತು.

ಒಂದು ವಾರದ ಹಿಂದೆ ತೋಕಸಂದ್ರ ಗ್ರಾಮ ಪಂಚಾಯತಿ ಅಧಿಕಾರಿಗಳು ಸ್ಥಳ ಪರಿಶೀಲನೆಗೆಂದು ಹೋದಾಗ ಸರ್ಕಾರಿ ಶಾಲೆಯಲ್ಲಿ ಕಾಳೇಗೌಡರ ಕುಟುಂಬ ವಾಸವಿರುವುದು ತಿಳಿದಿದೆ. ಶಾಲಾ ಕಟ್ಟಡವನ್ನು ವಾರದೊಳಗೆ ಬಿಟ್ಟು ಕೊಡುವಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಗಡುವು ನೀಡಿದ್ದರು. ಆದರೆ, ಕಾಳೇಗೌಡ ಕುಟುಂಬ ಕಟ್ಟಡ ತೆರವುಗೊಳಿಸಿರಲಿಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿದಾಗ, ಇದು ನಮ್ಮ ಪೂರ್ವಿಕರ ಆಸ್ತಿ. ಸರ್ಕಾರಿ ಶಾಲೆಗೆ ದಾನ ಬರೆದು ಕೊಟ್ಟಿದ್ದರು. ಈಗ ಶಾಲೆ ಸ್ಥಗಿತಗೊಂಡಿದೆ ಹಾಗಾಗಿ ನಾವು ಇಲ್ಲಿ ವಾಸವಿದ್ದೇವೆ ನಾವು ತೆರವುಗೊಳಿಸುವುದಿಲ್ಲ ಎಂದು ತಿಳಿಸಿದ್ದಾರೆ. 

ಸರ್ಕಾರದ ಆದೇಶದಂತೆ ಶಿಶುಪಾಲನಾ ಕೇಂದ್ರದ ಸ್ಥಳ ಪರಿಶೀಲನೆಗೆ ತೆರಳಿದಾಗ ಶಾಲೆಯಲ್ಲಿ ಕಾಳೇಗೌಡರ ಕುಟುಂಬ ವಾಸವಿರುವುದು ತಿಳಿದುಬಂದಿದೆ. ಪೂರ್ವಿಕರ ಆಸ್ತಿ ಎಂದು ತಕರಾರು ಮಾಡುತ್ತಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ, ಅವರ ಸೂಚನೆಯ ಮೇರೆಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತೋಕಸಂದ್ರ ಗ್ರಾಮ ಪಂಚಾಯ್ತಿಯ ಪಿಡಿಒ ಎಚ್‌.ವಿ. ಶ್ರೀಧರ್ ತಿಳಿಸಿದ್ದಾರೆ.

ಮಲ್ಲೇನಹಳ್ಳಿಯ ಸರಕಾರಿ ಶಾಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.