ಮಾಗಡಿ: ‘ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಭೂಕಬಳಿಕೆ ಮಾಡಿರುವ ದಾಖಲೆ ಬಿಡುಗಡೆಗಳನ್ನು ಶೀಘ್ರದಲ್ಲೇ ಮಾಡಲಾಗುವುದು’ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ತಿಳಿಸಿದರು.
ಪಟ್ಟಣದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಕೆಂಪೇಗೌಡ ಅಭಿವೃದ್ಧಿ ಸಮಿತಿ ವತಿಯಿಂದ ಕೆಂಪೇಗೌಡರ ಕಂದಕ, ಕೋಟೆ, ಕೆರೆ, ಉಳಿವಿಗಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಬಾಲಕೃಷ್ಣ ಹಾಗೂ ಅವರ ತಂದೆ ಚನ್ನಪ್ಪ ಶಾಸಕರಾಗಿ 35 ವರ್ಷ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಈಗ ಅರಣ್ಯ ಇಲಾಖೆಯ 20ರಿಂದ 30 ಎಕರೆ ಜಮೀನು ಬೇನಾಮಿ ಹೆಸರಿನಲ್ಲಿ ಕಬಳಿಸಲು ಹೊರಟಿದ್ದಾರೆ. ತಹಶೀಲ್ದಾರ್ ಶರತ್ ಕುಮಾರ್ ಈಗಾಗಲೇ 74 ಜನ ನಕಲಿ ದಾಖಲೆ ಸೃಷ್ಟಿ ಮಾಡಿ ಸರ್ವೆ ಅಧಿಕಾರಿಗಳ ಜತೆ ಶಾಮೀಲಾಗಿ ಆಗಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಳ್ಳುತ್ತಿರುವ ಬಗ್ಗೆ ದೂರು ನೀಡಲಾಗಿದೆ. ಆದರೂ, ಪೊಲೀಸರು ದೂರಿನ ಬಗ್ಗೆ ಯಾವುದೇ ರೀತಿ ತನಿಖೆ ಕೈಗೊಳ್ಳುತ್ತಿಲ್ಲ. ಶೀಘ್ರದಲ್ಲೇ ಅಕ್ರಮ ಬಗ್ಗೆ ದಾಖಲೆ ಬಿಡುಗಡೆ ಮಾಡುವುದಾಗಿ’ ಹೇಳಿದರು.
ಕೆಂಪೇಗೌಡರ ಪಳೆಯುಳಿಕೆ ಉಳಿಸಿಕೊಳ್ಳುವ ಕೆಲಸವನ್ನು ಶಾಸಕರು ಮಾಡಬೇಕು. ಆದರೆ, ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳಿಗೆ ಯಾವುದೇ ದಾಖಲಾತಿ ಕೊಡಬೇಡಿ. ಅವರಿಗೆ ಸ್ಪಂದಿಸಬೇಡಿ ಎಂದು ಶಾಸಕರೇ ಹೇಳುತ್ತಿದ್ದಾರೆ. ಕೆಂಪೇಗೌಡರ ಕೋಟೆ ಒತ್ತುವರಿ ಉಳಿಸಲು ಸಹಕಾರ ನೀಡದ ಅವರು ಕ್ಷೇತ್ರಕ್ಕೆ ಏಕೆ ಬೇಕು’ ಎಂದು ಪ್ರಶ್ನಸಿದರು.
ಕೆಂಪೇಗೌಡರ ಕಾಲಘಟ್ಟದಲ್ಲಿ 134ಕ್ಕೂ ಹೆಚ್ಚು ಕೆರೆ ಕುಂಟೆಗಳನ್ನು ನಿರ್ಮಾಣಗೊಂಡಿವೆ. ಶಾಸಕರು ಒಂದು ಕೆರೆ ಕೂಡ ಉಳಿಸುವ ಕೆಲಸ ಮಾಡಿಲ್ಲ. ಕೆರೆ, ಗೋಮಾಳ, ಅರಣ್ಯ ಭೂಮಿ ಉಳಿಸುವ ಕೆಲಸವನ್ನು ಶಾಸಕರು ಮತ್ತು ಅಧಿಕಾರಿಗಳು ಮಾಡಬೇಕು ಎಂದು ಒತ್ತಾಯಿಸಿದರು.
ಜೂನ್ 27ರಂದು ಕೆಂಪೇಗೌಡರ ಜಯಂತಿ ನಡೆಯಲಿದೆ. ಕೋಟೆಗೆ ₹100 ಕೋಟಿ ಅನುದಾನ ಬಿಡುಗಡೆಯಾಗಿದೆ. ಸಮಾಧಿ ಅಭಿವೃದ್ಧಿಗೆ ₹500 ಕೋಟಿ ಹಣ ಬಿಡುಗಡೆಯಾಗಿದೆ ಎಂದು ಸಚಿವರಾದಿಯಾಗಿ ಜನಪ್ರತಿನಿಧಿಗಳು ಹೇಳುತ್ತಲೇ ಬರುತ್ತಿದ್ದಾರೆ. ಆದರೆ,ನಯಾ ಪೈಸೆ ಕೂಡ ಬಿಡುಗಡೆಯಾಗಿಲ್ಲ ಎಂದು ಟೀಕಿಸಿದರು.
ಪ್ರತಿಮೆ ಸ್ಥಳಾಂತರಕ್ಕೆ ವಿರೋಧ: ಪುರಸಭೆ ಪಕ್ಕದಲ್ಲಿರುವ ಕೆಂಪೇಗೌಡರ ಪ್ರತಿಮೆ ಸ್ಥಳಾಂತರ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಪ್ರತಿಮೆ ಜಾಗದಲ್ಲಿ ಹೊಸ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಶಾಸಕರು ತಿಳಿಸಿದ್ದಾರೆ. ಆದರೆ,ಪ್ರತಿಮೆ ಸ್ಥಳಾಂತರಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ದಲಿತ ಮುಖಂಡ ಮಾಡಬಾಳ್ ಜಯರಾಂ, ರೈತ ಸಂಘದ ಅಧ್ಯಕ್ಷ ಲೋಕೇಶ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಜಗನ್ನಾಥ್ ಗೌಡ, ಜೆಡಿಎಸ್ ಹಿರಿಯ ಮುಖಂಡ ತಮ್ಮಣ್ಣಗೌಡ, ಯುವ ಮುಖಂಡ ಆನಂದ್ ಗೌಡ, ಶಿವರಾಂ, ಗಂಗಾಧರ್, ಸೋಲೂರು ರಾಘವೇಂದ್ರ, ಮೋಹನ್, ಕೋಳಿ ಅಂಗಡಿ ಪುಟ್ಟಸ್ವಾಮಿ, ಆನಂದ್ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಹಿಳಾ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.