ADVERTISEMENT

ಕನಕಪುರ: ಭೂ ಸುಧಾರಣೆ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌ಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 4:01 IST
Last Updated 14 ಡಿಸೆಂಬರ್ 2021, 4:01 IST
ಕನಕಪುರದಲ್ಲಿ ರೈತ ಸಂಘದ ಪದಾಧಿಕಾರಿಗಳು ಕೃಷಿ ಕಾಯ್ದೆಯನ್ನು ವಾಪಸ್‌‌ ಪಡೆಯುವಂತೆ ಒತ್ತಾಯಿಸಿ ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌ಗೆ ಮನವಿ ಸಲ್ಲಿಸಿದರು
ಕನಕಪುರದಲ್ಲಿ ರೈತ ಸಂಘದ ಪದಾಧಿಕಾರಿಗಳು ಕೃಷಿ ಕಾಯ್ದೆಯನ್ನು ವಾಪಸ್‌‌ ಪಡೆಯುವಂತೆ ಒತ್ತಾಯಿಸಿ ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌ಗೆ ಮನವಿ ಸಲ್ಲಿಸಿದರು   

ಕನಕಪುರ: ‘ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರವು ವಾಪಸ್‌ ಪಡೆದಿರುವ ರೀತಿಯಲ್ಲೇ ರಾಜ್ಯ ಸರ್ಕಾರವು ಕೃಷಿ ಕಾಯ್ದೆ, ಭೂ ಸುಧಾರಣೆ ಕಾಯ್ದೆ, ಗೋಹತ್ಯೆನಿಷೇಧ ಕಾಯ್ದೆಯನ್ನು ವಾಪಸ್‌ ಪಡೆಯಬೇಕು’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಅಧ್ಯಕ್ಷ ಚೀಲೂರು ಮುನಿರಾಜು ಒತ್ತಾಯಿಸಿದರು.

ಕೃಷಿ ಕಾಯ್ದೆಯನ್ನು ವಾಪಸ್‌ ಪಡಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸೋಮವಾರ ತಹಶೀಲ್ದಾರ್‌ ವಿ.ಆರ್‌.ವಿಶ್ವನಾಥ್‌ ಅವರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಅವರು ಮಾತನಾಡಿದರು.

‘ರೈತರಿಗೆ ಮಾರಕವಾಗಿರುವ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯುವ ವಿಚಾರದಲ್ಲಿ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆಗಳನ್ನು ವಾಪಸ್‌ ಪಡೆಯುವುದಿಲ್ಲವೆಂದು ರೈತ ವಿರೋಧಿ ಹೇಳಿಕೆಯನ್ನು ನೀಡಿದ್ದಾರೆ. ಅವರು ಈ ಕೂಡಲೆ ರಾಜ್ಯದಲ್ಲಿನ ರೈತರ ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯುಬೇಕು. ಇಲ್ಲವಾದಲ್ಲಿ ದೆಹಲಿ ಮಾದರಿಯಲ್ಲೇ ಸಂಯುಕ್ತ ಕರ್ನಾಟಕ ಹೋರಾಟ ಅಡಿಯಲ್ಲಿ ರಾಜ್ಯ ಸರ್ಕಾರದವಿರುದ್ಧ ಪ್ರತಿಭಟನೆ ಮಾಡಲಾಗುತ್ತದೆ’ ಎಂದು ಎಚ್ಚರಿಸಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕುಮಾರ್‌, ಹಿರಿಯ ಮುಖಂಡ ಸಿದ್ದೇಗೌಡ, ತಾಲ್ಲೂಕು ಕಾರ್ಯಾಧ್ಯಕ್ಷ ಬಸವರಾಜು, ಹೋಬಳಿ ಅಧ್ಯಕ್ಷ ರಾಜಕುಮಾರ್‌, ರೈತ ಮುಖಂಡರಾದ ಕಾಮಯ್ಯ, ಅರಸು, ಮರಿಯಪ್ಪ, ಕೆಂಪರಾಜು, ಸೋಮಯ್ಯ, ನೀಲಕಂಠ, ರಾಘವೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.