
ಚನ್ನಪಟ್ಟಣ: ಆಹಾರ ಅರಸಿ ಬಂದು ಪಾಳುಬಾವಿಯಲ್ಲಿ ಬಿದ್ದಿದ್ದ ಮೂರು ವರ್ಷದ ಗಂಡು ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ರಕ್ಷಿಸಿದ ಘಟನೆ ತಾಲ್ಲೂಕಿನ ಸಿಂಗರಾಜಿಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗುರುವಾರ ರಾತ್ರಿ ಆಹಾರ ಅರಸಿಕೊಂಡು ಬಂದಿರುವ ಚಿರತೆ, ಗ್ರಾಮದ ರೈತ ಪುಟ್ಟಸ್ವಾಮಯ್ಯ ಅವರ ಜಮೀನಿನಲ್ಲಿ ಇದ್ದ ಪಾಳುಬಾವಿಗೆ ಬಿದ್ದಿದೆ. ಗ್ರಾಮಸ್ಥರು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದರು. ಜನರು ತಂಡೋಪತಂಡವಾಗಿ ಆಗಮಿಸಿ ಬಾವಿಯಲ್ಲಿ ಬಿದ್ದಿದ್ದ ಚಿರತೆ ವೀಕ್ಷಿಸಿದರು.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು. ನಂತರ ಬನ್ನೇರುಘಟ್ಟ ವನ್ಯಜೀವಿ ಪುನರ್ವಸತಿ ಕೇಂದ್ರದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು ಕಾರ್ಯಾಚರಣೆ ನಡೆಸಿದರು. ಮೊದಲು ಬಾವಿ ಒಳಕ್ಕೆ ಬೋನು ಇಳಿಸಿ ಚಿರತೆ ಬೋನಿನ ಒಳಗೆ ಹೋಗುವಂತೆ ಮಾಡಿದರು. ಅದರ ಬಾಗಿಲು ಹಾಕಿ, ನಂತರ ಬೋನು ಮೇಲೆಕ್ಕಿತ್ತಿದರು. ನಂತರ ಬನ್ನೇರುಘಟ್ಟ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಚಿರತೆ ರವಾನೆ ಮಾಡಲಾಯಿತು.
ಈ ಭಾಗದಲ್ಲಿ ಚಿರತೆ ಹಲವು ದಿನಗಳಿಂದ ಸಾಕುಪ್ರಾಣಿಗಳನ್ನು ಹಿಡಿದು ತಿನ್ನುತ್ತಿತ್ತು. ರಾತ್ರಿ ವೇಳೆ ಓಡಾಟ ನಡೆಸುತ್ತಿತ್ತು. ಇದರಿಂದ ಜನರು ಭೀತಿ ಗೊಂಡಿದ್ದರು. ಈಗ ಚಿರತೆಯನ್ನು ಹಿಡಿದು ಕಾಡಿಗೆ ರವಾನಿಸಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.ಡಿಸಿಎಫ್ ರಾಮಚಂದ್ರಪ್ಪ, ಆರ್‌ಎಫ್ಒ ಮಲ್ಲೇಶ್, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.