ರಾಮನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅವರು ಕ್ರೀಡಾಪಟುಗಳಿಗೆ ಕ್ರೀಡಾಜ್ಯೋತಿ ಹಸ್ತಾಂತರಿಸಿದರು.
ರಾಮನಗರ: ‘ದೈಹಿಕ ಮತ್ತು ಮಾನಸಿಕ ಆರೋಗ್ಯದ ದೃಷ್ಟಿಯಿಂದ ಕ್ರೀಡೆ ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು. ಆರೋಗ್ಯವೇ ಭಾಗ್ಯ ಎಂಬ ಮಾತಿನಂತೆ, ಎಲ್ಲರೂ ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಒಂದಲ್ಲ ಒಂದು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಒಳ್ಳೆಯದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಸೋಮವಾರ ಆಯೋಜಿಸಿದ್ದ ರಾಮನಗರ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ‘ಮನುಷ್ಯ ಆರೋಗ್ಯವಂತರಾಗಿರಲು ಕ್ರೀಡೆಗಳಲ್ಲಿ ಭಾಗವಹಿಸುವುದು ಅಗತ್ಯ’ ಎಂದರು.
‘ದೈನಂದಿನ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಒತ್ತಡಗಳಿರುತ್ತವೆ. ಅವುಗಳ ನಿವಾರಣೆಗೆ ಕ್ರೀಡೆ ಸಹಕಾರಿ. ನಿತ್ಯ ನಿಮ್ಮ ಕೆಲಸದ ಜೊತೆಗೆ ಯೋಗ, ವ್ಯಾಯಾಮ, ನಡಿಗೆ, ಧ್ಯಾನ, ದೈಹಿಕ ಮತ್ತು ಮನರಂಜನಾ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಚನ್ನಾಗಿರುತ್ತದೆ’ ಎಂದು ಹೇಳಿದರು.
‘ಕ್ರೀಡೆಯಲ್ಲಿ ಸೋಲು ಮತ್ತು ಗೆಲವು ಸಹಜ. ಅವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡನ್ನು ಸಮಾನವಾಗಿ ಸ್ವೀಕರಿಸಬೇಕು. ಗೆಲುವಿಗಿಂತ ಭಾಗವಹಿಸುವಿಕೆ ಮುಖ್ಯ. ಕ್ರೀಡಾಕೂಟದಲ್ಲಿ ಭಾಗವಹಿಸಿರುವಂತಹ ಕ್ರೀಡಾಪಟುಗಳು ವಿಜೇತರಾಗಿ ಜಿಲ್ಲಾ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ, ಜಿಲ್ಲೆಗೆ ಹೆಸರು ತಂದು ಕೊಡಬೇಕು’ ಎಂದು ತಿಳಿಸಿದರು.
ವಿವಿಧ ಕ್ರೀಡೆಗಳು ನಡೆದವು. ವಿಜೇತರಿಗೆ ಗಣ್ಯರು ಪದಕ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ನೀಲಕಂಠಸ್ವಾಮಿ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.