ADVERTISEMENT

ಲಯನ್ಸ್ ಕಣ್ಣಿನ ಆಸ್ಪತ್ರೆ ಉದ್ಘಾಟನೆಗೆ ಸಿದ್ಧತೆ

ಬಡವರು, ಅಶಕ್ತ ವರ್ಗದವರಿಗೆ ನೆರವಾಗುವ ಸದುದ್ದೇಶದಿಂದ ನಿರ್ಮಾಣ

ಎಸ್.ರುದ್ರೇಶ್ವರ
Published 7 ಏಪ್ರಿಲ್ 2019, 19:45 IST
Last Updated 7 ಏಪ್ರಿಲ್ 2019, 19:45 IST
ನಿರ್ಮಾಣ ಹಂತದಲ್ಲಿ ಇರುವ ಕಣ್ಣಿನ ಆಸ್ಪತ್ರೆ ಕಟ್ಟಡ
ನಿರ್ಮಾಣ ಹಂತದಲ್ಲಿ ಇರುವ ಕಣ್ಣಿನ ಆಸ್ಪತ್ರೆ ಕಟ್ಟಡ   

ರಾಮನಗರ: ಇಲ್ಲಿನ ಜಿಲ್ಲಾ ಗ್ರಂಥಾಲಯದ ಬಳಿ ಲಯನ್ಸ್ ಕ್ಲಬ್ ವತಿಯಿಂದ ₨1.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಲಯನ್ಸ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮೇ ತಿಂಗಳ ಮೊದಲ ವಾರದಲ್ಲಿ ಉದ್ಘಾಟನೆಯಾಗಲಿದೆ.

‘ಈ ಭಾಗದ ಈ ಭಾಗದ ಜನರಿಗೆ ಅನುಕೂಲವಾಗಲೆಂದು ಸುಸಜ್ಜಿತವಾದ ಕಣ್ಣಿನ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಕಣ್ಣಿಗೆ ಸಂಬಂಧಿಸಿದಂತಹ ಸಮಸ್ಯೆಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಇದರಿಂದ ಮಧ್ಯಮ ಹಾಗೂ ಕೆಳ ವರ್ಗದ ಜನರಿಗೆ ಅನುಕೂಲವಾಗಲಿದೆ’ ಎಂದು ಲಯನ್ಸ್ ಕ್ಲಬ್ ನ ಕಾರ್ಯದರ್ಶಿ ಎಚ್.ವಿ. ಶೇಷಾದ್ರಿ ಐಯ್ಯರ್ 'ಪ್ರಜಾವಾಣಿ'ಗೆ ತಿಳಿಸಿದರು.

‘ಮೂರು ಅಂತಸ್ತುಗಳ ಸುಸಜ್ಜಿತ ಕಣ್ಣಿನ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಇಲ್ಲಿನ ಕಣ್ಣಿನ ಎಲ್ಲಾ ರೀತಿಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುತ್ತದೆ, ಜತೆಗೆ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಈಗಾಗಲೇ ಶೇ 90 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಈ ತಿಂಗಳಾಂತ್ಯಕ್ಕೆ ಉಳಿದ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮೇನಲ್ಲಿ ಕಣ್ಣಿನ ಆಸ್ಪತ್ರೆ ಉದ್ಘಾಟನೆಯಾಗಲಿದೆ’ ಎಂದರು.

ADVERTISEMENT

1981 ರಲ್ಲಿ ರಾಮನಗರದಲ್ಲಿ ಲಯನ್ಸ್ ಕ್ಲಬ್ ಉದ್ಘಾಟನೆಯಾಯಿತು. ಸಯ್ಯದ್ ಜಿಯಾವುಲ್ಲಾ ಇದರ ಮೊದಲ ಅಧ್ಯಕ್ಷರಾಗಿದ್ದರು. ಇಂದು ಅಬ್ದುಲ್‌ ಸತಾರ್‌ (ಸಾಹುಕಾರ್ ಅಮ್ಜದ್‌) ಅಧ್ಯಕ್ಷರಾಗಿದ್ದಾರೆ. ಕ್ಲಬ್‌ ಅಂದಿನಿಂದ ಈವರೆಗೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ಈಗಲೂ ಉಚಿತ ನೇತ್ರ ತಪಾಸಣಾ ಶಿಬಿರಗಳು ಹಾಗೂ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ಆಯೋಜಿಸುತ್ತಾ ಬರಲಾಗಿದೆ’ ಎಂದು ಅವರು ಹೇಳಿದರು.

‘ಇಂದಿನ ಸಂದರ್ಭದಲ್ಲಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ಆರೋಗ್ಯ ಸೇವೆಗಳು ದುಬಾರಿಯಾಗಿವೆ. ಈ ಆಂಶಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಕಣ್ಣಿನ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಕ್ಲಬ್ ನ ಹಿರಿಯರಾದ ಶಿವಪ್ರಭು, ಎಚ್.ಎನ್. ರಾಮತೀರ್ಥ ಮೊದಲಾದವರ ಮಾರ್ಗದರ್ಶನ, ಪ್ರೇರಣೆಯಿಂದ ನಿರ್ಮಾಣ ಮಾಡಲಾಗಿದೆ’ ಎಂದು ಕ್ಲಬ್ ನ ಜಂಟಿ ಕಾರ್ಯದರ್ಶಿ ಎನ್.ವಿ. ಲೋಕೇಶ್ ತಿಳಿಸಿದರು.

‘ಮನುಷ್ಯನ ಪ್ರಮುಖ ಅಂಗಗಳಾದ ಕಣ್ಣು ಮತ್ತು ಶ್ರವಣಗಳ ಬಗ್ಗೆ ಜನರು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಪ್ರತಿಯೊಬ್ಬರೂ ತಮ್ಮ ಕಣ್ಣುಗಳನ್ನು ಕಾಲಕಾಲಕ್ಕೆ ತಪಾಸಣೆ ಮಾಡಿಕೊಳ್ಳುವ ಮೂಲಕ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಂದಿ ಕಣ್ಣಿನ ಪೊರೆಯಿಂದ ಬಳಲುತ್ತಿರುತ್ತಾರೆ. ಆರೋಗ್ಯದ ವಿಚಾರದಲ್ಲಿ ಜನಜಾಗೃತಿ ಮೂಡಿಸಲು ಕ್ಲಬ್ ನ ಚಿಕಿತ್ಸೆ ಶಿಬಿರಗಳು ಸಹಕಾರಿಯಾಗಿವೆ’ ಎಂದರು.

‘ಹಣ ಇಲ್ಲವೆಂದು ಚಿಕಿತ್ಸೆ ಪಡೆಯದೆ ಮನೆಯಲ್ಲೇ ಉಳಿಯುವ ಜನರೂ ಇದ್ದಾರೆ. ಲಯನ್ಸ್ ಕ್ಲಬ್ ಅಶಕ್ತರು ಮತ್ತು ಆರ್ಥಿಕವಾಗಿ ದುರ್ಬಲರಾದವರಿಗೆ ದೃಷ್ಟಿ ನೀಡುವ ಪ್ರಯತ್ನ ಮಾಡಲಿದೆ’ ಎಂದರು.

ಜನರಿಗೆ ಅನುಕೂಲ
‘ಲಯನ್ಸ್ ಕಣ್ಣಿ ಆಸ್ಪತ್ರೆ ಸ್ಥಾಪನೆಯಾಗುತ್ತಿರುವುದರಿಂದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಇಂದಿನ ಒತ್ತಡದ ಜೀವನದಲ್ಲಿ ಮಕ್ಕಳಲ್ಲಿಯೇ ಕಣ್ಣಿನ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಹಲವು ಪೋಷಕರಿಗೆ ತಮ್ಮ ಬಳಿ ಹಣ ಇಲ್ಲವೆಂದು ಸುಮ್ಮನಾಗುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸೂಕ್ತ ಆರೋಗ್ಯ ಸೇವೆ ದೊರೆಯದ ಕಾರಣದಿಂದ ಜನರು ನಿರಾಶಾವಾದಿಗಳಾಗಿದ್ದಾರೆ’ ಎಂದು ಲಕ್ಕಪ್ಪನಹಳ್ಳಿಯ ಡಿ. ಪುಟ್ಟಮಾದಯ್ಯ ತಿಳಿಸಿದರು.

‘ಇಂತಹ ಸನ್ನಿವೇಶದಲ್ಲಿ ಲಯನ್ಸ್ ಕ್ಲಬ್ ನ ಸುಸಜ್ಜಿತ ಕಣ್ಣಿನ ಆಸ್ಪತ್ರೆಯಿಂದ ಜನರಿಗೆ ತುಂಬಾ ಅನುಕೂಲವಾಗಲಿದೆ. ಕಣ್ಣಿನ ಆರೋಗ್ಯದ ಹೆಚ್ಚಿನ ಚಿಕಿತ್ಸೆಗೆ ಸಂಬಂಧಿಸಿದಂತೆ ಜನರು ಬೆಂಗಳೂರಿನ ಆಸ್ಪತ್ರೆಗಳಿಗೆ ಅಲೆಯುವುದು ತಪ್ಪಲಿದೆ’ ಎಂದರು.

* 105X 21.2ಚ.ಅಡಿ ಅಳತೆಯ ನಿವೇಶನದಲ್ಲಿ ನಿರ್ಮಾಣವಾಗಿರುವ ಲಯನ್ಸ್ ಕ್ಲಬ್ ನ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮೇ ಮೊದಲ ವಾರ ಉದ್ಘಾಟನೆಯಾಗಲಿದೆ
-ಎಚ್.ವಿ. ಶೇಷಾದ್ರಿ ಐಯ್ಯರ್
ಕಾರ್ಯದರ್ಶಿ, ಲಯನ್ಸ್ ಕ್ಲಬ್‌

* ಅಶಕ್ತರು, ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಈ ಆಸ್ಪತ್ರೆಯಿಂದ ಅನುಕೂಲ ಆಗಲಿದೆ. ಕ್ಲಬ್‌ನ ಹಿರಿಯರ ಮಾರ್ಗದರ್ಶನದಿಂದ ಈ ಕಾರ್ಯ ಸಾಧ್ಯವಾಗಿದೆ
-ಎನ್.ವಿ. ಲೋಕೇಶ್
ಜಂಟಿ ಕಾರ್ಯದರ್ಶಿ, ಲಯನ್ಸ್‌ ಕ್ಲಬ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.