ADVERTISEMENT

ಸಾಲಮನ್ನಾ ಸಮಸ್ಯೆಗೆ ಪರಿಹಾರವಲ್ಲ

ರೈತರ ದಿನಾಚರಣೆ, ಪ್ರಗತಿಪರ ರೈತರಿಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 15:07 IST
Last Updated 30 ಡಿಸೆಂಬರ್ 2019, 15:07 IST
ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರೂ ಆದ ಪ್ರಗತಿಪರ ರೈತರನ್ನು ಅಭಿನಂದಿಸಲಾಯಿತು.
ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರೂ ಆದ ಪ್ರಗತಿಪರ ರೈತರನ್ನು ಅಭಿನಂದಿಸಲಾಯಿತು.   

ಬಿಡದಿ: ಸಾಲ ಮನ್ನಾ ರೈತರ ಸಮಸ್ಯೆಗಳಿಗೆ ಪರಿಹಾರವಲ್ಲ. ಕೃಷಿ ಕ್ಷೇತ್ರದ ಸಬಲೀಕರಣಕ್ಕೆ ನೆರವಾಗುವಂತಹ ಶಾಶ್ವತ ಪರಿಹಾರ ಅಗತ್ಯವಿದೆ ಎಂದು ಬಿಡದಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಆರ್. ಮಲ್ಲೇಶ್ ಅಭಿಪ್ರಾಯಪಟ್ಟರು.

ರೈತರ ಸೇವಾ ಸಹಕಾರ ಸಂಘದ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರೈತರ ದಿನಾಚರಣೆ ಹಾಗೂ ಪ್ರಗತಿಪರ ರೈತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾಸ್ತವವಾಗಿ ಕೃಷಿ ಕ್ಷೇತ್ರದಲ್ಲಿ ಹಲವು ಬದಲಾವಣೆಗಳಾಗಬೇಕಾಗಿದೆ. ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಮೂಲಕ ಅವರ ನೆರವಿಗೆ ಬರಬೇಕಾಗಿದೆ. ಕೃಷಿಯನ್ನೇ ನಂಬಿ ಬದುಕುತ್ತಿರುವ ರೈತರ ಬದುಕು ಹಸನಾಗಬೇಕು ಎಂದು ಹೇಳಿದರು.

ADVERTISEMENT

‘ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲು ರೈತ ಚೆನ್ನಾಗಿರಬೇಕು. ರೈತರ ಶ್ರಮದಿಂದಲೇ ನಾವು ಆಹಾರವನ್ನು ಪಡೆಯುತ್ತಿದ್ದೇವೆ. ಪ್ರತಿಯೊಂದು ಅನ್ನದ ಕಾಳಲ್ಲೂ ಅವರ ಬೆವರಿನ ಫಲವಿದೆ. ಹೀಗಾಗಿ ರೈತರ ದಿನಾಚರಣೆಯು ಕೇವಲ ಆಚರಣೆಗೆ ಸೀಮಿತವಾಗಬಾರದು. ರಾಷ್ಟ್ರೀಯ ಹಬ್ಬವಾಗಿ ಆಚರಿಸಬೇಕಾಗಿದೆ’ ಎಂದರು.

ಕೃಷಿ ಮತ್ತು ಹೈನುಗಾರಿಕೆಯ ಬೆನ್ನೆಲುಬು ಆಗಿರುವ ರೈತ ಮಹಿಳೆಯರನ್ನು ಹಾಗೂ ಪ್ರಗತಿಪರ ರೈತರನ್ನು ಸರ್ಕಾರ ಪ್ರತಿ ವರ್ಷವೂ ಗುರುತಿಸಿ ಅಭಿನಂದಿಸುವಂತಾಗಬೇಕು ಎಂದು ನುಡಿದರು.

ಸಂಘದಿಂದ ಅಭಿನಂದನೆ ಸ್ವೀಕರಿಸಿದ ಪ್ರಗತಿಪರ ರೈತ ಬಾನಂದೂರು ಬಸವರಾಜು ಮಾತನಾಡಿ, ಬಿಡದಿ ಹೋಬಳಿಯಲ್ಲಿ ಪ್ರತಿ ಎಕರೆ ಭೂಮಿಗೆ ಕನಿಷ್ಠ ₹60 ಲಕ್ಷಕ್ಕೂ ಹೆಚ್ಚಿನ ಬೆಲೆಯಿದೆ. ಹೀಗಿದ್ದರೂ ಸಂಘ ₹1 ಲಕ್ಷ ಸಾಲ ಕೊಡುವುದಿಲ್ಲವೇಕೆ ಎಂದು ಪ್ರಶ್ನಿಸಿದರು.

ಸಂಘದ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿದರು. ಸಂಘದ ಸದಸ್ಯರೂ ಆಗಿರುವ 12 ಜನ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು. ಪ್ರಗತಿಪರ ಸಂಘದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಸೀನಪ್ಪ ಸ್ವಾಗತಿಸಿ ನಿರೂಪಿಸಿದರು.

ರೈತರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷೆ ಉಮಾ ಪುಟ್ಟಸ್ವಾಮಿ, ನಿರ್ದೇಶಕರಾದ ಸಿ.ಎನ್ ನಾಗರಾಜಯ್ಯ, ಬೈರೇಗೌಡ, ಸತೀಶ್ ಅರಸು, ಬಿ.ಪಿ ರಾಮು, ಶಿವಯ್ಯ, ಲಕ್ಷ್ಮಿ ಕೆಂಪಯ್ಯ, ಬೈಚೋಹಳ್ಳು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ರೈತ ಮುಖಂಡ ರಾಮಕೃಷ್ಣಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.