ರಾಮನಗರ: ನಗರದ ಎಂ.ಜಿ.ರಸ್ತೆಯಲ್ಲಿ ಸೀಲ್‍ಡೌನ್ ತೆರವುಗೊಳಿಸುವಂತೆ ಸ್ಥಳೀಯ ವರ್ತಕರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ವರ್ತಕರು ಗುರುವಾರ ಪತ್ರಕರ್ತರ ಜೊತೆ ಅಳಲು ಹಂಚಿಕೊಂಡರು. "ವ್ಯಾಪಾರ ಸ್ಥಳದಲ್ಲಿ ಸೋಂಕಿತರು ಪತ್ತೆಯಾದ ಕಾರಣ ಜಿಲ್ಲಾಡಳಿತ ಸೀಲ್‍ಡೌನ್ ಮಾಡಿದೆ. ಈಗಾಗಲೇ 17 ದಿನ ಕಳೆದಿದೆ. ಸೋಂಕಿತರು ಗುಣಮುಖರಾಗಿ ಮನೆ ಸೇರಿದ್ದಾರೆ. ರೆಹಮಾನಿಯಾ ನಗರದಲ್ಲಿ ಪತ್ತೆಯಾದ ಸೋಂಕಿತರ ಮನೆಯ ಅಕ್ಕಪಕ್ಕ ನಾಲ್ಕೈದು ಮನೆಗಳ ವ್ಯಾಪ್ತಿಗೆ ಸೀಲ್‍ಡೌನ್ ಆಗಿದೆ. ಕನಕಪುರದಲ್ಲಿ 4-5 ದಿನಕ್ಕೆ ಸೀಲ್‍ಡೌನ್ ತೆರವಾಗಿದೆ. ಬಿಡದಿಯಲ್ಲಿಯೂ 50 ಮೀಟರ್ ವ್ಯಾಪ್ತಿಗೆ ಸೀಲ್‍ಡೌನ್ ಆಗಿದೆ. ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಸೀಲ್‍ಡೌನ್ ನಿಯಮ ಜಾರಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಈ ಹಿಂದೆ ಲಾಕ್‍ಡೌನ್ ನಿಂದ ಎರಡು ತಿಂಗಳು ವ್ಯಾಪಾರ ಬಂದ್ ಆಗಿದ್ದು, ಸಾಕಷ್ಟು ನಷ್ಟ ಅನುಭವಿಸಿದ್ದೆವು. ಈಗ ಮತ್ತೆ ಸೀಲ್‌ಡೌನ್‌ನಿಂದ 17 ದಿನ ವಹಿವಾಟು ನಷ್ಟವಾಗಿದೆ. ಹೀಗಾಗಿ ಸೀಲ್‌ಡೌನ್ ತೆರವುಗೊಳಿಸಿದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಅಂತರ ಕಾಪಾಡಿಕೊಳ್ಳುವುದು ಮೊದಲಾದ ನಿಯಮಗಳನ್ನು ತಪ್ಪದೇ ಪಾಲಿಸುತ್ತೇವೆ’ ಎಂದು ಕೋರಿದರು.
ಶಿವಕುಮಾರ್, ಮಣಿ, ರಘು, ಲೋಕೇಶ್, ರಾಮು, ಶ್ರೀನಿವಾಸ್, ಅಸ್ರಾರ್ ಪಾಷ, ರಾಮಕೃಷ್ಣ ಮುಂತಾದವರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.