ADVERTISEMENT

ಲಾಕ್‌ಡೌನ್ ಸಡಿಲ: ಜನತೆ ನಿರಾಳ

ಮದ್ಯದಂಗಡಿಗಳ ಮುಂದೆ ಜನರ ಸಾಲು; ರಾತ್ರಿ ಹೊತ್ತು ನಿಷೇಧಾಜ್ಞೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 5 ಮೇ 2020, 9:51 IST
Last Updated 5 ಮೇ 2020, 9:51 IST
ರಾಮನಗರದ ಬಾರ್‌ವೊಂದರ ಮುಂದೆ ಕಂಡುಬಂದ ಜನರ ಸಾಲು
ರಾಮನಗರದ ಬಾರ್‌ವೊಂದರ ಮುಂದೆ ಕಂಡುಬಂದ ಜನರ ಸಾಲು   

ರಾಮನಗರ: ಸೋಮವಾರದಿಂದ ಜಿಲ್ಲೆಯಾದ್ಯಂತ ಲಾಕ್‌ಡೌನ್ ಸಡಿಲಿಕೆ ಆಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳಿತ್ತು. ಮದ್ಯದಂಗಡಿಗಳು ಬಾಗಿಲು ತೆರೆದಿದ್ದು, ಮದ್ಯ ಖರೀದಿಗೆ ಜನರ ಸಾಲೇ ನಿಂತಿತ್ತು.

ನಗರದಲ್ಲಿನ ಬಹುತೇಕ ಅಂಗಡಿಗಳು ಬಾಗಿಲು ತೆರೆದು ವಹಿವಾಟು ಆರಂಭಿಸಿದವು. ಬೃಹತ್ ವಾಣಿಜ್ಯ ಸಂಕೀರ್ಣಗಳನ್ನು ಹೊರತುಪಡಿಸಿ ಉಳಿದ ಕಡೆ ಇರುವ ಮಳಿಗೆಗಳು ತಮ್ಮ ವಹಿವಾಟು ನಡೆಸಲು ಅವಕಾಶ ಮಾಡಿಕೊಡಲಾಗಿತ್ತು. ಜನರಲ್ ಸ್ಟೋರ್‌ಗಳು, ಹಾರ್ಡ್‌ವೇರ್ ಅಂಗಡಿಗಳು, ಗ್ಯಾರೇಜ್, ಕೃಷಿ ಪರಿಕರಗಳ ಮಾರಾಟ, ಬಟ್ಟೆ, ಎಲೆಕ್ಟ್ರಾನಿಕ್ ಪರಿಕರಗಳ ಮಾರಾಟ, ಪಾತ್ರೆ ಮಾರಾಟದ ಅಂಗಡಿಗಳು, ತರಕಾರಿ ಮಳಿಗೆಗಳು ಸೇರಿದಂತೆ ವಿವಿಧ ರೀತಿಯ ವಹಿವಾಟು ನಡೆಯಿತು. ಬಸ್‌ ಸಂಚಾರ ಸಹ ಆರಂಭಗೊಂಡಿದ್ದು, ಜನರ ಓಡಾಟ ಹೆಚ್ಚಿತು. ತಿಂಗಳುಗಳ ನಂತರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಓಡಾಟ ಕಂಡು ಬಂದಿತು. ಈ ಹಿನ್ನೆಲೆಯಲ್ಲಿ ಐಜೂರು ವೃತ್ತದಲ್ಲಿ ಪೊಲೀಸರು ವಾಹನಗಳ ಸಂಚಾರಕ್ಕೆ ಮತ್ತೆ ಸಿಗ್ನಲ್ ವ್ಯವಸ್ಥೆ ತರಬೇಕಾಯಿತು.

ಮದ್ಯಕ್ಕೆ ನೂಕುನುಗ್ಗಲು

ADVERTISEMENT

ಜಿಲ್ಲೆಯಲ್ಲಿ ಒಟ್ಟು 88 ವೈನ್‌ ಶಾಪ್‌ ಗಳಿದ್ದು, ಇಷ್ಟು ಅಂಗಡಿಗಳ ಮುಂದೆ ಪಾನಪ್ರಿಯರು ಮದ್ಯಕ್ಕಾಗಿ ಕಾದು ನಿಂತಿದ್ದರು. ಎಂಆರ್‌ಪಿ, ಎಂಎಸ್‌ಐಎಲ್‌ ಮಳಿಗೆಗಳ ಮುಂಭಾಗ ಬ್ಯಾರಿಕೇಡ್‌ಗಳು, ಕಂಬಿಗಳನ್ನು ಹಾಕಿ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಲಾಗಿತ್ತು.

ಬೆಳಿಗ್ಗೆ 9ಕ್ಕೆ ಮದ್ಯ ಮಾರಾಟ ಪ್ರಕ್ರಿಯೆ ಆರಂಭಗೊಂಡಿದ್ದು, ಕೆಲವು ಕಡೆ ಜನರ ಸಾಲು ಬೆಳೆಯುತ್ತಲೇ ಹೋಯಿತು. ರಾಮನಗರ ಬ್ರಿಟಿಷ್‌ ಲಿಕ್ಕರ್ಸ್‌ ಅಂಗಡಿಯ ಮುಂದೆ ನೂರಾರು ಮಂದಿ ನೆರೆದಿದ್ದು, ಗ್ರಾಹಕರನ್ನು ಚದುರಿಸಲು ಪೊಲೀಸರು ಬೆತ್ತ ಹಿಡಿಯುವ ಪರಿಸ್ಥಿತಿ ನಿರ್ಮಾಣ ಆಯಿತು. ವಿನಾಯಕ ನಗರದಲ್ಲಿನ ಎಂಎಸ್‌ಐಲ್‌ ಮುಂದೆ ಮಹಿಳೆಯರೂ ಸಾಲಿನಲ್ಲಿ ನಿಂತಿದ್ದರು.

ಸೋಮವಾರ ಸಂಜೆ 7ರವರೆಗೂ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಮದ್ಯದಂಗಡಿಗಳಲ್ಲಿ ನಡೆದ ವಹಿವಾಟಿನ ಪ್ರಮಾಣ ಇನ್ನೂ ಬಹಿರಂಗವಾಗಿಲ್ಲ. ಕೋಟಿ ಲೆಕ್ಕದಲ್ಲಿ ವಹಿವಾಟು ನಡೆದಿದೆ ಎಂದು ಅಧಿಕಾರಿಗಳು ಹೇಳಿದರು. ಮದ್ಯ ಸೇವನೆ ಮತ್ತಿನಲ್ಲಿ ಕೆಲವರು ನಗರದ ಬಸ್‌ ನಿಲ್ದಾಣದ ಬಳಿ ಪರಸ್ಪರ ಹೊಡೆದಾಡಿಕೊಂಡ ಘಟನೆಯೂ ನಡೆಯಿತು.

ಬಸ್ ಸಂಚಾರ: ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸೋಮವಾರ ಬೆಳಿಗ್ಗೆಯಿಂದಲೇ ಆರಂಭಗೊಂಡಿತು. ಜಿಲ್ಲೆಯ ಒಳಗೆ ಮಾತ್ರ ಈ ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಬೆಳಗ್ಗೆ 7ಕ್ಕೆ ಆರಂಭಗೊಂಡ ಬಸ್ ಸಂಚಾರ ಸಂಜೆ 7ರ ವೇಳೆಗೆ ಮುಕ್ತಾಯವಾಯಿತು. ಜಿಲ್ಲಾ ಕೇಂದ್ರದಿಂದ ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಿಗೆ ಈ ವಾಹನಗಳು ಸಂಚರಿಸಿದವು. ಬಸ್‌ಗಳ ಒಳಗೆ ಪರಸ್ಪರ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಯಿತು. ಪ್ರತಿ ವಾಹನದ ಒಳಗೆ ಗರಿಷ್ಠ 28 ಮಂದಿಗೆ ಮಾತ್ರ ಅವಕಾಶ ನೀಡಲಾಯಿತು. ನಿರ್ವಾಹಕರು ಪ್ರಯಾಣಿಕರಿಗೆ ಟಿಕೆಟ್ ನೀಡುವ ಜೊತೆಗೆ ಅವರ ಹೆಸರು, ಮೊಬೈಲ್ ಸಂಖ್ಯೆಯ ವಿವರಗಳನ್ನೂ ಪಡೆದರು.

ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜಕುಮಾರ್ ಈ ಕುರಿತು ಪ್ರತಿಕ್ರಿಯೆ ನೀಡಿ ‘ಲಾಕ್‌ಡೌನ್ ಮುಗಿಯುವ ತನಕ ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಮೊಬೈಲ್ ಸಂಖ್ಯೆಯನ್ನು ನಮೂದಿಸಿಕೊಳ್ಳಲಾಗುತ್ತದೆ. ಒಂದು ವೇಳೆ ಕೊರೊನಾ ಪಾಸಿಟಿವ್ ಕಂಡು ಬಂದರೆ, ಪ್ರಯಾಣಿಕರ ಪ್ರಯಾಣದ ಹಿನ್ನೆಲೆ ಪಡೆಯಲು ಇದು ಅನುಕೂಲವಾಗುತ್ತದೆ’ ಎಂದರು.

17ರವರೆಗೆ ನಿಷೇಧಾಜ್ಞೆ

ಜಿಲ್ಲೆಯಾದ್ಯಂತ ಇದೇ 17ವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಸಂಜೆ 7ರಿಂದ ಬೆಳಿಗ್ಗೆ 7ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಸೇವೆಗಳೂ ಈ ಅವಧಿಯಲ್ಲಿ ಬಂದ್‌ ಆಗಲಿವೆ. ಮಾರುಕಟ್ಟೆಗಳಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.