ADVERTISEMENT

ರಾಮನಗರ: ಚುನಾವಣೆಗೂ ಮುನ್ನ ಉಡುಗೊರೆ ಪರ್ವ

ಗ್ರಾಮೀಣ ಭಾಗದಲ್ಲಿ ವಿತರಣೆ: ಮತದಾರರಿಂದ ಆಣೆ, ಪ್ರಮಾಣ

ಓದೇಶ ಸಕಲೇಶಪುರ
Published 25 ಫೆಬ್ರುವರಿ 2024, 4:14 IST
Last Updated 25 ಫೆಬ್ರುವರಿ 2024, 4:14 IST
<div class="paragraphs"><p>ಮಾಗಡಿಯಲ್ಲಿ ಮತದಾರರಿಗೆ ಹಂಚಲು ಕಾರಿನಲ್ಲಿ ಸಾಗಿಸುತ್ತಿರುವ ಅಡುಗೆ ಉಪಕರಣಗಳ ಗಿಫ್ಟ್ ಬಾಕ್ಸ್‌ಗಳು</p></div>

ಮಾಗಡಿಯಲ್ಲಿ ಮತದಾರರಿಗೆ ಹಂಚಲು ಕಾರಿನಲ್ಲಿ ಸಾಗಿಸುತ್ತಿರುವ ಅಡುಗೆ ಉಪಕರಣಗಳ ಗಿಫ್ಟ್ ಬಾಕ್ಸ್‌ಗಳು

   

ರಾಮನಗರ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತದಾರರನ್ನು ತಮ್ಮತ್ತ ಸೆಳೆಯಲು ಮುಂದಾಗಿರುವ ಕಾಂಗ್ರೆಸ್, ಜಿಲ್ಲೆಯಲ್ಲಿ ಮತದಾರರಿಗೆ ಉಡುಗೊರೆಯ ಬಾಕ್ಸ್‌ ವಿತರಿಸುತ್ತಿರುವ ಆರೋಪ ಕೇಳಿ ಬರುತ್ತಿವೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಉಡುಗೊರೆ ಚಿತ್ರ ಹರಿದಾಡುತ್ತಿವೆ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಮತದಾರರಿಗೆ ಗಿಫ್ಟ್ ಕೂಪನ್ ಹಂಚಿಕೆ ಮಾಡಿದೆ ಎಂಬ ಆರೋಪ ಬಲವಾಗಿ ಕೇಳಿಬಂದಿತ್ತು. ಈ ಕುರಿತು ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ಕೂಡ ಕೊಟ್ಟಿದ್ದಾರೆ. ಇದೇ ವಿಷಯಕ್ಕಾಗಿ ಶಾಸಕರನ್ನು ಸ್ಥಳೀಯರು ಬಹಿರಂಗವಾಗಿಯೇ ಪ್ರಶ್ನಿಸಿದ್ದರು.

ADVERTISEMENT

ಅಡುಗೆ ಪರಿಕರ: ಈ ಘಟನೆಗಳು ಮಾಸುವುದಕ್ಕೆ ಮುಂಚೆಯೇ, ಮತ್ತೆ ಉಡುಗೊರೆ ಪರ್ವ ಶುರುವಾಗಿದೆ. ರಾಮನಗರ, ಮಾಗಡಿ ತಾಲ್ಲೂಕು ಸೇರಿದಂತೆ ವಿವಿಧೆಡೆ ಕುಕ್ಕರ್ ಸೇರಿದಂತೆ ವಿವಿಧ ರೀತಿಯ ಅಡುಗೆ ಪರಿಕರಗಳನ್ನು ಒಳಗೊಂಡ ಉಡುಗೊರೆ ಬಾಕ್ಸ್‌ಗಳನ್ನು ಕಾರ್ಯಕರ್ತರು ವಿತರಿಸುತ್ತಿದ್ದಾರೆ.

‘ಹೊಸ ವರ್ಷದ ಹಾರ್ದಿಕ ಶುಭಾಶಯಗಳು 2024’ ಎಂದು ಬರೆದಿರುವ ಈ ಬಾಕ್ಸ್‌ಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ. ಸುರೇಶ್, ಶಾಸಕರಾದ ಎಚ್‌.ಎ. ಇಕ್ಬಾಲ್ ಹುಸೇನ್ ಹಾಗೂ ಎಚ್‌.ಸಿ. ಬಾಲಕೃಷ್ಣ ಅವರ ಭಾವಚಿತ್ರ ಇವೆ. ಈ ವಿಷಯ ರಾಜಕೀಯ ಪಕ್ಷಗಳ ಮುಖಂಡರ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ.

ನೀತಿ ಸಂಹಿತೆ ಭಯ: ‘ಲೋಕ ಸಮರದ ದಿನಾಂಕ ಮಾರ್ಚ್ ತಿಂಗಳಲ್ಲಿ ಘೋಷಣೆಯಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ದಿನಾಂಕ ಘೋಷಣೆಯಾಗುತ್ತಿದ್ದಂತೆ
ನೀತಿ ಸಂಹಿತೆ ಜಾರಿಗೆ ಬರಲಿದೆ. ಆಗ ಚುನಾವಣಾ ಆಯೋಗವು ನಿಗಾ ಇಡುವುದರಿಂದ ಮತದಾರರಿಗೆ ಯಾವುದೇ ಆಮಿಷ ಸೇರಿದಂತೆ ಉಡುಗೊರೆಗಳನ್ನು ನೀಡಲಾಗದು. ಅದಕ್ಕಾಗಿ, ಕಾಂಗ್ರೆಸ್‌ನವರು ಈಗಿನಿಂದಲೇ ಮತದಾರರಿಗೆ ಉಡುಗೊರೆ ಬಾಕ್ಸ್ ವಿತರಿಸಿ ಆಣೆ–ಪ್ರಮಾಣ ಮಾಡಿಸಿಕೊಳ್ಳುತ್ತಿದ್ದಾರೆ’ ಎಂದು ರಾಮನಗರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಲ ಕ್ಷೇತ್ರಗಳಲ್ಲಿ ಈಗಾಗಲೇ ಉಡುಗೊರೆ ವಿತರಣೆ ನಡೆಯುತ್ತಿದ್ದರೆ, ಉಳಿದೆಡೆ ನಂತರ ವಿತರಣೆ ಮಾಡುವುದಕ್ಕಾಗಿ ಸಂಗ್ರಹಿಸಿ ಇಟ್ಟುಕೊಳ್ಳಲಾಗುತ್ತಿದೆ. ವಿಧಾನಸಭಾ ಚುನಾವಣೆಯಂತೆ, ಲೋಕಸಭಾ ಚುನಾವಣೆಯಲ್ಲೂ ಮತದಾರರಿಗೆ ಗಿಫ್ಟ್ ಕಾರ್ಡ್ ಮತ್ತು ಉಡುಗೊರೆ ಕೊಟ್ಟು ಮತ ಪಡೆಯಲು ಕಾಂಗ್ರೆಸ್ ಮುಂದಾಗಿದೆ. ಜನ ಇಂತಹ ಆಮಿಷಕ್ಕೆ ಮರುಳಾಗದೆ ಅವರಿಗೆ ಪಾಠ ಕಲಿಸಬೇಕಿದೆ’ ಎಂದರು.

ರಾಮನಗರದಲ್ಲಿ ಮತದಾರರಿಗೆ ಹಂಚಿರುವ ಗಿಫ್ಟ್ ಬಾಕ್ಸ್‌

ಕಾರ್ಯಕ್ರಮಕ್ಕೆ ಬಂದರಷ್ಟೇ ಕೊಡುತ್ತೇವೆ

ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಏನಾದರು ಗಿಫ್ಟ್ ಕೊಡುತ್ತೇವೆ ಎಂದಿದ್ದೇವೆ ಅಷ್ಟೆ. ಮತ್ತೇನೂ ಇಲ್ಲ. ಇಷ್ಟಕ್ಕೂ ನಾವು ಏನಾದರೂ ಕೊಟ್ಟರೆ ಯಾಕೆ ಕೊಟ್ಟಿದ್ದೀರಿ ಎನ್ನುತ್ತೀರಿ? ಕೊಡದಿದ್ದರೆ ಯಾಕೆ ಕೊಟ್ಟಿಲ್ಲ ಎನ್ನುತ್ತೀರಿ? ನಮ್ಮ ಮೇಲೆ ಪ್ರಕರಣ ದಾಖಲಿಸುತ್ತೀರಿ. ಮಾಧ್ಯಮದವರು ಮತ್ತು ವಿರೋಧಿಗಳಿಂದ ನಾವು ಬದುಕಬೇಕು ಎಂದು ಗೊತ್ತಾಗುತ್ತಿಲ್ಲ. ಸಿ.ಟಿ. ರವಿಯನ್ನು ಲೂಟಿ ರವಿ ಎನ್ನುತ್ತಾರೆ. ಹಿಂದೆ ಕಳ್ಳರು ಲೂಟಿ ಮಾಡಿದ್ದನ್ನು ಬಡವರಿಗೆ ಹಂಚುತ್ತಿದ್ದರು. ರವಿ ಯಾಕೆ ಅದೇ ರೀತಿ ಹಂಚಬಾರದು. ಆತನೇನು ಹೊಲ ಉಳುಮೆ ಮಾಡಿ ಸಂಪಾದಿಸಿದ್ದಾನೆಯೇ? ಸರ್ಕಾರದಿಂದ ಹೊಡೆದಿರುವ ದುಡ್ಡನ್ನು ಹಂಚಲು ಹೇಳಿ. ದಯಮಾಡಿ ತನ್ನ ಸಂಪಾದನೆ ಹಣದಲ್ಲಿ ಶೇ 25ರಷ್ಟನ್ನು ಬಡವರಿಗೆ ದಾನ
ಮಾಡಲಿ.

-ಎಚ್‌.ಸಿ. ಬಾಲಕೃಷ್ಣ, ಮಾಗಡಿ ಶಾಸಕ

ಮಹಿಳೆಯೊಬ್ಬರು ಗಿಫ್ಟ್ ಬಾಕ್ಸ್ ಅನ್ನು ಮನೆಗೆ ತೆಗೆದುಕೊಂಡು ಹೋಗುತ್ತಿರುವುದು

ಕಾರ್ಯಕರ್ತರು ಕೊಟ್ಟಿರಬಹುದು...

ನಾವು ಯಾರಿಗೂ ಗಿಫ್ಟ್ ಕೊಡುತ್ತಿಲ್ಲ. ಯಾರೋ ಕಾರ್ಯಕರ್ತರು ಅವರ ಖುಷಿಗಾಗಿ ಕೊಡುತ್ತಿರಬಹುದು. ಅದೂ ನನಗೆ ಗೊತ್ತಿಲ್ಲ. ಕೊಡಬಾರದು ಅಂತೇನಾದರೂ ಇದೆಯೇ? ಯಾರೂ ಕೊಡುತ್ತಿಲ್ಲವೇ? ಚುನಾವಣೆಗಳು ಬರುತ್ತವೆ ಹೋಗುತ್ತವೆ. ಸಂಘ–ಸಂಸ್ಥೆಗಳ ಚುನಾವಣೆಗಳು ಸಹ ಬರುತ್ತಿರುತ್ತವೆ. ಪ್ರತಿ ಚುನಾವಣೆಗೂ ಗಿಫ್ಟ್ ಕೊಡಲು ಸಾಧ್ಯವೆ? ಹಬ್ಬ–ಹುಣ್ಣಿಗೆ ಬಂದಾಗ ಗಣೇಶ ಅಥವಾ ರಾಮನ ಹೆಸರಿನಲ್ಲಿ ಏನೋ ಖುಷಿಯಾಗಿ ಕೊಡುತ್ತೇವಷ್ಟೆ 

-ಎಚ್.ಎ. ಇಕ್ಬಾಲ್ ಹುಸೇನ್, ಶಾಸಕ, ರಾಮನಗರ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಮನಗರದ ಹಲವು ವಾರ್ಡ್‌ಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಗಿಫ್ಟ್ ಬಾಕ್ಸ್‌ಗಳನ್ನು ಎಗ್ಗಿಲ್ಲದೆ ವಿತರಿಸುತ್ತಿದ್ದಾರೆ

-ರಾಜಶೇಖರ್, ಅಧ್ಯಕ್ಷ, ರಾಮನಗರ ತಾಲ್ಲೂಕು ಜೆಡಿಎಸ್ ಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.