
ಚನ್ನಪಟ್ಟಣ: ಇಲ್ಲಿನ ನಗರಸಭೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಲೋಕಾಯುಕ್ತ ಇನ್‌ಸ್ಪೆಕ್ಟರ್ ಸಂದೀಪ್ ಕುಮಾರ್ ಹಾಗೂ ಸಿಬ್ಬಂದಿ ಶುಕ್ರವಾರ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿದರು.
ಮೊದಲು ಸಾರ್ವಜನಿಕರ ಅರ್ಜಿ ಸ್ವೀಕೃತಿ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸಿ ಸಾರ್ವಜನಿಕರಿಂದ ಅರ್ಜಿ ಪಡೆದು ಸಕಾಲದಲ್ಲಿ ನೋಂದಣಿ ಮಾಡದಿರುವ ಬಗ್ಗೆ ನಗರಸಭೆ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಜನರನ್ನು ಸುಮ್ಮನೆ ಅಲೆದಾಡಿಸಬೇಡಿ ಎಂದು ತಾಕೀತು ಮಾಡಿದರು.
ಇ–ಖಾತೆಗಳಿಗೆ ದಾಖಲೆ ಕೊಟ್ಟು ಹಲವು ತಿಂಗಳುಗಳಿಂದ ಅಲೆದಾಡುತ್ತಿದ್ದ ಸಾರ್ವಜನಿಕರ ದಾಖಲೆ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಸಾರ್ವಜನಿಕರು ಈ ವೇಳೆ ನಿವೇಶನ ಇ–ಖಾತೆಗೆ ಸಲ್ಲಿಸಿರುವ ಅರ್ಜಿಗಳ ರಶೀದಿ ನೀಡಿ ಅರ್ಜಿಗಳು ವಿಲೇವಾರಿ ಆಗದಿರುವ ಬಗ್ಗೆ ಲೋಕಾಯುಕ್ತರಿಗೆ ದೂರು ಹೇಳಿಕೊಂಡರು.
ಈ ಬಗ್ಗೆ ಪರಿಶೀಲನೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ‘ಅರ್ಜಿಗಳ ವಿಲೇವಾರಿಗೆ ನಿಗದಿತ ಸಮಯ ಇದೆ. ಆದರೆ, ನೀವು ನಿಮ್ಮ ಬೇಜವಾಬ್ದಾರಿತನದಿಂದ ಈ ರೀತಿ ಮಾಡುತ್ತಿದ್ದೀರಿ. ಇಲ್ಲಿ ಬಂದವರಿಗೆ ಇಲ್ಲ ಸಲ್ಲದ ಸಬೂಬು ಹೇಳುವ ಬದಲು ದಾಖಲೆ ಸರಿಯಿರುವವರ ಖಾತೆ ಮಾಡಿದರೆ ಜನರು ನಿಮ್ಮ ಬಳಿ ಅಲೆದಾಡುವುದು ತಪ್ಪುತ್ತದೆ’ ಎಂದು ಸೂಚಿಸಿದರು.
ಜತೆಗೆ ಇ–ಖಾತೆ ವಿಳಂಬಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಸೂಚಿಸಿದರು. ನಗರಸಭೆ ಕಚೇರಿಗೆ ಬರುವ ಅಂಗವಿಕಲರು ಮತ್ತು ಹಿರಿಯ ನಾಗರಿಕರು ಮೆಟ್ಟಿಲು ಹತ್ತಿ ಮೊದಲನೇ ಮಹಡಿಗೆ ನಡೆದುಕೊಂಡು ಹೋಗಲು ಸಾಧ್ಯವಾಗದ ಕಾರಣ ಅಂತಹವರಿಗೆ ಮೆಟ್ಟಿಲು ಗೋಡೆಗೆ ಅಳವಡಿಸಿರುವ ಲಿಫ್ಟ್ ಗಮನಿಸಿದ ಅವರು, ಲಿಫ್ಟ್ ಮೇಲೆ ಕುಳಿತು ಚಾಲನೆ ಮಾಡಲು ಸೂಚಿಸಿದರು. ಆದರೆ, ಅದು ಚಾಲನೆಯಾಗಲಿಲ್ಲ. ಇದರಿಂದ ಬೇಸರಗೊಂಡು ಪ್ರಶ್ನಿಸಲಾಗಿ ಅದು ರಿಪೇರಿಗೆ ಬಂದಿದೆ ಎಂಬ ಉತ್ತರ ಬಂತು.
ಇದರಿಂದ ಸಿಡಿಮಿಡಿಗೊಂಡ ಅವರು, ಇದನ್ನು ಯಾವಾಗ ಅಳವಡಿಸಲಾಗಿದೆ. ಇದಕ್ಕೆ ಯಾವ ಅನುದಾನ ಬಿಡುಗಡೆ ಮಾಡಿದ್ದೀರಾ, ಲಿಫ್ಟ್ ಗೆ ಸಂಬಂಧಿಸಿದ ಬಿಲ್ ಮಾಹಿತಿ ವಿವರ ನೀಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ನಗರಸಭೆ ಆಯುಕ್ತ ಮಹೇಂದ್ರ ಕಚೇರಿಯಲ್ಲಿ ಇರಲಿಲ್ಲ. ನಂತರ ಅವರನ್ನು ಕಚೇರಿಗೆ ಕರೆಸಿಕೊಂಡ ಲೋಕಾಯುಕ್ತ ಅಧಿಕಾರಿಗಳು, ಕಚೇರಿ ಬಾಗಿಲು ಹಾಕಿಕೊಂಡು ಎಲ್ಲ ವಿಭಾಗಗಳ ಅಧಿಕಾರಿಗಳ ಜೊತೆ ಹಲವು ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು. ಎರಡು ಗಂಟೆಗೂ ಹೆಚ್ಚು ಕಾಲ ನಗರಸಭೆಯಲ್ಲಿ ಇದ್ದ ಅಧಿಕಾರಿಗಳು ನಂತರ ಯಾವುದೇ ಮಾಹಿತಿ ನೀಡದೆ ಕಚೇರಿಯಿಂದ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.