ADVERTISEMENT

ರಾಮನಗರ: ಸಭೆಯಲ್ಲಿ 42 ಪ್ರಕರಣಗಳು ಇತ್ಯರ್ಥ

ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರಿಂದ ಸಾರ್ವಜನಿಕರ ದೂರು ಅರ್ಜಿಗಳ ವಿಚಾರಣ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 2:16 IST
Last Updated 20 ನವೆಂಬರ್ 2025, 2:16 IST
ಮಾಗಡಿ ಪಟ್ಟಣದ ಡೂಮ್ ಲೈಟ್ ವೃತ್ತದ ಡಾ.ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ದೂರು ಅರ್ಜಿಗಳ ವಿಚಾರಣೆ ಹಾಗೂ ವಿಲೇವಾರಿ ಸಭೆಯು ರಾಜ್ಯ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರ ನೇತೃತ್ವದಲ್ಲಿ ನಡೆಯಿತು
ಮಾಗಡಿ ಪಟ್ಟಣದ ಡೂಮ್ ಲೈಟ್ ವೃತ್ತದ ಡಾ.ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ದೂರು ಅರ್ಜಿಗಳ ವಿಚಾರಣೆ ಹಾಗೂ ವಿಲೇವಾರಿ ಸಭೆಯು ರಾಜ್ಯ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರ ನೇತೃತ್ವದಲ್ಲಿ ನಡೆಯಿತು   

ಮಾಗಡಿ: ಪಟ್ಟಣದಲ್ಲಿ ನಡೆದ ಸಾರ್ವಜನಿಕರ ದೂರು ಅರ್ಜಿಗಳ ವಿಚಾರಣೆ ಹಾಗೂ ವಿಲೇವಾರಿ ಸಭೆಯಲ್ಲಿ ಒಟ್ಟು 42 ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥಗೊಳಿಸಲಾಯಿತು ಎಂದು ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ತಿಳಿಸಿದರು.

ಪಟ್ಟಣದ ಡೂಮ್ ಲೈಟ್ ವೃತ್ತದ ಡಾ.ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಖಾಸಗಿ ಹಾಗೂ ವಯಕ್ತಿಕ 49 ಪ್ರಕರಣಗಳನ್ನು ವಿಚಾರಣೆ ನಡೆಸಲಾಯಿತು. ಅದರಲ್ಲಿ 42 ಪ್ರಕರಣಗಳನ್ನು ಸ್ಥಳದಲ್ಲೇ ಇತ್ಯರ್ಥಗೊಳಿಸಲಾಯಿತು. ವಿಚಾರಣೆಯ ತೀರ್ಮಾನದಲ್ಲಿ ಅಸಮಾಧಾನವಿರುವ ಕೆಲವು ಪ್ರಕರಣಗಳನ್ನು ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳು ಹಾಗೂ ಇತರೆ ನ್ಯಾಯಾಲಯದ ಮೊರೆ ಹೋಗಲು ಸಲಹೆ ನೀಡಲಾಯಿತು ಎಂದರು.

ಪ್ರತಿಯೊಂದು ಪ್ರಕರಣದಲ್ಲೂ ನಾಲ್ಕರಿಂದ ಐದು ಜನ ವಿರುದ್ಧದವರು ಇದ್ದರು. ಮಾಗಡಿ ತಾಲ್ಲೂಕಿಗೆ ಸಂಬಂಧಿಸಿದ ಕೆರೆ, ರಸ್ತೆ ಒತ್ತುವರಿ, ಶಾಲಾ ಬಸ್‌ ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದ ಪ್ರಕರಣಗಳಿದ್ದು, ತನಿಖಾಧಿಕಾರಿಗಳ ವರದಿ ಇಲ್ಲದೆ ತೀರ್ಮಾನಿಸುವ ಅಸಾಧ್ಯ. ಹಾಗಾಗಿ ಪ್ರಕರಣವನ್ನು ತನಿಖೆಗೆ ಒಳಪಡಿಸಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಪರಿಶೀಲನೆ ನಡೆಸಿ ಅವುಗಳ ವಿಚಾರಣೆ ಮಾಡಲಾಗುವುದು ಎಂದರು.

ADVERTISEMENT

‘ಸಮಾಜದಲ್ಲಿ ಶಾಶ್ವತವಾಗಿ ಉಳಿಯುವುದು ಉತ್ತಮವಾಗಿ ಮಾಡಿದ ಕೆಲಸ. ಹಾಗಾಗಿ ಸರ್ಕಾರಿ ಅಧಿಕಾರಿಗಳು, ನೌಕರರು ಸಾರ್ವಜನಿಕರಿಗೆ ಅನುಕೂಲವಾಗುವ ಕೆಲಸ ಮಾಡಿ ಅವರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ’ ಎಂದು ಕಿವಿಮಾತು ಹೇಳಿದರು.

‘ಪ್ರತಿ ಇಲಾಖೆಯಲ್ಲಿ ಸಿಗುವ ಸೌಲಭ್ಯವನ್ನು ಅಧಿಕಾರಿಗಳು ನೋಟಿಸ್ ಬೋರ್ಡ್‌ನಲ್ಲಿ ಹಾಕಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಸಿಇಒ ಗಮನಹರಿಸಬೇಕು. ಅಧಿಕಾರಿಗಳು ಜನತೆಗೆ ಉತ್ತಮ ಆಡಳಿತ ಒದಗಿಸಿದರೆ ಇಲಾಖೆಯ ಮೇಲೆ ಜನತೆಗೆ ನಂಬಿಕೆ ಬರುತ್ತದೆ. ಅಧಿಕಾರಿಗಳು ಕರ್ತವ್ಯದಲ್ಲಿ ಲೋಪ ಎಸಗದಂತೆ ಕಾರ್ಯ ನಿರ್ವಹಿಸಿ’ ಎಂದು ಸೂಚಿಸಿದರು.

‘1984ರಲ್ಲಿ ಲೋಕಾಯುಕ್ತ ಜಾರಿಗೆ ಬಂದಿದೆ. ಸಾರ್ವಜನಿಕರು ನಮಗೆ ದೂರು ಸಲ್ಲಿಸಿದರೆ ತನಿಖೆ ಕೈಗೊಂಡು ಕಾನೂನು ಕ್ರಮ ಕೈಗೊಳ್ಳುತ್ತೇವೆ. ನಾನು ರಾಜ್ಯದ ಉಪಲೋಕಾಯುಕ್ತರಾಗಿ ಕರ್ತವ್ಯಕ್ಕೆ ಸೇರಿದಾಗಿನಿಂದ 2,500 ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅವುಗಳನ್ನು ತಾಲ್ಲೂಕು ಹಾಗೂ ಜಿಲ್ಲಾ ಹಂತದಲ್ಲಿ ಸಭೆ ನಡೆಸಿ ಬಗೆಹರಿಸುವ ಕೆಲಸ ಮಾಡಲಾಗುತ್ತಿದೆ’ ಎಂದರು.

ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ದೂರುಗಳನ್ನು ಬೆಳಗ್ಗೆಯಿಂದ ಸಂಜೆವರೆಗೂ ಉಪಲೋಕಾಯುಕ್ತರು ವಿಚಾರಣೆ ನಡೆಸಿದರು.

ಸಿವಿಲ್ ನ್ಯಾಯಾಧೀಶ ಹಾಗೂ ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಿ.ಎಂ.ಪಾಟೀಲ್, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ವಿಚಾರಣೆಗಳು-5ರ ಉಪನಿಬಂಧಕ ಲಕ್ಷ್ಮಿ ನಿಂಗಪ್ಪ ಗರ್ಗ್‌, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತಾ ಪಿ.ಆರ್., ಜಿಲ್ಲಾಧಿಕಾರಿ ಯಶವಂತ ಗುರುಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಮೋಲ್ ಜೈನ್, ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ಲೋಕಾಯುಕ್ತ ಎಸ್‌ಪಿ ಸ್ನೇಹ ಪಿ.ವಿ., ಉಪವಿಭಾಗಾಧಿಕಾರಿ ಬಿನೋಯ್, ತಹಶೀಲ್ದಾರ್ ಶರತ್ ಕುಮಾರ್, ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಮತ್ತು ಸಾರ್ವಜನಿಕರು

ಸಭೆಯಲ್ಲಿ ಫೋನ್‌ನಲ್ಲಿದ್ದ ಮಹಿಳೆಗೆ ತರಾಟೆ

‘ಸಭೆಯಲ್ಲಿ ಉಪ ಲೋಕಾಯುಕ್ತ ನ್ಯಾ.ಕೆ.ಎನ್.ಫಣೀಂದ್ರ ಅವರು ಮಾತನಾಡುವ ವೇಳೆ ಸಭೆಯಲ್ಲಿ ಕುಳಿತಿದ್ದ ಮಹಿಳಾ ಅಧಿಕಾರಿಯೊಬ್ಬರು ಫೋನ್‌ನಲ್ಲಿ ಮಾತನಾಡುವುದನ್ನು ಗಮನಿಸಿ ಲೋಕಾಯುಕ್ತರು ನಾನು ಬೆಂಗಳೂರಿನಿಂದ ಇಲ್ಲಿಗೆ ಕೆಲಸವಿಲ್ಲದೆ ಬಂದಿಲ್ಲ. ನಿಮ್ಮ ಕರ್ತವ್ಯ ಏನೆಂಬುದನ್ನು ತಿಳಿದು ವರ್ತಿಸಿ. ಉಡಾಫೆ ವರ್ತನೆ ತೋರಿಸಬೇಡಿ’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.