ADVERTISEMENT

ನದಿಗೆ ಬಿದ್ದ ಮಾದಪ್ಪನ ಭಕ್ತರು: ಮಹಿಳೆಯ ಶವ ಪತ್ತೆ

ಕಾಲ್ನಡಿಗೆ ವೇಳೆ ಸಂಗಮ ಬಳಿ ಘಟನೆ: ಮಹಿಳೆಯ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 19:14 IST
Last Updated 25 ಫೆಬ್ರುವರಿ 2022, 19:14 IST
ಸಂಗಮ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಕಾವೇರಿ ನದಿ ದಾಟುತ್ತಿರುವ ಭಕ್ತರ ಸಮೂಹ
ಸಂಗಮ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಕಾವೇರಿ ನದಿ ದಾಟುತ್ತಿರುವ ಭಕ್ತರ ಸಮೂಹ   

ರಾಮನಗರ: ಕನಕಪುರ ತಾಲ್ಲೂಕಿನ ಸಂಗಮದಲ್ಲಿ ಮಹದೇಶ್ವರನ ಕೆಲವು ಭಕ್ತರು ಕಾಲ್ನಡಿಗೆಯಲ್ಲಿ ಕಾವೇರಿ ನದಿ ದಾಟುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿದ್ದು, ಬಹುತೇಕರನ್ನು ರಕ್ಷಿಸಲಾಗಿದೆ. ಆದರೆ, ನದಿ ಪಾತ್ರದಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.

ಈ ಭಾಗದ ಭಕ್ತರು ಶಿವರಾತ್ರಿ ಅಂಗವಾಗಿ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುವ ವಾಡಿಕೆ ಇದೆ. ಅದರಂತೆ ಗುರುವಾರ ಸಂಜೆ ಪಾದಯಾತ್ರಿಗಳುಸಂಗಮದಲ್ಲಿ ಕಾವೇರಿ ನದಿ ದಾಟುತ್ತಿದ್ದ ವೇಳೆ ನೀರಿನ ಪ್ರವಾಹ ಹೆಚ್ಚಾಗಿ, ರಕ್ಷಣೆಗೆಂದು ಕಟ್ಟಿದ್ದ ಹಗ್ಗ ಆಚೀಚೆ ಆಗಿ ಹತ್ತಾರು ಮಂದಿ ಕೊಚ್ಚಿ ಹೋಗುತ್ತಿದ್ದರು. ಪಕ್ಕದಲ್ಲೇ ಇದ್ದವರು ಕೆಲವರನ್ನು ರಕ್ಷಣೆ ಮಾಡಿದ್ದಾರೆ. ಇನ್ನೂ ಕೆಲವರು ಅಕ್ಕಪಕ್ಕದ ಮರಗಿಡಗಳನ್ನು ಹಿಡಿದು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೂ ಕೆಲವರು ನೀರಿನಲ್ಲಿ ಕೊಚ್ಚಿ ಹೋದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಘಟನೆ ನಡೆದ ಸ್ಥಳವು ಕಾವೇರಿ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿದ್ದು, ಇಲ್ಲಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಆದರೆ, ಧಾರ್ಮಿಕ ಕಾರಣಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಕಾಲ್ನಡಿಗೆಗೆ ಅವಕಾಶ ನೀಡುತ್ತಾ ಬಂದಿದ್ದಾರೆ.

ADVERTISEMENT

ನದಿ ದಾಟುವಾಗ ಯಾವುದೇ ಸುರಕ್ಷತಾ ಕ್ರಮ ಅನುಸರಿಸುತ್ತಿಲ್ಲ. ಕಾಡಿನಲ್ಲಿ ಸಾಗುವಾಗ ವನ್ಯಜೀವಿಗಳ ದಾಳಿಯ ಅಪಾಯವೂ ಇದೆ. ಹೀಗಿದ್ದೂ ಧಾರ್ಮಿಕ ಕಾರಣಕ್ಕೆ ಕಾಲ್ನಡಿಗೆಗೆ ಯಾವುದೇ ಅಡ್ಡಿ ಮಾಡಿಲ್ಲ. ಈವರೆಗೆ ಇಂತಹ ಘಟನೆ ನಡೆದಿರಲಿಲ್ಲ ಎನ್ನುತ್ತಾರೆ ಅರಣ್ಯ ಇಲಾಖೆಯ ಸಿಬ್ಬಂದಿ.

ನದಿಯಲ್ಲಿ ನೀರಿನ ಹರಿವು ಏಕಾಏಕಿ ಏರಿಕೆಯಾಗಿ ಈ ಅನಾಹುತಕ್ಕೆ ಕಾರಣ. ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಬಹುತೇಕರನ್ನು ರಕ್ಷಿಸಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್‌ ಹೇಳಿದರು.

* ಕಾವೇರಿ ವನ್ಯಜೀವಿಧಾಮಕ್ಕೆ ಸಾರ್ವಜನಿಕರ ಪ್ರವೇಶ ನಿಷಿದ್ಧ. ಇದು ಪ್ರತಿ ವರ್ಷದ ಧಾರ್ಮಿಕ ಕಾರ್ಯಕ್ರಮವಾದ್ದರಿಂದ ಅಡ್ಡಿಪಡಿಸಿಲ್ಲ. ಇನ್ನು ಮುಂದೆ ಎಚ್ಚರ ವಹಿಸುತ್ತೇವೆ.

-ದೇವರಾಜು ಆರ್‌ಎಫ್‌ಒ, ಸಂಗಮ ವನ್ಯಜೀವಿ ವಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.