
ಮಾಗಡಿ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪಟ್ಟಣದ ಕೋಟೆ ಬಯಲಿನಲ್ಲಿ ಸೋಮವಾರ ಸ್ವಾತಂತ್ರ್ಯ ದಿನಾಚರಣೆ ಅದ್ದೂರಿಯಾಗಿ ನಡೆಯಿತು. ಧ್ವಜಾರೋಹಣ ನೆರವೇರಿದ ಬಳಿಕ ಎಎಸ್‌ಐ ಮಂಜುನಾಥ್ ನೇತೃತ್ವದಲ್ಲಿ ಪೊಲೀಸರು ಧ್ವಜವಂದನೆ ಸಲ್ಲಿಸಿದರು.
ರಾಷ್ಟ್ರಪಿತ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿದ ಶಾಸಕ ಎ.ಮಂಜುನಾಥ್ ಮಾತನಾಡಿ, ರಾಷ್ಟ್ರೀಯ ವಿಮೋಚನೆ ಎನ್ನುವುದು ವಸಾಹತುಶಾಹಿಯಿಂದ ವಿಮೋಚನೆ ಪಡೆಯುವುದಾಗಿದೆ ಎದು ಹೇಳಿದರು.
ಗಾಂಧೀಜಿ ಮತ್ತು ತಂಡದ ಹೋರಾಟಗಾರರು ಶಾಂತಿಯುತ ಅಹಿಂಸಾತ್ಮಕ, ನೈತಿಕ ಚಳವಳಿಯ ಮೂಲಕ ಬ್ರಿಟಿಷರ ಆಳ್ವಿಕೆಯನ್ನು ಕೊನೆಗಾಣಿಸಲು ಅವಿರತವಾಗಿ ಶ್ರಮಿಸಿದರು. ಜೀವದ ಹಂಗು ತೊರೆದು ದೇಶದ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದ ತ್ಯಾಗ ಬಲಿದಾನಗಳನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸಂವಿಧಾನದ ಅನ್ವಯ ರೈತರ ಮಗ ಎಚ್.ಡಿ.ದೇವೇಗೌಡ ಮತ್ತು ಚಹಾ ಮಾರುತ್ತಿದ್ದ ನರೇಂದ್ರ ಮೋದಿ ಮತ್ತು ಬುಡಕಟ್ಟು ಸಮುದಾಯದ ಮಹಿಳೆ ರಾಷ್ಟ್ರಪತಿ ಆಗ ಬಹುದು ಎಂಬುದ ಸಾಬೀತಾಗಿದೆ ಎಂದರು.
ತಹಶೀಲ್ದಾರ್ ಶ್ರೀನಿವಾಸ್ ಪ್ರಸಾದ್ ಧ್ವಜಾರೋಹಣ ನೆರವೇರಿಸಿದರು. ಶಾಲಾ ಮಕ್ಕಳು ಧ್ವಜವಂದನೆ ಸಲ್ಲಿಸಿದರು. ವಿವಿಧ ಶಾಲಾ ಕಾಲೇಜಿನ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರವಿಕುಮಾರ್ ತಂಡದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಡೆಸಿಕೊಟ್ಟ ಯಕ್ಷಗಾನ, ಕಂಸಾಳೆ, ವೀರಗಾಸೆ ಸಾಮೂಹಿಕ ನೃತ್ಯಕ್ಕೆ ಪ್ರಥಮ ಬಹುಮಾನ ಸಿಕ್ಕಿತು.
ಭಾರತೀಯ ವಾಯುಸೇನೆ ನಿವೃತ್ತ ಅಧಿಕಾರಿ ಶಿವಲಿಂಗಯ್ಯ, ರಾಜ್ಯ ಜೆಡಿಎಸ್ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ಜೆಡಿಎಸ್ ಮುಖಂಡರಾದ ಕಲ್ಕೆರೆ ಶಿವಣ್ಣ, ಪುರುಷೋತ್ತಮ್, ವಿಜಯಕುಮಾರ್, ಬಿ.ಆರ್.ಗುಡ್ಡೇಗೌಡ, ಶಿವರಾಮಯ್ಯ, ದಿನೇಶ್, ಬಸವಲಿಂಗಯ್ಯ, ಎಂ.ಕೆಂಪೇಗೌಡ, ಡಿ.ಜಿ.ಕುಮಾರ್, ಜಯಕುಮಾರ್, ಕಾಂಗ್ರೆಸ್ ಮುಖಂಡರಾದ ಕಲ್ಪನಾ ಶಿವಣ್ಣ, ಕಮಲಮ್ಮ, ಬಿಜೆಪಿ ಮುಖಂಡ ರಂಗಧಾಮಯ್ಯ, ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜು, ಉಪಾಧ್ಯಕ್ಷ ರಹಮತ್, ಸದಸ್ಯರಾದ ನಾಗರತ್ನಮ್ಮ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.