ADVERTISEMENT

ಮಾಗಡಿ | ಪಂಚ ಗ್ಯಾರಂಟಿ ಜತೆಗೆ ಆರೋಗ್ಯ, ಶಿಕ್ಷಣಕ್ಕೂ ಒತ್ತು: ಎಚ್.ಸಿ.ಬಾಲಕೃಷ್ಣ

ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ ಶಾಸಕ ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 8:04 IST
Last Updated 16 ಆಗಸ್ಟ್ 2025, 8:04 IST
ಮಾಗಡಿ ಕೋಟೆ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಲಾ ಮಕ್ಕಳು ನಡೆಸಿಕೊಟ್ಟ ಪಥಸಂಚಲನ  
ಮಾಗಡಿ ಕೋಟೆ ಮೈದಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಾಲಾ ಮಕ್ಕಳು ನಡೆಸಿಕೊಟ್ಟ ಪಥಸಂಚಲನ     

ಮಾಗಡಿ: ಪಂಚ ಗ್ಯಾರಂಟಿಗಳ ಜತೆಗೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಕೊಡಲಾಗುವುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಪಟ್ಟಣದ ಕೋಟೆ ಮೈದಾನದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತುವನ್ನು ನೀಡಲಾಗಿದೆ. ಮಾಗಡಿಯಲ್ಲಿ ಸುಸಜ್ಜಿತ ಹೊಸ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಇದರ ಜತೆಗೆ ತಾಯಿ-ಮಗು ಆಸ್ಪತ್ರೆ ಕೂಡ ನಿರ್ಮಾಣ ಮಾಡಲು ಅನುಮತಿ ಪಡೆಯಲಾಗುವುದು. ಕುದೂರು ಮತ್ತು ತಿಪ್ಪಸಂದ್ರದಲ್ಲಿ ಆರೋಗ್ಯ ಸೌಧ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಗುಣಮಟ್ಟದ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಕೆಲಸ ಮಾಡಲಾಗುವುದು ಎಂದರು.

ಎಸ್ಎಸ್ಎಲ್‌ಸಿ ಮತ್ತು ಪಿಯು ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕೆಪಿಎಸ್ ಶಾಲೆಗೆ ಆದ್ಯತೆ ನೀಡಲಾಗುವುದು ಎಂದರು.

ADVERTISEMENT

ಪಟ್ಟಣದ ಜೂನಿಯರ್ ಕಾಲೇಜು ಕ್ರೀಡಾಂಗಣ ₹7ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಕುದೂರಿನಲ್ಲೂ ₹4 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಮಾಡಲಾಗುವುದು ಎಂದರು.

₹16 ಕೋಟಿ ವೆಚ್ಚದಲ್ಲಿ ಜೂನಿಯರ್ ಕಾಲೇಜು ಬಳಿ ಅಡಿಟೋರಿಯಂ ನಿರ್ಮಾಣಗೊಳ್ಳಲಿದೆ. ₹5 ಕೋಟಿ ವೆಚ್ಚದಲ್ಲಿ ಶಿಕ್ಷಕರ ಭವನ, ಹೊಸ ಬಿಇಒ ಕಚೇರಿ, ಅಂಬೇಡ್ಕರ್ ಭವನ, ಕೆಎಎಸ್, ಐಎಎಸ್ ಉಚಿತ ತರಬೇತಿ ಕೋರ್ಸ್ ಆರಂಭ ಮಾಡಲಾಗುವುದು. ಮುಂದಿನ ತಿಂಗಳು ಶ್ರೀರಂಗ ಏತ ನೀರಾವರಿ ಯೋಜನೆಗೆ ಚಾಲನೆ, ಸತ್ತೇಗಾಲದಿಂದ ವೈಜಿಗುಡ್ಡ ಮತ್ತು ಮಂಚನಬೆಲೆ ಜಲಾಶಯಕ್ಕೆ ಕಾವೇರಿ ನೀರು ತುಂಬಿಸುವ ಯೋಜನೆ ಅನುಷ್ಠಾನದಲ್ಲಿ ಇದ್ದು ಎತ್ತಿನಹೊಳೆ ಮೂಲಕ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ತುಂಬಿಸಿ ಮಂಚನಬೆಲೆ ಜಲಾಶಯಕ್ಕೂ ನೀರು ತರುವ ಕೆಲಸ ಮಾಡಲಾಗುವುದು ಎಂದರು. 

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಶರತ್ ಕುಮಾರ್, ತ್ಯಾಗ–ಬಲಿದಾನ ಮೂಲಕ ಸ್ವಾತಂತ್ರ್ಯ ತಂದುಕೊಡಲು ಸಾಕಷ್ಟು ಮಹನೀಯರು ಹೋರಾಟದ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ ಎಂದರು.

ಶಾಲಾ ಮಕ್ಕಳು ನಡೆಸಿಕೊಟ್ಟ ಪಥ ಸಂಚಲನ ಹಾಗೂ ದೇಶಭಕ್ತಿ ನೃತ್ಯ ಗಮನ ಸೆಳೆಯಿತು. 

ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮೂವರು ವಿದ್ಯಾರ್ಥಿಗಳಿಗೆ ಹಾಗೂ ಮೊಬೈಲ್ ಬಿಡಿ ಪುಸ್ತಕ ಹಿಡಿ ಕಾರ್ಯಕ್ರಮದ ರೂವಾರಿ ಶಿಕ್ಷಕ ಚಿಕ್ಕವೀರಯ್ಯ ಅವರಿಗೆ ತಾಲ್ಲೂಕು ಆಡಳಿತ ವತಿಯಿಂದ ಸ್ವಾತಂತ್ರೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪುರಸಭೆ ಅಧ್ಯಕ್ಷ ರಮ್ಯಾ ನರಸಿಂಹಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯರಾದ ರಹಮತ್, ಹೇಮಲತಾ, ಭಾಗ್ಯಮ್ಮ, ಅಶ್ವಥ್, ಅನಿಲ್ ಕುಮಾರ್, ಬಿಇಒ ಚಂದ್ರಶೇಖರ್, ಇ.ಒ ಜೈಪಾಲ್, ಕಾಸಪ ಅಧ್ಯಕ್ಷ ತಿ.ನಾ.ಪದ್ಮನಾಭ್, ಪೊಲೀಸ್ ಇನ್‌ ಸ್ಪೆಕ್ಟರ್ ಗಿರಿರಾಜ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಜಯರಾಂ ಇತರರು ಇದ್ದರು.

ಕಾರ್ಯಕ್ರಮಕ್ಕೆ ಶಾಸಕ ಎಚ್.ಸಿ.ಬಾಲಕೃಷ್ಣ ಗಿಡಕ್ಕೆ ನೀರು ಹಾಕುವ ಮೂಲಕ ಚಲನೆ ನೀಡಿದರು. ತಹಶೀಲ್ದಾರ್ ಶರತ್ ಕುಮಾರ್ ಜೊತೆಯಲ್ಲಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.