ಮಾಗಡಿ: ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಾಗಡಿ ಪಟ್ಟಣದಲ್ಲಿರುವ ಕೆಂಪೇಗೌಡರ ಕೋಟೆ ಅಭಿವೃದ್ಧಿಗೆ ಕಡೆಗೂ ಕಾಲ ಕೂಡಿ ಬಂದಿದೆ. ರಾಜ್ಯ ಸರ್ಕಾರವು ಜೂನ್‌ನಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಕೋಟೆ ಅಭಿವೃದ್ಧಿಗೆ ₹103 ಕೋಟಿ ಅನುದಾನ ಬಿಡುಗಡೆಗೆ ಅನುಮೋದನೆ ಸಿಕ್ಕಿದೆ.
ಇದರೊಂದಿಗೆ ಕೆಂಪೇಗೌಡರ ಅಭಿಮಾನಿಗಳ ಕನವರಿಸುತ್ತಿದ್ದ ಕೋಟೆ ಅಭಿವೃದ್ಧಿಯ ಕನಸು ನನಸಾಗುವ ದಿನಗಳು ಸಮೀಪಿಸುತ್ತಿವೆ. ಸಂಪುಟದಲ್ಲಿ ಅನುದಾನ ಬಿಡುಗಡೆ ಒಪ್ಪಿಗೆ ಸಿಕ್ಕ ಬಳಿಕ, ಕೋಟೆ ಅಭಿವೃದ್ಧಿಗೆ ನೀಲನಕ್ಷೆ ಸಹ ಸಿದ್ಧವಾಗಿದೆ. ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ದಿನಾಂಕವೂ ನಿಗದಿಯಾಗಿದೆ.
ದೇವಸ್ಥಾನಕ್ಕೂ ಅಭಿವೃದ್ಧಿ ಭಾಗ್ಯ: ಕೋಟೆ ಜೊತೆಗೆ ಕೆಂಪೇಗೌಡರು ನಿರ್ಮಿಸಿದ ಮತ್ತು ಜೀರ್ಣೋದ್ಧಾರ ಮಾಡಿದ ದೇವಸ್ಥಾನಗಳು ಸೇರಿದಂತೆ ವಿವಿಧ ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಮುಂದಾಗಿರುವುದು ಕೆಂಪೇಗೌಡರ ಅಭಿಮಾನಿಗಳಲ್ಲಿ ಹರ್ಷ ತಂದಿದೆ.
‘₹103 ಕೋಟಿ ಅನುದಾನದಲ್ಲಿ ಕೋಟೆ ಅಭಿವೃದ್ಧಿ ಜೊತೆಗೆ, ಕೆಂಪೇಗೌಡರ ಕಟ್ಟಿಸಿರುವ ಪ್ರಸನ್ನ ಸೋಮೇಶ್ವರ ಸ್ವಾಮಿ ದೇವಸ್ಥಾನ, ಕೆಂಪೇಗೌಡರ ಸಮಾಧಿ, ಹೊಂಬಾಳಮ್ಮ ಕೆರೆಗಳನ್ನು ಒಳಗೊಂಡಂತೆ ಕೆಂಪೇಗೌಡರ ಕಾಲದ ಐತಿಹಾಸಿಕ ಸ್ಥಳಗಳ ಅಭಿವೃದ್ಧಿ ಮಾಡಲು ಬದ್ಧರಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದ್ದಾರೆ.
ಹಿಂದೆ ದುರಸ್ತಿಯಾಗಿತ್ತು: ಸದ್ಯ ಕೇಂದ್ರ ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಕೋಟೆ ದುರಸ್ತಿಗೆ ₹350 ಕೋಟಿ ಹಣ ಮಂಜೂರಾಗಿತ್ತು. ಆಗಲೂ ಮಾಗಡಿಯಲ್ಲಿ ಎಚ್.ಸಿ. ಬಾಲಕೃಷ್ಣ ಅವರೇ ಶಾಸಕರಾಗಿದ್ದರು. ಆದರೆ, ದುರಸ್ತಿ ಕಾರ್ಯ ಪೂರ್ಣಪ್ರಮಾಣದಲ್ಲಿ ನಡೆಯಲಿಲ್ಲ.
ಮಾಗಡಿ-ಬೆಂಗಳೂರು ಮುಖ್ಯರಸ್ತೆಯ ಕೋಟೆ ಮಾರಮ್ಮ ದೇವಸ್ಥಾನ ಹೆಬ್ಬಾಗಿಲ ಬಳಿ ಇರುವ ಕಾವಲು ಗೋಪುರ ಸಹ ಮಳೆ–ಗಾಳಿಗೆ ಕುಸಿದು ಬಿದ್ದಿದೆ. ಅದನ್ನು ಸಹ ಇಲ್ಲಿಯವರೆಗೂ ದುರಸ್ತಿ ಮಾಡಿಲ್ಲ. ಪೊಲೀಸ್ ಠಾಣೆ ಮುಂಭಾಗದ ಪಶ್ಚಿಮ ಗೋಪುರದ ದುರಸ್ತಿಯೂ ಪೂರ್ಣವಾಗಿಲ್ಲ. ಇದೀಗ, ಮಳೆಯಿಂದ ಮಣ್ಣೆಲ್ಲ ಕಸಿಯುತ್ತಿದೆ ಎಂದು ಕೆಂಪೇಗೌಡರ ಅಭಿಮಾನಿಯೊಬ್ಬರು ಬೇಸರ ವ್ಯಕ್ತಪಡಿಸಿದರು.
ಕೋಟೆ ಇತಿಹಾಸ: ಜಯನಗರದ ಅಚ್ಯುತರಾಯನಿಂದ ಮಾಗಡಿ ಪ್ರಾಂತ್ಯ ಜಹಗೀರಾಗಿ ಪಡೆದಿದ್ದ ಸಾಮಂತರಾಯ ಎಂಬ ಪಾಳೇಗಾರ ಸಾವನದುರ್ಗದ ನೆಲೆಯಿಂದ ಕ್ರಿ.ಶ 1543ರಿಂದ 1571ರವರೆಗೆ ಆಳ್ವಿಕೆ ನಡೆಸಿದ್ದ. ಸಂಪಾಜರಾಯ ಮತ್ತು ಚಿಕ್ಕರಾಯ, ಸಾವಂತರಾಯನ ಉತ್ತರಾಧಿಕಾರಿಗಳು. ಪುತ್ರ ಸಂತಾನವಿಲ್ಲದ ಚಿಕ್ಕರಾಯನನ್ನು ಮೂಲೆಗುಂಪು ಮಾಡಿದ ಗುಡೇಮಾರನಹಳ್ಳಿ ಪಾಳೇಗಾರ ತಳಾರಿ ಗಂಗಪ್ಪನಾಯಕ ಮಾಗಡಿಯಲ್ಲಿ ಮಣ್ಣಿನ ಕೋಟೆ ಕಟ್ಟಿಸಿದ ಎನ್ನುತ್ತದೆ ಚರಿತ್ರೆ.
ಗಂಗಪ್ಪನಾಯಕ ವಿಜಯನಗರದ ಅಧಿಪತಿಗಳನ್ನು ಕ್ರಮೇಣ ವಿರೋಧಿಸತೊಡಗಿದ. ಆಗ, ವಿಜಯಪುರದ ದಂಡನಾಯಕ ರಣದುಲ್ಲಾಖಾನ್ ಬೆಂಗಳೂರು ವಶಪಡಿಸಿಕೊಂಡಿದ್ದ. ಮುಂದೆ ಇಮ್ಮಡಿ ಕೆಂಪೇಗೌಡ ಬೆಂಗಳೂರಿನಿಂದ ನೆಲೆಪಟ್ನದಲ್ಲಿ ತಳಾರಿ ಗಂಗಪ್ಪನಾಯಕನನ್ನು ಕೊಂದು ಸಾವನದುರ್ಗ ವಶಪಡಿಸಿಕೊಂಡ. ಮಾಗಡಿಯ ಮಣ್ಣಿನ ಕೋಟೆ ಹೊರಮೈಗೆ ಕಲ್ಲುಗಳನ್ನು ಕಟ್ಟಿಸಿದ. ಕೋಟೆ ಒಳಗೆ ಕೋಟೆ ರಾಮೇಶ್ವರಸ್ವಾಮಿ, ಶ್ರೀಕೃಷ್ಣ ದೇವಾಲಯ, ಅರಮನೆ ಕಟ್ಟಿಸಿದ ಇಮ್ಮಡಿ ಕೆಂಪೇಗೌಡ ಕ್ರಿ.ಶ. 1638ರವರೆಗೆ ಆಳ್ವಿಕೆ ನಡೆಸಿದ ಎನ್ನುತ್ತವೆ ದಾಖಲೆಗಳು.
ಕೋಟೆ ಅಭಿವೃದ್ಧಿಪಡಿಸಿದರೆ ಮಾಗಡಿ ಪಟ್ಟಣವು ಅತ್ಯುತ್ತಮ ಪ್ರವಾಸಿ ತಾಣವಾಗುತ್ತದೆ. ಅಭಿವೃದ್ಧಿ ಮೂಲಕ ಕೆಂಪೇಗೌಡರಿಗೆ ಹೆಸರು ತರುವ ಕೆಲಸ ಆಗಬೇಕು. ನಮ್ಮ ಪೂರ್ವಿಕರ ಕುರುಹನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿ ಕೊಡುವ ಕೆಲಸವಾಗಲಿ– ಡಾ. ಮುನಿರಾಜಪ್ಪ ಇತಿಹಾಸ ತಜ್ಞ ಮಾಗಡಿ
ಕೋಟೆ ಅಭಿವೃದ್ಧಿಗೆ ಶಾಸಕ ಬಾಲಕೃಷ್ಣ ಅವರು ಸಾಕಷ್ಟು ಶ್ರಮ ಹಾಕುತ್ತಿದ್ದಾರೆ. ಇದೀಗ ಸರ್ಕಾರದಿಂದ ಅನುದಾನ ತಂದಿದ್ದಾರೆ. ಕೋಟೆ ಅಭಿವೃದ್ಧಿಯಾದರೆ ಮಾಗಡಿ ಪಟ್ಟಣಕ್ಕೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಲಿದೆ– ರಾಮಕೃಷ್ಣಯ್ಯ ಅಧ್ಯಕ್ಷ ಮಾಗಡಿ ತಾಲ್ಲೂಕು ಒಕ್ಕಲಿಗ ಸಂಘ
- ಕೆಂಪೇಗೌಡರು ಕಟ್ಟಿಸಿರುವ ಸೋಮೇಶ್ವರ ಸ್ವಾಮಿ ದೇವಸ್ಥಾನದ ಗೋಪುರಕ್ಕೆ ಕಳಶ ಇಡುವ ಕೆಲಸವನ್ನು ಮೊದಲು ಮಾಡಬೇಕು. ಕೆಂಪೇಗೌಡರ ಸಮಾಧಿಯನ್ನು ಸಹ ಅಭಿವೃದ್ಧಿ ಮಾಡಬೇಕು. ಅದುವೇ ನಾವು ಅವರಿಗೆ ಕೊಡುವ ನಿಜವಾದ ಗೌರವ –ಎ.ಎಚ್. ಬಸವರಾಜು ಉಪಾಧ್ಯಕ್ಷ ಬಿಜೆಪಿ ಒಬಿಸಿ ಮೋರ್ಚಾ
ಅಭಿವೃದ್ಧಿಗೆ ನೀಲನಕ್ಷೆ ಸಿದ್ದ
₹103 ಕೋಟಿ ಅನುದಾನ ಬಿಡುಗಡೆಗೆ ಅನುಮೋದನೆ ಕೊಟ್ಟಿರುವ ಹಿನ್ನೆಲೆಯಲ್ಲಿ ಕೋಟೆ ಅಭಿವೃದ್ಧಿಗೆ ನೀಲನಕ್ಷೆ ಕೂಡ ಸಿದ್ದವಾಗಿದೆ. ಅದರ ಪ್ರಕಾರ ಕಲ್ಲಿನ ಕೋಟೆ ಪೂರ್ಣ ತಲೆ ಎತ್ತಲಿದೆ. ಕೋಟೆಗೆ ದೊಡ್ಡದಾಗ ಮುಖ್ಯದ್ವಾರ ನಿರ್ಮಾಣ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಳಭಾಗದಲ್ಲಿ ಮತ್ತು ಮೇಲ್ಭಾಗದಲ್ಲಿ ನಡಿಗೆ ಪಥ ಒಳಾಂಗಣದಲ್ಲಿ ಕೆಂಪೇಗೌಡರ ಕಾಲದ ಸಾಲುಮಂಟಪ ನಿರ್ಮಾಣವಾಗಲಿದೆ. ಮಧ್ಯಭಾಗದಲ್ಲಿ ಅಶ್ವಾರೂಢ ಕೆಂಪೇಗೌಡರ ಪ್ರತಿಮೆ ಹಾಗೂ ಅರವಂಟಿಕೆಗಳ ಚಿತ್ರಣ ಇರಲಿದೆ. ಜೊತೆಗೆ ಕೆಂಪೇಗೌಡರ ಆಡಳಿತ ಬದುಕು ಒಳಗೊಂಡ ಚರಿತ್ರೆಯ ವಸ್ತು ಸಂಗ್ರಹಾಲಯ ನಿರ್ಮಾಣವಾಗಲಿದೆ.
ಆ. 29ಕ್ಕೆ ಶಂಕುಸ್ಥಾಪನೆ;
ವರ್ಷದೊಳಗೆ ಅಭಿವೃದ್ಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರ ಸಹಕಾರದಿಂದ ಕೋಟೆ ಅಭಿವೃದ್ಧಿಗೆ ₹103 ಕೋಟಿ ಅನುದಾನ ಸಿಕ್ಕಿದೆ. ಕೋಟೆ ಅಭಿವೃದ್ಧಿಗೆ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಆ. 29ರಂದು ಹಮ್ಮಿಕೊಳ್ಳಲಾಗಿದೆ. ಅಂದು ಉಪ ಮುಖ್ಯಮಂತ್ರಿ ಸೇರಿದಂತೆ ವಿವಿಧ ಸಚಿವರನ್ನು ಮಾಗಡಿಗೆ ಕರೆಯಿಸಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಇನ್ನೊಂದು ವರ್ಷದಲ್ಲಿ ಕೋಟೆ ಅಭಿವೃದ್ಧಿ ಮಾಡಿ ನಾಡಪ್ರಭು ಕೆಂಪೇಗೌಡರಿಗೆ ಹೆಸರು ತರುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ’ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೊದಲು ಒತ್ತುವರಿ ತೆರವು ಮಾಡಿಸಲಿ’
‘ಕೆಂಪೇಗೌಡರ ಕೋಟೆ ಅಭಿವೃದ್ದಿಗೆ ಅನುದಾನ ಬಿಡುಗಡೆಯಾಗಿದೆ ಎಂದು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯವಾಗಿದೆ. ಹಿರಿದಾಗಿದ್ದ ಕೋಟೆಯ ಜಾಗ ಒತ್ತುವರಿಯಾಗಿ ಕಿರಿದಾಗಿದೆ. ಕಂದಾಯ ಇಲಾಖೆಯು ಮೊದಲು ಒತ್ತುವರಿ ತೆರವು ಮಾಡಿಸಬೇಕು. ಕೋಟೆ ಅಭಿವೃದ್ಧಿಗೆ ಮುನ್ನ ಕಂದಕದ ಮಣ್ಣು ತೆರವುಗೊಳಿಸಬೇಕು. ಕಂದಕ ಅಭಿವೃದ್ಧಿ ಮಾಡಿ ಆನಂತರ ಕೋಟೆ ಕಾಮಗಾರಿ ಪೂರ್ಣ ಮಾಡಿದರೆ ಕೆಂಪೇಗೌಡರಿಗೆ ಹೆಸರು ತರುವಂತಾಗುತ್ತದೆ’ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.