ಮಾಗಡಿ ಪಟ್ಟಣದಲ್ಲಿ ಎರಡು ಎಕರೆ ಜಾಗದಲ್ಲಿ ತಲೆ ಎತ್ತಲಿರುವ ನೂರು ಹಾಸಿಗೆ ಸಾಮರ್ಥ್ಯದ ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡದ ಮಾದರಿ
ಮಾಗಡಿ: ತಾಲ್ಲೂಕಿನ ಬಹು ದಿನಗಳ ಬೇಡಿಕೆಯಾಗಿದ್ದ ಅತ್ಯಾಧುನಿಕ ಶೈಲಿಯ ತಾಲ್ಲೂಕು ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಇಂದು ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಗ್ರಾಮೀಣ ಭಾಗದ ಜನತೆಗೆ ಎಲ್ಲಾ ರೀತಿಯ ಚಿಕಿತ್ಸೆ ದೊರೆಯಬೇಕೆಂಬ ನಿಟ್ಟಿನಲ್ಲಿ ₹41 ಕೋಟಿ ವೆಚ್ಚದಲ್ಲಿ ಎರಡು ಎಕರೆ ಜಾಗದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಧುನಿಕ ಶೈಲಿಯ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಲಿದೆ.
ಈಗಿರುವ ಆಸ್ಪತ್ರೆ ಭೂತ ಬಂಗಲೆಯಂತೆ ನಿರ್ಮಾಣವಾಗಿದ್ದು, ಯುಜಿಡಿ ಸೇರಿದಂತೆ ಯಾವ ವ್ಯವಸ್ಥೆ ಸರಿಯಿರಲಿಲ್ಲ. ಹಾಗಾಗಿ ಶಾಸಕ ಬಾಲಕೃಷ್ಣ ಸರ್ಕಾರದ ಮೇಲೆ ಒತ್ತಡ ತಂದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಒಮ್ಮೆ ಮಾಗಡಿಗೆ ಖುದ್ದಾಗಿ ಭೇಟಿ ನೀಡಿ ಆಸ್ಪತ್ರೆ ಸ್ಥಿತಿಗತಿ ಅರಿತು ಅನುದಾನ ಬಿಡುಗಡೆ ಮಾಡಿದ್ದಾರೆ.
ತಾಲ್ಲೂಕು ಕಚೇರಿ ಜಾಗದಲ್ಲಿ ಹೊಸ ಕಟ್ಟಡ: ಹಳೆ ತಾಲ್ಲೂಕು ಸರ್ಕಾರಿ ಆಸ್ಪತ್ರೆಯನ್ನು ಉಳಿಸಿಕೊಂಡು, ಪುರಸಭೆ ಮುಂಭಾಗದ ಕೆಂಪೇಗೌಡರ ಪ್ರತಿಮೆ ಜಾಗ, ಪಶು ಆಸ್ಪತ್ರೆ ಹಾಗೂ ತಾಲ್ಲೂಕು ಕಚೇರಿ ಜಾಗ ಒಳಗೊಂಡಂತೆ 2 ಎಕರೆ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲಾಗಿದೆ. ಇದಕ್ಕಾಗಿ ತಾಲ್ಲೂಕು ಕಚೇರಿಯನ್ನು ಪಟ್ಟಣದ ಎನ್ಇಎಸ್ ವೃತ್ತದ ಬಳಿ ಸ್ಥಳಾಂತರಿಸಲಾಗಿದೆ.
ಆಧುನಿಕ ಪ್ರಯೋಗಾಲಯ ನಿರ್ಮಾಣ: ನೂರು ಹಾಸಿಗೆ ಸಾಮರ್ಥ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಪ್ರಯೋಗಾಲಯ ನಿರ್ಮಿಸಲಾಗುವುದು. ಎಂಐಆರ್, ಸಿಟಿ ಸ್ಕ್ಯಾನಿಂಗ್ ಸೇರಿದಂತೆ ಎಲ್ಲಾ ರೋಗಗಳಿಗೂ ಚಿಕಿತ್ಸೆ ನೀಡುವ ರೀತಿಯಲ್ಲಿ ಆಧುನಿಕ ಯಂತ್ರೋಪಕರಣ ಒಳಗೊಂಡ ಹೊಸ ಪ್ರಯೋಗಾಲಯ ನಿರ್ಮಿಸಲಾಗುವುದು.
ಎಂಆರ್‌ಐ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಸಾರ್ವಜನಿಕರು ನೆಲಮಂಗಲಕ್ಕೆ ತೆರಳಬೇಕಿತ್ತು. ಈಗ ಮಾಗಡಿಯಲ್ಲೇ ನಿರ್ಮಾಣವಾದರೆ ಹೆಚ್ಚು ಅನುಕೂಲವಾಗಲಿದೆ.– ಪ್ರೇಮ ಮುರಳಿ, ಮಹಿಳಾ ಮುಖಂಡರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.