ಮಾಗಡಿ ಪಟ್ಟಣದ ಎನ್ಇಎಸ್ ಬಡವಾಣೆಯ ನೋಟ
ಮಾಗಡಿ: ಪಟ್ಟಣದ ಎನ್ಇಎಸ್ ಬಡಾವಣೆಗೆ ಶುಕ್ರದೆಸೆ ಬಂದಿದ್ದು, ಒಂದೇ ಸೂರಿನಡಿ ಎಲ್ಲಾ ಸರ್ಕಾರಿ ಕಟ್ಟಡಗಳು ನಿರ್ಮಾಣವಾಗುತ್ತಿವೆ.
ಪಟ್ಟಣದ ಕೂಗುಳತೆ ದೂರದಲ್ಲಿರುವ ಎನ್ಇಎಸ್ ವೃತ್ತದ ಬಳಿ ಒಂದೇ ಸೂರಿನಡಿ ತಾಲ್ಲೂಕು ಕಚೇರಿ, ಗುರುಭವನ, ಬಿಇಒ ಕಚೇರಿ, ಸಿಆರ್‌ಪಿ, ಬಿಆರ್‌ಪಿ ಕಚೇರಿ, ಬಾಬು ಜಗಜೀವನ ರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಮತ್ತು ಡಿಜಿಟಲ್ ಗ್ರಂಥಾಲಯ ನಿರ್ಮಿಸಲು ಸ್ಥಳ ನಿಗದಿಯಾಗಿದ್ದು, ಅನುದಾನ ಸಹ ಬಿಡುಗಡೆಯಾಗಿದೆ.
ಎನ್ಇಎಸ್ ವೃತ್ತವು ಸರ್ಕಾರಿ ಕಟ್ಟಡದ ಜೊತೆಗೆ ಹಲವು ಚಟುವಟಿಕಾ ಕೇಂದ್ರವಾಗಲಿದೆ. ಪ್ರಥಮ ದರ್ಜೆ ಕಾಲೇಜು, ಜೂನಿಯರ್ ಕಾಲೇಜು, ಜೂನಿಯರ್ ಕಾಲೇಜು ಮೈದಾನ, ಬಾಲಕೃಷ್ಣ ಉದ್ಯಾನವನ, ಸರ್ಕಾರಿ ಬಾಲಕಿಯರ ಮತ್ತು ಬಾಲಕರ ಹಾಸ್ಟಲ್, ಕೆಂಪೇಗೌಡ ಶಾಲೆ, ಸರ್ವೋದಯ ಶಾಲೆ, ಚಿತ್ರಮಂದಿರ, ಸಭಾಂಗಣ, ಪ್ರವಾಸಿ ಮಂದಿರ ಹೀಗೆ ಹಲವು ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಡಲಿದೆ.
ತಾಲ್ಲೂಕು ಕಚೇರಿ ಸ್ಥಳಾಂತರಕ್ಕೆ ವಿರೋಧ: ಶಾಸಕ ಎಚ್.ಸಿ.ಬಾಲಕೃಷ್ಣ ಅವರು ತಾಲ್ಲೂಕು ಕಚೇರಿಯನ್ನು ಎನ್‌ಇಎಸ್ ವೃತ್ತಕ್ಕೆ ಸ್ಥಳಾಂತರಿಸಿ, ಆ ಜಾಗದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕೆ ಮಾಜಿ ಶಾಸಕ ಎ.ಮಂಜುನಾಥ್, ರೈತ ಸಂಘದವರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಿರುವ ತಾಲ್ಲೂಕು ಕಚೇರಿ ಪಟ್ಟಣದ ಹೃದಯ ಭಾಗದಲ್ಲಿದ್ದು, ರೈತರಿಗೆ ಅನುಕೂಲವಾಗಲಿದೆ. ಇದು ಎನ್‌ಇಎಸ್ ಬಡಾವಣೆಗೆ ಸ್ಥಳಾಂತರಗೊಂಡರೆ ಪ್ರತಿನಿತ್ಯ ಆಟೊಗೆ ಹಣ ವ್ಯಯಮಾಡಬೇಕಾಗುತ್ತದೆ. ಹಾಗಾಗಿ ಇರುವ ಜಾಗದಲ್ಲೇ ಹೊಸ ತಾಲ್ಲೂಕು ಕಚೇರಿ ನಿರ್ಮಾಣವಾಗಲಿ ಎಂಬುದು ರೈತ ಸಂಘದವರ ಒತ್ತಾಯವಾಗಿದೆ.
ತಾಲ್ಲೂಕು ಕಚೇರಿ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಕಟ್ಟಡ ನೆಲಸಮ ಮಾಡುವ ಸಮಯದಲ್ಲಿ ತಾತ್ಕಾಲಿಕವಾಗಿ ಪಟ್ಟಣದ ಡೂಮ್‌ಲೈಟ್ ವೃತ್ತದ ಬಳಿ ಇರುವ ಡಾ. ಶಿವಕುಮಾರ ಸ್ವಾಮೀಜಿ ಸಭಾಂಗಣಕ್ಕೆ ಸ್ಥಳಾಂತರಿಸಲು ಸೂಚಿಸಲಾಗಿದೆ.
ಗಾಂಧಿ ಪ್ರತಿಮೆ ನಿರ್ಮಾಣ
ಮಾಗಡಿ ಪಟ್ಟಣದ ಎನ್ಇಎಸ್ ಬಡಾವಣೆಯ ಒಂದೇ ಸೂರಿನಡಿ ಎಲ್ಲಾ ಸರ್ಕಾರಿ ಕಟ್ಟಡಗಳು ಬರುವಂತೆ ಮಾಡಿ ಬಡಾವಣೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜೊತೆಗೆ ಆರು ಅಡಿ ಎತ್ತರದ ಗಾಂಧಿ ಪ್ರತಿಮೆ ನಿರ್ಮಾಣ ಮಾಡಲಾಗುವುದು.– ಎಚ್.ಸಿ.ಬಾಲಕೃಷ್ಣ, ಮಾಗಡಿ ಶಾಸಕ
ತಾತ್ಕಾಲಿಕ ತಾಲ್ಲೂಕು ಕಚೇರಿ ಸ್ಥಳಾಂತರ
ಶಾಸಕ ಎಚ್.ಸಿ.ಬಾಲಕೃಷ್ಣ ಅವರು ತಾಲ್ಲೂಕು ಕಚೇರಿ ಸ್ಥಳಾಂತರ ಮಾಡಲು ಸೂಚನೆ ನೀಡಿದ್ದು ಕಟ್ಟಡ ನೆಲಸಮ ಮಾಡುವ ಸಮಯದಲ್ಲಿ ತಾತ್ಕಾಲಿಕವಾಗಿ ಕಚೇರಿಯನ್ನು ಡಾ.ಶಿವಕುಮಾರ ಸ್ವಾಮೀಜಿ ಸಭಾಂಗಣಕ್ಕೆ ಸ್ಥಳಾಂತರಿಸಲಾಗುವುದು.– ಶರತ್‌ಕುಮಾರ್, ತಹಶೀಲ್ದಾರ್ ಮಾಗಡಿ
ಶಾಸಕರು ಮತ್ತೊಮ್ಮೆ ಯೋಚಿಸಿ ನಿರ್ಧಾರ ಕೈಗೊಳ್ಳಲಿ
ತಾಲ್ಲೂಕು ಕಚೇರಿ ಪ್ರಸ್ತುತ ಮಾಗಡಿ-ಬೆಂಗಳೂರು ಮುಖ್ಯ ರಸ್ತೆಯಲ್ಲಿದ್ದು ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ. ಈಗ ತಾಲ್ಲೂಕು ಕಚೇರಿಯನ್ನು ಎನ್ಇಎಸ್ ಬಡಾವಣೆಗೆ ಸ್ಥಳಾಂತರಿಸಿದರೆ ರೈತರಿಗೆ ತೊಂದರೆಯಾಗಲಿದೆ. ಈ ಬಗ್ಗೆ ಶಾಸಕರು ಮತ್ತೊಮ್ಮೆ ಯೋಚಿಸಿ ನಿರ್ಧಾರ ಕೈಗೊಳ್ಳಬೇಕಿದೆ.– ಹೊಸಪಾಳ್ಯ ಲೋಕೇಶ್, ತಾಲ್ಲೂಕು ರೈತ ಸಂಘದ ಅಧ್ಯಕ್ಷರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.