ADVERTISEMENT

ಮಾಗಡಿ: ಭಕ್ತಸಾಗರದಲ್ಲಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ

ಮಾಗಡಿ ತಿರುಮಲೆ ತಿರುವೆಂಗಳನಾಥ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 4:31 IST
Last Updated 15 ಏಪ್ರಿಲ್ 2022, 4:31 IST
ಮಾಗಡಿ ಪಟ್ಟಣದ ತಿರುಮಲೆ ತಿರುವೆಂಗಳನಾಥ ರಂಗನಾಥ ಸ್ವಾಮಿ ಜಾತ್ರೆಯ ಅಂಗವಾಗಿ ಬ್ರಹ್ಮರಥೋತ್ಸವ ಜನಸಾಗರದ ನಡುವೆ ನಡೆಯಿತು
ಮಾಗಡಿ ಪಟ್ಟಣದ ತಿರುಮಲೆ ತಿರುವೆಂಗಳನಾಥ ರಂಗನಾಥ ಸ್ವಾಮಿ ಜಾತ್ರೆಯ ಅಂಗವಾಗಿ ಬ್ರಹ್ಮರಥೋತ್ಸವ ಜನಸಾಗರದ ನಡುವೆ ನಡೆಯಿತು   

ಮಾಗಡಿ: ಭಕ್ತಸಾಗರದ ನಡುವೆ ತಿರುಮಲೆ ತಿರುವೆಂಗಳನಾಥ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ನಡೆಯಿತು. ದಕ್ಷಿಣ ಕೊರಿಯಾದಿಂದ ಆಗಮಿಸಿದ್ದ ವಿದೇಶಿ ಭಕ್ತರು ಸೇರಿದಂತೆ ಲಕ್ಷಾಂತರ ಭಕ್ತರು ಬ್ರಹ್ಮರಥೋತ್ಸವದಲ್ಲಿ ರಥವನ್ನು ಎಳೆದು ಭಕ್ತಿ ಸಮರ್ಪಿಸಿದರು.

ಶಾಸಕ ಎ.ಮಂಜುನಾಥ್‌, ಪತ್ನಿ ಲಕ್ಷ್ಮೀ ಮಂಜುನಾಥ್‌ ಅವರೊಂದಿಗೆ ಯಾತ್ರಾದಾನ ನಡೆಸಿಕೊಟ್ಟರು. ರಂಗನಾಥ ಸ್ವಾಮಿ ಮತ್ತು ಉಭಯ ಅಮ್ಮನವರ ಸಹಿತ ಉತ್ಸವ ಮೂರ್ತಿಯನ್ನು ಶ್ರೀಪಾದ ಕಾವಲುಗಾರರು ಹೆಗಲಮೇಲೆ ಹೊತ್ತು, ಮಡಿವಾಳರು ದೀವಟಿಗೆ ತೆಗೆದು ಭಕ್ತಿ ಸಮರ್ಪಿಸಿದ ಕೂಡಲೆ ರಥಬೀದಿಯಲ್ಲಿ ಇರುವ ವಿವಿಧ ಜನಾಂಗದವರ ಅರವಟಿಕೆಗಳಿಗೆ ತೆರಳಿ ಪೂಜೆ ಸ್ವೀಕರಿಸಿತು.

ಮಲ್ಲಿಗೆ, ಜಾತಿ, ಗುಲಾಭಿ ಇತರೆ ಪುಷ್ಪಗಳಿಂದ ಅಲಂಕೃತವಾಗಿದ್ದ ರಥದ ಮೇಲೆ ದೇವರ ಉತ್ಸವ ಮೂರ್ತಿಗಳನ್ನು ಬೆಳಿಗ್ಗೆ 11.30ಕ್ಕೆ ಸರಿಯಾಗಿ ರಥವೇರಿದ ರಂಗನಾಥ ಸ್ವಾಮಿ ಮತ್ತು ಉಭಯ ಅಮ್ಮನವರಿಗೆ ರಥದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ADVERTISEMENT

ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ, ರಾಜ್ಯ ಜೆಡಿಎಸ್‌ ಯುವಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಸಮಾಜ ಸೇವಕ ಕೆ.ಬಾಗೇಗೌಡ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್‌.ಎಂ.ಕೃಷ್ಣಮೂರ್ತಿ, ಪುರಸಭೆ ಅಧ್ಯಕ್ಷೆ ವಿಜಯಲಕ್ಷ್ಮೀರೂಪೇಶ್‌ ರಥಕ್ಕೆ ಪೂಜೆ ಸಲ್ಲಿಸಿ ರಥಕ್ಕೆ ಚಾಲನೆ ನೀಡಿದರು.

ಉಪಾಧ್ಯಕ್ಷ ರಹಮತ್‌, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್‌, ಸದಸ್ಯರಾದ ಶಿವಕುಮಾರ್‌, ರಂಗಹನುಮಯ್ಯ, ಎಚ್‌.ಜೆ.ಪುರುಷೋತ್ತಮ್‌, ಅಶ್ವತ್ಥ, ಭಾಗ್ಯಮ್ಮ, ಎಂ.ಎನ್‌.ಮಂಜುನಾಥ್‌, ನಾಗರತ್ನಮ್ಮ, ತಹಶೀಲ್ದಾರ್‌ ಬಿ.ಜಿ.ಶ್ರೀನಿವಾಸ ಪ್ರಸಾದ್‌, ದೇವಾಲಯದ ಇಒ, ರಘು, ಡಿವೈಎಸ್‌ಪಿ ಓಂ ಪ್ರಕಾಶ್‌, ಪುರಸಭೆ ಮುಖ್ಯಾಧಿಕಾರಿ ರಮೇಸ್‌, ಪುರಸಭೆ ಮಾಜಿ ಅಧ್ಯಕ್ಷ ಪಿ.ವಿ.ಸೀತಾರಾಮ್‌ , ಬಾಲಾಜಿ ರಂಗನಾಥ್‌, ಟಿಎಸ್‌.ಸತೀಶ್‌, ಮೂಲ ಅರ್ಚಕರ ವಂಶಸ್ಥ ಸೂರ್ಯನಾರಾಯಣ, ಆಚಾರ್ಯ ಪುರುಷ ಕಾರ್ತೀಕ್‌, ಪ್ರಭಾರಿ ಪ್ರಧಾನ ಅರ್ಚಕ ವೆಂಕಟೇಶ್‌ ಅಯ್ಯಂಗಾರ್‌ ರಥೋತ್ಸವಕ್ಕೆ ಪೂಜೆ ಸಲ್ಲಿಸಿದರು.

ಕಾಕತಾಳೀಯ ಆದರೂ ಸತ್ಯ ರಥದ ಮೇಲೆ ಗರುಡ ಪಕ್ಷಿಯೊಂದು ಮೂರು ಸುತ್ತುಹಾಕಿ ನಭೊಮಂಡಲದತ್ತ ತೆರಳಿತು. ನೆರೆದಿದ್ದ ಲಕ್ಷಾಂತರ ಭಕ್ತರು ಗೋವಿಂದ , ಗೋವಿಂದ ನಾಮಸ್ಮರಣೆಯೊಂದಿಗೆ ರಥಬೀದಿಯಲ್ಲಿ ತೇರನ್ನು ಎಳೆದರು. ರಥದ ಮೇಲೆ ಬಾಳೆಹಣ್ಣಿಗೆ ಧವನ ಸಿಕ್ಕಿಸಿ ಎಸೆದು ಹರಕೆ ಸಲ್ಲಿಸಿದರು.

ರಥಬೀದಿಯ ಅರವಟಿಕೆಗಳಲ್ಲಿ ನೀರುಮಜ್ಜಿಗೆ ಪಾನಕ, ಹಲಸಿನಹಣ್ಣಿನ ರಸಾಯನ, ಬೇಲದ ಹಣ್ಣಿನ ಪಾನಕ ವಿತರಿಸಲಾಯಿತು. ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ರವಿ ಬೆಳವಂಗಲ, ಕುದೂರಿನ ಕುಮಾರ್‌ ನೇತೃತ್ವದಲ್ಲಿ ರಥದ ಚಕ್ರಗಳ ಸುತ್ತಲೂ ನೂರಾರು ಪೊಲೀಸರು ಸೂಕ್ತ ಬಂದೋಬಸ್ತ್‌ ಏರ್ಪಡಿಸಿದ್ದರು. ತಿರುಮಲೆ ಮಹಾದ್ವಾರ, ಎನ್‌ಇಎಸ್‌ ಸರ್ಕಲ್‌, ಹೊಸಪೇಟೆ ಸರ್ಕಲ್‌ಗಳಿಂದ ತಿರುಮಲೆ ಸಂಪರ್ಕ ರಸ್ತೆಯಲ್ಲಿ ನಿಲ್ಲಲು ಸ್ಥಳವಿಲ್ಲದೆ ನೂಕುನುಗ್ಗಲು ಉಂಟಾಗಿತ್ತು.

ದೇವಾಲಯದ ಪೌಳಿಯ ಒಳಗೆ ಧರ್ಮ ದರ್ಶನ ಮತ್ತು ವಿಶೇಷ ದರ್ಶನಗಳ ಮೂಲಕ ಲಕ್ಷಾಂತರ ಭಕ್ತರು ಮೂಲದೇವರ ದರ್ಶನ ಪಡೆದರು. ಭಕ್ತರೆಲ್ಲರಿಗೂ ಸುರೇಶ್‌ ಅಯ್ಯರ್‌ ಪುಳಿಯೊಗರೆ, ಸಿಹಿ ಲಡ್ಡು ಪ್ರಸಾದ ವಿತರಿಸಿದರು. ಬ್ರಹ್ಮರಥೋತ್ಸವ ಶಾಂತಿಯುತವಾಗಿ ನಡೆಯಿತು. ಪೊಲೀಸರು ಮತ್ತು ಪುರಸಭೆ ವತಿಯಿಂದ ವಾಹನಗಳಿಗೆ ಸೂಕ್ತ ಪಾರ್ಕಿಂಗ್‌ ವ್ಯವಸ್ಥೆ ಮಾಡಿದ್ದರು. ಆದರೂ ಸಹ ಎನ್‌ಇಎಸ್‌ ಬಡಾವಣೆಯ ಆಂಜನೇಯ ಸ್ವಾಮಿ ದೇವಾಲಯ ಬಳಿ ತಿರುಮಲೆ ರಸ್ತೆಯಲ್ಲಿ ಅರ್ಧಗಂಟೆಯ ಕಾಲ ರಸ್ತೆಯಲ್ಲಿ ವಾಹನಗಳು ನಿಂತು ರಸ್ತತಡೆ ಉಂಟಾಗಿತ್ತು. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸು ಸಿಬ್ಬಂದಿಗಳು ರಸ್ತೆಯಲ್ಲಿ ನಿಂತಿದ್ದ ವಾಹನಗಳನ್ನು ತೆರವುಗೊಳಿಸಿ, ಸಂಚಾರ ಸುಗಮಗೊಳಿಸಿದರು.

ಎಲ್ಲಾ ಜನಾಂಗಗಳ ಅರವಟಿಕೆಗಳಲ್ಲಿ ಬಿಸಿ ಬಿಸಿ ರಾಗಿಮುದ್ದೆ, ಹಲಸಿನ ಕೊತ್ತುಕಾಯಿ ಸಾಂಬಾರು, ಪಾಯಸ, ಸಿಹಿಬೂಂದಿ, ಅನ್ನಸಾಂಬಾರು, ಮಜ್ಜಿಗೆ ಅನ್ನವನ್ನು ತಿನ್ನುವಷ್ಟು ಉಚಿತವಾಗಿ ಬಡಿಸಿ ಉಚಿತ ಅನ್ನ ಸಂತರ್ಪಣೆ ನಡೆಯಿತು. ತಮಿಳು ನಾಡು, ಆಂಧ್ರಪ್ರದೇಶ, ಕೇರಳ ಇತರೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ಭಕ್ತರು ರಥದ ಮುಂದೆ ನರ್ತಿಸಿ, ಪಂಡರಿ ಭಜನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.