ADVERTISEMENT

ಮಾಗಡಿ: ಕೆಂಪೇಗೌಡರ ಕಾಲದ ಕಾಲುವೆ ಮುಚ್ಚುವ ಹುನ್ನಾರ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 3:09 IST
Last Updated 27 ಜನವರಿ 2026, 3:09 IST
ಮಾಗಡಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಎಂ.ಕೃಷ್ಣಮೂರ್ತಿ 
ಮಾಗಡಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಎಂ.ಕೃಷ್ಣಮೂರ್ತಿ    

ಮಾಗಡಿ: ವಿಶ್ವ ಒಕ್ಕಲಿಗರ ಮಹಾವೇದಿಕೆ ನಡೆಸುತ್ತಿರುವ ನಾಡಪ್ರಭು ಕೆಂಪೇಗೌಡರ ಪರಂಪರೆ ಪರಿಚಯ ಕಾರ್ಯ ಶ್ಲಾಘನೀಯ ಎಂದು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದ ಅವರು, ಕೆಂಪೇಗೌಡರ ಕಾಲದಲ್ಲಿ ನಿರ್ಮಿತವಾದ ದೇವಾಲಯಗಳು, ಕೋಟೆ-ಕೊತ್ತಲ, ಕೆರೆ-ಕಲ್ಯಾಣಿಗಳಂಥ ಐತಿಹಾಸಿಕ ಸ್ಥಳಗಳನ್ನು ಜನರಿಗೆ ಪರಿಚಯಿಸುವ ಮೂಲಕ ಆ ಕಾಲದ ವೈಭವವನ್ನು ನೆನಪಿಸಲಾಗುತ್ತಿದೆ ಎಂದರು.

‘ಕೆಂಪೇಗೌಡರ ಹೆಸರಿನಲ್ಲಿ ಆಯ್ಕೆಯಾಗಿ, ನಂತರ ಅವರ ಕೊಡುಗೆ ಮರೆಯುವ ಜನಪ್ರತಿನಿಧಿಗಳನ್ನು ಎಚ್ಚರಿಸುವ ಕಾರ್ಯವನ್ನು ವಿಶ್ವ ಒಕ್ಕಲಿಗರ ಮಹಾವೇದಿಕೆ ಮಾಡುತ್ತಿದೆ. ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಕೆಂಪೇಗೌಡರ ಕಾಲದ ಐತಿಹಾಸಿಕ ಸ್ಥಳಗಳಿಗೆ ಪ್ರವಾಸ ಆಯೋಜಿಸಿರುವ ಮಹಾವೇದಿಕೆ ಅಧ್ಯಕ್ಷ ರವಿಶಂಕರ್ ಅವರಿಗೆ ಪೂರ್ಣ ಬೆಂಬಲ ಇದೆ’ ಎಂದು ತಿಳಿಸಿದರು.

ADVERTISEMENT

ಶಾಸಕ ಬಾಲಕೃಷ್ಣ ಕೆಂಪೇಗೌಡರ ಹೆಸರನ್ನು ಉಚ್ಚರಿಸಿದರೂ ಅವರ ಕಾಲದ ಕಾಲುವೆಗಳನ್ನು ಮುಚ್ಚುತ್ತಾರೆ. ಪ್ರತಿಮೆ ಸ್ಥಳಾಂತರಕ್ಕೆ ಯತ್ನಿಸುತ್ತಾರೆ. ಗಿಡಮರಗಳನ್ನು ಕಡಿಯಲು ಮುಂದಾಗುತ್ತಾರೆ ಎಂದು ಆರೋಪಿಸಿದರು.

ಪಟ್ಟಣದ ತರಕಾರಿ ಮಾರುಕಟ್ಟೆ ಬಳಿ ಇದ್ದ ಸಾರ್ವಜನಿಕ ಶೌಚಾಲಯವನ್ನು ವರ್ಷಗಳಿಂದ ಬೀಗ ಹಾಕಲಾಗಿದೆ. ತರಕಾರಿ ಮತ್ತು ಹೂವುಗಳನ್ನು ತರುವ ಕೃಷಿಕರಿಗೆ ತೊಂದರೆ ಉಂಟು ಮಾಡಿದೆ ಎಂದರು.

ತಾಲ್ಲೂಕು ಕಚೇರಿಯಲ್ಲಿನ ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಇದು ಸಾರ್ವಜನಿಕರಿಗೆ ಅಸೌಕರ್ಯ ಉಂಟುಮಾಡುತ್ತಿದೆ. ತಿರುಮಲೆ ರಸ್ತೆಯಲ್ಲಿದ್ದ ಕೋತಿಕಟ್ಟೆಯನ್ನು ಮುಚ್ಚಿ ಅಲ್ಲಿ ಶಾಸಕರ ಹೆಸರಿನಲ್ಲಿ ಉದ್ಯಾನ ನಿರ್ಮಿಸಿದ್ದರೂ ಅಲ್ಲಿ ಶೌಚಾಲಯ ಸೌಲಭ್ಯ ಇಲ್ಲದಿರುವುದು ಅವರ ಆಡಳಿತದ ಕನ್ನಡಿ ಎಂದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವ ಒಕ್ಕಲಿಗರ ಮಹಾವೇದಿಕೆ ಅಧ್ಯಕ್ಷ ರವಿಶಂಕರ್ 'ಕೆಂಪೇಗೌಡರ ವೈಭವ ಯಾತ್ರೆ' ಪ್ರವಾಸದಿಂದ ಸದುಪಯೋಗ ಪಡೆಯಲು ಮನವಿ ‌ಮಾಡಿದರು.

ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ಕನ್ನಡ ಕುಮಾರ್, ಬಿಜೆಪಿ ಮುಖಂಡ ಜಗನ್ನಾಥ್ ಗೌಡ, ಆನಂದ್, ಗೋಪಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.