ADVERTISEMENT

ಮಾಗಡಿ: ಮತದಾನ ಪ್ರಕ್ರಿಯೆಗೆ ಕ್ಷಣಗಣನೆ

ಮತಗಟ್ಟೆಗಳಿಗೆ ಚುನಾವಣಾ ಸಿಬ್ಬಂದಿ ನಿಯೋಜನೆ; ಪೊಲೀಸರ ಕಾವಲು

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 19:40 IST
Last Updated 11 ನವೆಂಬರ್ 2019, 19:40 IST
ಮಾಗಡಿ ಪುರಸಭೆಯ ಚುನಾವಣಾ ಸಿಬ್ಬಂದಿ ಸೋಮವಾರ ಇವಿಎಂ ಗಳೊಂದಿಗೆ ಮತಗಟ್ಟೆಗೆ ತೆರಳಿದರು
ಮಾಗಡಿ ಪುರಸಭೆಯ ಚುನಾವಣಾ ಸಿಬ್ಬಂದಿ ಸೋಮವಾರ ಇವಿಎಂ ಗಳೊಂದಿಗೆ ಮತಗಟ್ಟೆಗೆ ತೆರಳಿದರು   

ಮಾಗಡಿ: ಇಲ್ಲಿನ ಪುರಸಭೆಗೆ ನೂತನ ಸದಸ್ಯರ ಆಯ್ಕೆಯಾಗಿ ಮಂಗಳವಾರ ಚುನಾವಣೆ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.

ಪ್ರತಿ ಮತಗಟ್ಟೆಗೆ ಒಬ್ಬ ಮತಗಟ್ಟೆ ಅಧಿಕಾರಿ, ಒಬ್ಬ ಸಹಾಯಕ ಮತಗಟ್ಟೆ ಅಧಿಕಾರಿ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಚುನಾವಣಾ ಸಿಬ್ಬಂದಿಯು ಮತಯಂತ್ರಗಳೊಂದಿಗೆ ಮತದಾನ ಪ್ರಕ್ರಿಯೆಗೆ ಸಜ್ಜಾಗಿದ್ದಾರೆ. ಬೆಳಿಗ್ಗೆ 7ರಿಂದಲೇ ಮತದಾನಕ್ಕೆ ಅವಕಾಶ ಇರಲಿದೆ.

ಪುರಸಭೆ ವ್ಯಾಪ್ತಿಯಲ್ಲಿ 6 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಪಿಎಸ್‌ಐ ದರ್ಜೆಯ ಪೊಲೀಸ್ ಅಧಿಕಾರಿಗಳ ಸಂಚಾರಿ ತಂಡ ರಚಿಸಲಾಗಿದೆ. ಮತದಾರರು ಶಾಂತಿಯುತ ಮತದಾನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ಟ್ರಾಂಗ್‌ ರೂಮ್‌ ವ್ಯವಸ್ಥೆ ಮಾಡಿ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಎನ್‌. ರಮೇಶ್ ತಿಳಿಸಿದರು.

ADVERTISEMENT

ಮಸ್ಟರಿಂಗ್‌ ಪ್ರಕ್ರಿಯೆ: ನಗರದ ಎನ್‌ಇಎಸ್ ಬಡಾವಣೆಯಲ್ಲಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗುರುವಾರ ಮಸ್ಟರಿಂಗ್‌ ಪ್ರಕ್ರಿಯೆ ನಡೆಯಿತು. ಚುನಾವಣಾ ಸಿಬ್ಬಂದಿಗೆ ಮತಯಂತ್ರಗಳನ್ನು ವಿತರಿಸಲಾಯಿತು. ಮತಯಂತ್ರಗಳನ್ನು ಕೈಯಲ್ಲಿ ಹಿಡಿದ ಸಿಬ್ಬಂದಿ ಮತಗಟ್ಟೆಗಳತ್ತ ತೆರಳಿದರು.

ಕಡೆ ಕ್ಷಣದ ಕಸರತ್ತು: ಮಾಗಡಿ ಪುರಸಭೆ ವ್ಯಾಪ್ತಿಯಲ್ಲಿ ಚುನಾವಣಾ ಮುನ್ನಾ ದಿನವೂ ಅಭ್ಯರ್ಥಿಗಳಿಂದ ಮನೆಮನೆ ಪ್ರಚಾರ ನಡೆಯಿತು. ಅದರಲ್ಲೂ ಜೆಡಿಎಸ್ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದರು. ಬಿಜೆಪಿ ಅಭ್ಯರ್ಥಿಗಳೂ ತಕ್ಕಮಟ್ಟಿನ ಪ್ರಚಾರ ಕೈಗೊಂಡರು. ಮತದಾರರಿಗೆ ಕಡೆ ಕ್ಷಣದಲ್ಲಿ ಆಮಿಷಗಳನ್ನು ಒಡ್ಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬಂದವು.

ನೀತಿ ಸಂಹಿತೆ ಉಲ್ಲಂಘನೆ ಇಲ್ಲ

ಕನಕಪುರ ಹಾಗೂ ಮಾಗಡಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈವರೆಗೆ ಒಂದೇ ಒಂದು ನೀತಿಸಂಹಿತೆ ಉಲ್ಲಂಘನೆ ಪ್ರಕರಣವೂ ದಾಖಲಾಗಿಲ್ಲ.

ಅಬಕಾರಿ ಅಧಿಕಾರಿಗಳು, ಚುನಾವಣಾ ಸಿಬ್ಬಂದಿ ಹಾಗೂ ಪ್ರತ್ಯೇಕವಾಗಿ ದಾಳಿ ನಡೆಸಿ ಅಕ್ರಮ ಮದ್ಯ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಯಾವ ಅಭ್ಯರ್ಥಿ, ಬೆಂಬಲಿಗರು, ಪಕ್ಷಗಳಿಂದ ನೀತಿಸಂಹಿತೆ ಉಲ್ಲಂಘನೆ ಆಗಿಲ್ಲ ಎಂದು ಚುನಾವಣೆಯ ನೋಡಲ್‌ ಅಧಿಕಾರಿ ಕೆ. ಮಾಯಣ್ಣ ಗೌಡ ತಿಳಿಸಿದರು.

ರಜೆ ಘೋಷಣೆ: ಮದ್ಯ ಮಾರಾಟ ನಿಷೇಧ

ಕನಕಪುರ ಹಾಗೂ ಮಾಗಡಿ ಪಟ್ಟಣದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಇವುಗಳ ವ್ಯಾಪ್ತಿಯಲ್ಲಿನ ಎಲ್ಲ ಸರ್ಕಾರಿ ಕಚೇರಿಗಳು, ಶಾಲೆ–ಕಾಲೇಜು, ಕೈಗಾರಿಕೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಆದೇಶಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಎರಡೂ ಕಡೆ ಮಂಗಳವಾರ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

ಎಣಿಕೆ 14ರಂದು

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಕಾರ್ಯವು ಇದೇ 14ರಂದು ಬೆಳಿಗ್ಗೆ 8ಕ್ಕೆ ಆರಂಭಗೊಳ್ಳಲಿದೆ. ಕನಕಪುರದ ಮುನ್ಸಿಪಲ್‌ ಸರ್ಕಾರಿ ಪ್ರೌಢಶಾಲೆ ಹಾಗೂ ಮಾಗಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಈ ಎಣಿಕೆಯು ನಡೆಯಲಿದೆ.

***

ಅಂಕಿ–ಅಂಶ
23,276–ಪುರಸಭೆ ವ್ಯಾಪ್ತಿಯಲ್ಲಿನ ಒಟ್ಟು ಮತದಾರರು
11,786– ಮಹಿಳಾ ಮತದಾರರು
11,481–ಪುರುಷ ಮತದಾರರು
9–ತೃತೀಯ ಲಿಂಗಿ ಮತದಾರರು

***

23–ಮತದಾನ ನಡೆಯಲಿರುವ ವಾರ್ಡ್‌ಗಳ ಸಂಖ್ಯೆ
74–ಕಣದಲ್ಲಿ ಇರುವ ಒಟ್ಟು ಅಭ್ಯರ್ಥಿಗಳು
23–ಇವಿಎಂ ಯಂತ್ರಗಳ ಬಳಕೆ
92–ಚುನಾವಣಾ ಕಾರ್ಯಕ್ಕೆ ಬಳಸುತ್ತಿರುವ ಸಿಬ್ಬಂದಿ
ಮತದಾನದ ಸಮಯ: ಬೆಳಿಗ್ಗೆ 7ರಿಂದ ಸಂಜೆ 5

***
ಒಟ್ಟು 23 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ
-ಎನ್‌. ರಮೇಶ್‌,ಸಹಾಯಕ ಚುನಾವಣಾ ಅಧಿಕಾರಿ, ಮಾಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.