ADVERTISEMENT

KRS ಬೃಂದಾವನ ಮಾದರಿಯಲ್ಲಿ ಮಂಚನಬೆಲೆ ಅಭಿವೃದ್ಧಿ ಪ್ರವಾಸಿ ಕೇಂದ್ರವಾಗಿಸಲು ಅವಕಾಶ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 2:49 IST
Last Updated 28 ಫೆಬ್ರುವರಿ 2026, 2:49 IST
<div class="paragraphs"><p>ಮಂಚನಬೆಲೆ ಜಲಾಶಯ</p></div>

ಮಂಚನಬೆಲೆ ಜಲಾಶಯ

   

ಮಾಗಡಿ: ರಾಜಧಾನಿ ಬೆಂಗಳೂರಿಗೆ ಸಮೀಪವಿರುವ ಮಾಗಡಿ ತಾಲ್ಲೂಕು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲು ಮಂಚನಬೆಲೆ ಜಲಾಶಯದಲ್ಲಿ ಕೆಆರ್‌ಎಸ್‌ ಬೃಂದಾವನ ಮಾದರಿ ಅಭಿವೃದ್ಧಿಪಡಿಸಿ ಪ್ರವಾಸಿ ಕೇಂದ್ರವಾಗಿಸಲು ಹಲವು ಅವಕಾಶಗಳಿವೆ.

ಮಾಗಡಿಯಲ್ಲಿ ಕೈಗಾರಿಕೆಯಾಗಲಿ ಉದ್ಯೋಗ ಸೃಷ್ಟಿ ಮಾಡುವ ಯಾವುದೇ ಯೋಜನೆ ಇಲ್ಲ. ಇಲ್ಲಿನ ಸ್ಥಳೀಯರು ಉದ್ಯೋಗ ಅರಸಿ ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ಹೀಗಾಗಿ ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳ ಅಭಿವೃದ್ಧಿ ಮಾಡಿದರೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿ ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದರಿಂದ ತಾಲ್ಲೂಕು ಆಡಳಿತಕ್ಕೂ ಹೆಚ್ಚಿನ ಆದಾಯ ಬರಲಿದೆ.

ADVERTISEMENT

ಬೆಂಗಳೂರಿಗೆ ಕೇವಲ 50 ಕಿಲೋ ಮೀಟರ್ ದೂರದಲ್ಲಿರುವ ಮಾಗಡಿ ತಾಲ್ಲೂಕನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡಬಹುದು. ಮಂಚನಬೆಲೆ ಜಲಾಶಯವನ್ನು ಕೆಆರ್‌ಎಸ್‌ ಮಾದರಿಯಲ್ಲಿ ಅಭಿವೃದ್ಧಿ ಮಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವರು. ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗಲಿದೆ.

ಅರ್ಕಾವತಿ ಮತ್ತು ಕುಮದ್ವತಿ ನದಿಗೆ ಅಣೆಕಟ್ಟು ನಿರ್ಮಾಣ: ಚಿಕ್ಕಬಳ್ಳಾಪುರ ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿ ಮತ್ತು ಕುಮದ್ವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅಣೆಕಟ್ಟು ರಮಣೀಯ ಪರಿಸರ ಹೊಂದಿದೆ. ಅರ್ಕಾವತಿ ನದಿಯು ನಂದಿ ಬೆಟ್ಟದಲ್ಲಿ ಹುಟ್ಟಿ ದೊಡ್ಡಬಳ್ಳಾಪುರ ಹಳ್ಳಿಗಳಿಂದ ಹರಿದು ಹಲವು ಕೆರೆ ತುಂಬಿಸಿ ಬೆಂಗಳೂರು ಉತ್ತರ ತಾಲ್ಲೂಕು ಹೆಸರುಗಟ್ಟ ಕೆರೆ, ಮಾಕಳಿ ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯ ಮುಖಾಂತರ ನೀರು ಹರಿದು ಮಂಚನಬೆಲೆ ಸೇರುತ್ತದೆ. ಕುಮದ್ವತಿ ನದಿ ಹರಿಯುವ 278 ಹಳ್ಳಿಗಳಲ್ಲಿ ಬರುವ ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಮಂಚನಬೆಲೆ ಜಲಾಶಯ ಅಣೆಕಟ್ಟು 83 ಅಡಿ ಎತ್ತರದಷ್ಟಿದೆ.

ಬೋಟಿಂಗ್ ವ್ಯವಸ್ಥೆ: ಪ್ರವಾಸಿಗರನ್ನು ಆಕರ್ಷಿಸುವ ಹಿನ್ನೆಲೆಯಲ್ಲಿ ಈಗಾಗಲೇ ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ನಲ್ಲಿಗುಡ್ಡ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಕಣ್ವ ಜಲಾಶಯದಲ್ಲೂ ಕೂಡ ಬೋಟಿಂಗ್ ವ್ಯವಸ್ಥೆ ಮಾಡಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಅದೇ ಮಾದರಿಯಲ್ಲಿ ಮಂಚನಬೆಲೆ ಜಲಾಶಯದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬಹುದು. ಈಗಾಗಲೇ ಸ್ಥಳೀಯ ಮೀನುಗಾರರು ಇಲ್ಲಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಸೂರ್ಯಾಸ್ತವನ್ನು ಕೂಡ ನೋಡುವ ಅವಕಾಶವಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಚನಬೆಲೆ ಜಲಾಶಯವನ್ನು ಬೃಂದಾವನ ಮಾದರಿಯಲ್ಲಿ 150 ಎಕರೆ ಜಾಗ ಅಭಿವೃದ್ಧಿ ಮಾಡಲು ಬಜೆಟ್‌ನಲ್ಲಿ ₹100 ಕೋಟಿ ಅನುದಾನ ಮೀಸಲಿಡಲಾಗಿತ್ತು. 

ಮಂಚನಬೆಲೆ ಜಲಾಶಯಕ್ಕೆ ಕಾವೇರಿ ನೀರು ಬಂದಿರುವುದು
ಮಂಚನಬೆಲೆ ಜಲಾಶಯದ ಅಣೆಕಟ್ಟು
ಎಚ್.ಸಿ.ಬಾಲಕೃಷ್ಣ

ಸಾಹಸ ಕ್ರೀಡೆಗೆ ಅವಕಾಶ

ಮಂಚನಬೆಲೆ ಜಲಾಶಯದಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲು ಈಗಾಗಲೇ ಖಾಸಗಿ ಸಂಸ್ಥೆ ಜತೆ ಮಾತನಾಡಲಾಗಿದೆ. ಮಂಚನಬೆಲೆ ಜಲಾಶಯದಲ್ಲಿ ಬೋಟಿಂಗ್ ಹಾಗೂ ಸಾಹಸ ಕ್ರೀಡೆಗಳನ್ನು ಮಾಡಲು ಅವಕಾಶವಿದೆ. ಒಂದು ಸಾವಿರ ಕೋಟಿ ವೆಚ್ಚದಲ್ಲಿ ವ್ಯವಸ್ಥೆ ಆಗಬೇಕೆಂದು ಅಂದಾಜು ಮಾಡಿರುವುದರಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಕೆಲವರು ಭಾಗಿಯಾಗದ ಕಾರಣ ಮತ್ತೊಮ್ಮೆ ಖಾಸಗಿಯವರಿಗೆ ಟೆಂಡರ್ ಮೂಲಕ ಮಂಚನಬೆಲೆ ಜಲಾಶಯ ಅಭಿವೃದ್ಧಿ ಮಾಡಿ ಪ್ರವಾಸಿಸ್ಥಳ ಮಾಡಲಾಗುತ್ತಿದೆ ಎಂದು ‘ಪ್ರಜಾವಾಣಿ’ ಯೊಂದಿಗೆ ಶಾಸಕ ಎಚ್.ಸಿ. ಬಾಲಕೃಷ್ಣ ಪ್ರತಿಕ್ರಿಯಿಸಿದರು.

---

ಸೌಲಭ್ಯ ನೀಡಲಿ: ಸ್ಥಳೀಯರಿಗೆ ಉದ್ಯೋಗವಕಾಶ ಸೃಷ್ಟಿಸಲು ಮಂಚನಬೆಲೆ ಜಲಾಶಯ ಅಭಿವೃದ್ಧಿಯಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಪ್ರವಾಸಿಗರು ಬರುತ್ತಾರೆ. ಅವರಿಗೆ ಸೌಲಭ್ಯಗಳು ಇಲ್ಲದ ಕಾರಣ ಪ್ರವಾಸಿಗರು ಜಲಾಶಯ ನೋಡಿ ಹೋಗುತ್ತಿದ್ದಾರೆ. ಕೂಡಲೇ ಪ್ರವಾಸೋದ್ಯಮ ಇಲಾಖೆ ಮಂಚನಬೆಲೆ ಜಲಾಶಯ ಅಭಿವೃದ್ಧಿ ಜತೆಗೆ ಸಾಹಸ ಕ್ರೀಡೆಗಳನ್ನು ತರುವ ಕೆಲಸ ಮಾಡಬೇಕು.

- ಎಂ.ಜಿ.ದೇವರಾಜು (ಸುನೀಲ್) ಸ್ಥಳೀಯ ನಿವಾಸಿ ರಸ್ತೆ

ಅಭಿವೃದ್ಧಿ ಮಾಡಿ: ವೀರೇಗೌಡನ ದೊಡ್ಡಿಯಿಂದ ಮಂಚನಬೆಲೆಗೆ ಸಂಪರ್ಕಿಸುವ 7 ಕಿ.ಮೀ ರಸ್ತೆಯನ್ನು ಕೂಡಲೇ ಅಭಿವೃದ್ಧಿಪಡಿಸಬೇಕು. ಈ ರಸ್ತೆ ಸಾಕಷ್ಟು ಗುಂಡಿಯಿಂದ ಕೂಡಿದೆ.  ಕೂಡಲೇ ರಸ್ತೆ ಅಭಿವೃದ್ಧಿಪಡಿಸಬೇಕು.

-ಚಂದ್ರಶೇಖರ್ ಗ್ರಾ.ಪಂ ಮಾಜಿ ಉಪಾಧ್ಯಕ್ಷ

ಉದ್ಯೋಗಾವಕಾಶ ಕೊಡಿ: ಹಿಂದುಳಿದ ತಾಲ್ಲೂಕು ಎಂಬ ಹಣೆಪಟ್ಟಿಯನ್ನು ತೆಗೆಯುವ ನಿಟ್ಟಿನಲ್ಲಿ ಪ್ರವಾಸಿ ತಾಣ ಅಭಿವೃದ್ಧಿ ಮಾಡಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದರೆ ಸ್ಥಳೀಯರಿಗೆ ಉದ್ಯೋಗದ ಜತೆಗೆ ತಾಲ್ಲೂಕಿಗೂ ಹೆಚ್ಚಿನ ಆದಾಯ ಬರಲಿದೆ.

-ಬಸವರಾಜು ವೀರೇಗೌಡನ ದೊಡ್ಡಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.