ADVERTISEMENT

ಮಾವು ಬೆಳೆಗಾರರಿಗಿಲ್ಲ ‘ಬೆಂಬಲ ಬೆಲೆ’ ಭಾಗ್ಯ

ಈಗಾಗಲೇ ಮುಗಿದಿದೆ ಕೊಯ್ಲು, ವಹಿವಾಟು

ಓದೇಶ ಸಕಲೇಶಪುರ
Published 27 ಜೂನ್ 2025, 4:57 IST
Last Updated 27 ಜೂನ್ 2025, 4:57 IST
ಮಾವಿನ ವಹಿವಾಟು ಮುಗಿದಿರುವ ಹಿನ್ನೆಲೆಯಲ್ಲಿ ಬಿಕೊ ಎನ್ನುತ್ತಿರುವ ರಾಮನಗರದ ಎಪಿಎಂಸಿಯಲ್ಲಿರುವ ಮಾವಿನ ಮಂಡಿ
ಪ್ರಜಾವಾಣಿ ಚಿತ್ರ: ಚಂದ್ರೇಗೌಡ
ಮಾವಿನ ವಹಿವಾಟು ಮುಗಿದಿರುವ ಹಿನ್ನೆಲೆಯಲ್ಲಿ ಬಿಕೊ ಎನ್ನುತ್ತಿರುವ ರಾಮನಗರದ ಎಪಿಎಂಸಿಯಲ್ಲಿರುವ ಮಾವಿನ ಮಂಡಿ ಪ್ರಜಾವಾಣಿ ಚಿತ್ರ: ಚಂದ್ರೇಗೌಡ   

ರಾಮನಗರ: ಮಾವು ಬೆಲೆ ಕುಸಿತದಿಂದ ಕಂಗಾಲಾಗಿರುವ ಬೆಳೆಗಾರರ ಸಂಕಷ್ಟಕ್ಕೆ ಕಡೆಗೂ ಮಿಡಿದಿರುವ ಕೇಂದ್ರ ಸರ್ಕಾರ, ಮಾರುಕಟ್ಟೆ ಮಧ್ಯಸ್ಥಿಕೆ ಬೆಲೆ ಯೋಜನೆಯಡಿ (ಎಂಐಎಸ್) ಬೆಂಬಲ ಬೆಲೆ ಘೋಷಿಸಿದೆ. ಆದರೆ, ಬೆಂಗಳೂರು ದಕ್ಷಿಣ ಜಿಲ್ಲೆಯ ಬೆಳೆಗಾರರು ಈ ಬೆಂಬಲ ಬೆಲೆಯ ಭಾಗ್ಯದಿಂದ ವಂಚಿತರಾಗಿದ್ದಾರೆ.

ರಾಜ್ಯದಲ್ಲೇ ಮೊದಲ ಬಾರಿಗೆ ರಾಮನಗರ ಜಿಲ್ಲೆಯ ಮಾವು ಮಾರುಕಟ್ಟೆ ಪ್ರವೇಶಿಸುವುದು ವಾಡಿಕೆ. ಬಳಿಕ ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಇತರೆಡೆ ಮಾವು ಅಬ್ಬರ ಶುರುವಾಗುತ್ತದೆ. ಜಿಲ್ಲೆಯಲ್ಲಿ ಈಗಾಗಲೇ ಕೊಯ್ಲು ಮತ್ತು ವಹಿವಾಟು ಮುಗಿದಿದೆ. ಬೆಂಬಲ ಬೆಲೆಯು ಈಗ ಕೊಯ್ಲು ಆರಂಭಿಸುವವವರಿಗಷ್ಟೇ ಅನ್ವಯಿಸುವುದರಿಂದ ಜಿಲ್ಲೆಯ ಬೆಳೆಗಾರರು ಅದರಿಂದ ಹೊರಗುಳಿಯಲಿದ್ದಾರೆ.

ಬೆಂಬಲ ಬೆಲೆ ಆಸರೆಯೂ ಸಿಗದೆ ಅತಂತ್ರ ಸ್ಥಿತಿ ತಲುಪಿರುವ ಬೆಳೆಗಾರರ ಸ್ಥಿತಿ, ಮಾವು ಉತ್ಪಾದನೆ ಹಾಗೂ ಬೆಳೆ–ಬೆಲೆ ಕೈ ಕೊಟ್ಟಿರುವುದರಿಂದ ಆಗಿರುವ ನಷ್ಟಕ್ಕೆ ಪರ್ಯಾಯ ಪರಿಹಾರ ಒದಗಿಸುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಮತ್ತೊಂದೆಡೆ ಮಾವು ಬೆಳೆಗಾರರ ಸಂಘವೂ ಸರ್ಕಾರದ ಗಮನ ಸೆಳೆಯಲು ಮುಂದಾಗಿದೆ.

ADVERTISEMENT

ಪತ್ರ ಬರೆದಿದ್ದ ಸಮಿತಿ: ಬೆಲೆ ಕುಸಿತದಿಂದಾಗಿ ನಷ್ಟಕ್ಕೆ ಸಿಲುಕಿರುವ ಜಿಲ್ಲೆಯ ಮಾವು ಬೆಳೆಗಾರರಿಗೆ ಬೆಂಬಲ ಬೆಲೆ ನೀಡುವಂತೆ ಕೋರಿ, ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಮಟ್ಟದ ಸಮಿತಿ ಜೂನ್ 12ರಂದೇ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೃಷಿ ಮಾರಾಟ ಇಲಾಖೆ ನಿರ್ದೇಶಕರು ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದೆ.

ಹೂ ಬಿಡುವು ಮತ್ತು ಕಾಯಿ ಕಟ್ಟುವಾಗ ಬಿದ್ದ ಆಲಿಕಲ್ಲು ಮಳೆ ಹಾಗೂ ಗಾಳಿಯಿಂದಾಗಿ ಬೆಳೆಗೆ ಪೆಟ್ಟು ಬಿದ್ದಿದೆ. ಇದರಿಂದಾಗಿ ಪ್ರತಿ ಹೆಕ್ಟೇರ್‌ಗೆ ಮಾವಿನ ಸರಾಸರಿ ಇಳುವರಿ 2.68 ಟನ್‌ಗೆ ತಗ್ಗಿದೆ. ಮಾವಿನಕಾಯಿ ಗುಣಮಟ್ಟವೂ ಕಳಪೆಯಾಗಿದ್ದರಿಂದ ಧಾರಣೆ ತೀವ್ರ ಕುಸಿದಿದೆ. ಹಾಗಾಗಿ, ಬೆಳೆಗಾರರಿಗೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಪ್ರತಿ ಹೆಕ್ಟೇರ್‌ಗೆ ₹22,500 ಬೆಂಬಲ ಬೆಲೆ ನೀಡಬೇಕು ಎಂದು ಸಮಿತಿ ಪತ್ರದಲ್ಲಿ ಕೋರಿತ್ತು.

ಬೆಲೆ ಕುಸಿತದಿಂದಾಗಿ ಮಾರಾಟವಾಗದೆ ರಾಮನಗರದ ಮಂಡಿಯಲ್ಲೇ ಉಳಿದು ಕೊಳೆಯತೊಡಗಿದ್ದ ಮಾವನ್ನು ಹೊರವಲಯದ ಖಾಲಿ ಜಾಗಕ್ಕೆ ಲಾರಿಯಲ್ಲಿ ತಂದು ಸುರಿದಿದ್ದ ವ್ಯಾಪಾರಿಗಳು
ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಸರ್ಕಾರ ಪ್ರತಿ ಹೆಕ್ಟೇರ್‌ಗೆ ₹45 ಸಾವಿರ ಪರಿಹಾರ ನೀಡಬೇಕು. ಈ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಸಂಬಂಧಪಟ್ಟವರನ್ನು ಬೆಳೆಗಾರರ ನಿಯೋಗವು ಶೀಘ್ರ ಭೇಟಿ ಮಾಡಿ ಮನವಿ ಸಲ್ಲಿಸಲಿದೆ
– ಧರಣೇಶ್ ಅಧ್ಯಕ್ಷ ಬೆಂಗಳೂರು ದಕ್ಷಿಣ ಜಿಲ್ಲೆ ಮಾವು ಬೆಳೆಗಾರರ ಸಂಘ

ಕೈ ಕೊಟ್ಟ ಬೆಳೆ– ಬೆಲೆ

‘ಜಿಲ್ಲೆಯ ಮಾವಿನ ತೋಟಗಳಲ್ಲಿ ಏಪ್ರಿಲ್‌ ಆರಂಭದಿಂದಲೇ ಕೊಯ್ಲು ಆರಂಭವಾಗಿ ಮಂಡಿಗೆ ಕಾಯಿಗಳು ಬರತೊಡಗುತ್ತವೆ. ಹಣ್ಣು ಮಾಡುವ ಪ್ರಕ್ರಿಯೆಯೂ ಶುರುವಾಗುತ್ತದೆ. ಜೂನ್‌ ತಿಂಗಳಾಂತ್ಯಕ್ಕೆ ಕೊಯ್ಲು ಮಾರಾಟ ಸೇರಿದಂತೆ ಎಲ್ಲಾ ರೀತಿಯ ವಹಿವಾಟುಗಳು ಮುಗಿಯುತ್ತವೆ. ಈ ಸಲ ಜೂನ್ ಆರಂಭದಲ್ಲೇ ಕಾಯಿಗಳು ಮಂಡಿಗೆ ಬರುವುದು ನಿಲ್ಲತೊಡಗಿತು. ಹವಾಮಾನ ವೈಪರೀತ್ಯ ಹಾಗೂ ರೋಗಬಾಧೆಯಿಂದಾಗಿ ಬೆಳೆ ಕೈ ಕೊಟ್ಟಿತು. ಅಷ್ಟೊ ಇಷ್ಟೊ ಬೆಳೆ ಉಳಿಸಿಕೊಂಡವರಿಗೆ ಬೆಲೆಯೂ ಸಿಗದಾಯಿತು. ಇದರಿಂದಾಗಿ ಬೆಳೆಗಾರರಷ್ಟೇ ಅಲ್ಲದೆ ವ್ಯಾಪಾರಿಗಳು ಸಹ ನಷ್ಟ ಅನುಭವಿಸಿದ್ದಾರೆ. ಕಳೆದ ಸಲ ಇದಕ್ಕಿಂತಲೂ ಹೆಚ್ಚು ಬೆಳೆ ನಷ್ಟವಾಗಿತ್ತು. ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಸರ್ಕಾರ ನೆರವಾಗಬೇಕು’ ಎಂದು ರೈತಸಂಘದ ಮುಖಂಡ ಸಿ. ಪುಟ್ಟಸ್ವಾಮಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.