ADVERTISEMENT

ರಾಮನಗರ: ಅಕಾಲಿಕ ಮಳೆ: ಮಾವಿಗೆ ಹಾನಿ

ಹೂವು–ಪೀಚು ಕಾಯಿ ಉದುರುವ ಸಾಧ್ಯತೆ: ಬೂದಿರೋಗದ ಆತಂಕ

ಆರ್.ಜಿತೇಂದ್ರ
Published 6 ಜನವರಿ 2021, 19:30 IST
Last Updated 6 ಜನವರಿ 2021, 19:30 IST
ರಾಮನಗರ ತಾಲ್ಲೂಕಿನ ಅರೇಹಳ್ಳಿ ಸಮೀಪದ ಹೊಲದಲ್ಲಿ ಹೂಬಿಟ್ಟ ಮಾವು
ರಾಮನಗರ ತಾಲ್ಲೂಕಿನ ಅರೇಹಳ್ಳಿ ಸಮೀಪದ ಹೊಲದಲ್ಲಿ ಹೂಬಿಟ್ಟ ಮಾವು   

ರಾಮನಗರ: ಜಿಲ್ಲೆಯಾದ್ಯಂತ ಬುಧವಾರ ಮಳೆಯಾಗಿದ್ದು, ಅಕಾಲಿಕ ವರ್ಷಧಾರೆ ಮಾವು ಬೆಳೆಗಾರರ ನೆಮ್ಮದಿ ಕಸಿದಿದೆ.

ಈ ಬಾರಿ ಮುಂಗಾರು ಫಲಪ್ರದವಾಗಿದ್ದು, ಮಾವಿನ ಮರಗಳು ಮೈ ತುಂಬ ಹೂವು ಹೊದ್ದು ನಿಂತಿವೆ. ಕೆಲವು ಕಡೆ ಪೀಚು ಗಾತ್ರದ ಕಾಯಿಗಳು ಅರಳಿವೆ. ಹೀಗಾಗಿ ಈ ಬಾರಿ ಉತ್ತಮ ಫಸಲು ಸಿಗುವ ನಿರೀಕ್ಷೆ
ಬೆಳೆಗಾರರದ್ದು. ಆದರೆ ಅಕಾಲಿಕ ಮಳೆಯಿಂದಾಗಿ ಹೂವಿನ ಜೊತೆಗೆ ಪೀಚು ಕಾಯಿಯೂ ಉದುರುವ ಆತಂಕ ಎದುರಾಗಿದೆ.

‘ಈ ಬಾರಿ ನವೆಂಬರ್‌–ಡಿಸೆಂಬರ್‌ವರೆಗೆ ಸುರಿದ ಮಳೆಯೇ ಮಾವಿನ ಮರಗಳಿಗೆ ಸಾಕಿತ್ತು. ಉತ್ತಮ ಮಳೆಯಿಂದಾಗಿ ಸಾಕಷ್ಟು ಕಡೆ ಕಾಯಿ ಸಹ ಕಚ್ಚಿದ್ದವು. ಆದರೆ ಈಗ ಬೀಳುತ್ತಿರುವ ಮಳೆಯಿಂದ ಕಾಯಿಉದುರುವ ಸಾಧ್ಯತೆ ಹೆಚ್ಚು. ಮಳೆ ಹೀಗೆಯೇ ಇನ್ನೆರಡು ದಿನ ಮುಂದುವರಿದರೂ ಶೇ 80ರಷ್ಟು ಬೆಳೆ ಹಾಳಾಗುತ್ತದೆ. ಅದರಲ್ಲೂ ಬದಾಮಿ ತಳಿಯ ಮಾವು ಹೆಚ್ಚು ಉಳಿಯುವುದಿಲ್ಲ’ ಎಂದು ರಾಮನಗರ ತಾಲ್ಲೂಕಿನಅರೇಹಳ್ಳಿಯ ಮಾವು ಬೆಳೆಗಾರ ಜೋಗಿ ಶಿವರಾಮಯ್ಯ ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಈಗ ಸುರಿಯುತ್ತಿರುವ ಮಳೆ ತೀರ ಅಕಾಲಿಕವಾಗಿದೆ. ಹಿಂದೆ ಎಂದೂ ಜನವರಿಯಲ್ಲಿ ಈ ರೀತಿ ಅಕಾಲಿಕ ಮಳೆ ಆಗಿರಲಿಲ್ಲ. ಜನವರಿ–ಫೆಬ್ರುವರಿಯಲ್ಲಿ ಬೀಳುವ ಇಬ್ಬನಿಯ ತೇವಾಂಶವೇ ಮರಗಳಿಗೆ ಸಾಕಿತ್ತು’ ಎಂದು ಅವರು ಅಭಿಪ್ರಾಯಪಟ್ಟರು.

‘ಮಾವು ಹೂ ಬಿಟ್ಟಿರುವ ಕಾರಣ ಈ ಅವಧಿಯಲ್ಲಿ ಮಳೆಯ ಅವಶ್ಯಕತೆ ಇರಲಿಲ್ಲ. ತೇವಾಂಶ ಹೆಚ್ಚಾದಷ್ಟು ಹೂವು ಉದುರುವ ಜೊತೆಗೆ ಅದರಲ್ಲಿ ಬೂದಿ ರೋಗ ಹರಡುವ ಸಾಧ್ಯತೆ ಇದೆ. ಆಗ ರೈತರು ಅಗತ್ಯ ಔಷದೋಪಚಾರ ಮಾಡಬೇಕಾಗುತ್ತದೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಮುನೇಗೌಡ ತಿಳಿಸಿದರು.

‘ಕೆಲವು ಕಡೆ ಬೇಗ ಹೂ ಬಿಟ್ಟು, ಬಟಾಣಿ ಗಾತ್ರದ ಕಾಯಿ ಆಗಿರುವ ಕಡೆ ತುಂತುರು ಮಳೆಯಿಂದ ಹೆಚ್ಚು ಹಾನಿ ಇಲ್ಲ. ಆದರೆ ಹೂವು ಇರುವ ತೋಟಗಳಲ್ಲಿ ಹಾನಿ ಹೆಚ್ಚಾಗಬಹುದು. ಈ ಬಗ್ಗೆ ರೈತರು ತೋಟಗಾರಿಕಾ ವಿಜ್ಞಾನಿಗಳು, ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಮಾರ್ಗದರ್ಶನ ‍ಪಡೆಯಬೇಕು’ ಎಂದು ಅವರು ಸಲಹೆ ನೀಡಿದರು.

ಔಷದೋಪಚಾರ ಏನು?

ಅಕಾಲಿಕ ಮಳೆಯಿಂದಾಗಿ ಮಾವಿನ ಹೂ ತೆನೆ ಕಪ್ಪಾಗುವುದು ಹಾಗೂ ಬೂದಿ ರೋಗ ಬರುವ ಸಾಧ್ಯತೆ ಇದೆ. ಅದರ ನಿಯಂತ್ರಣಕ್ಕೆ ಬೆಳೆಗಾರರು ಹೆಕ್ಸಾಕೊನಾಜೋಲ್‌ 2 ಮಿ.ಲೀ. ಅಥವಾ ಥಯೋಫಿನೆಟ್‌ ಮಿಡೈಲ್‌ 1 ಗ್ರಾಂ ಅಥವಾ ಕಾರ್ಬನ್‌ಡಾಜಿಮ್‌ 1.5 ಗ್ರಾಂ ಅಥವಾ ಟ್ರೈಸಕ್ಲೊಜೋಲ್‌ 0.25 ಗ್ರಾಂ – ಈ ನಾಲ್ಕರಲ್ಲಿ ಒಂದು ರಾಸಾಯನಿಕ ಔಷಧವನ್ನು ಪ್ರತಿ ಒಂದು ಲೀಟರ್‌ ನೀರಿನಲ್ಲಿ ಬೆರೆಸಿ ಬೆಳೆಗೆ ಸಿಂಪಡಿಸಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.

ದಿನವಿಡೀ ಮಳೆ: ರಾಗಿಗೂ ಹಾನಿ

ಜಿಲ್ಲೆಯಾದ್ಯಂತ ಬುಧವಾರ ದಿನವಿಡೀ ಮಳೆ ಸುರಿಯಿತು. ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು. ಬುಧವಾರ ಮಧ್ಯಾಹ್ನ 12ರ ಸುಮಾರಿಗೆ ತುಂತುರು ಮಳೆ ಆರಂಭಗೊಂಡಿದ್ದು, ನಂತರ ನಿರಂತರವಾಗಿ ಹನಿಯುತಿತ್ತು. ಜಿಲ್ಲೆಯ ನಾಲ್ಕು ತಾಲ್ಲೂಕಿನಲ್ಲೂ ಮಳೆಯಾದ ವರದಿಯಾಗಿದೆ.

ಜಿಲ್ಲೆಯಲ್ಲಿ ಈ ವರ್ಷ 68 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ರಾಗಿ ಬೆಳೆದಿದ್ದು, ಸದ್ಯ ಒಕ್ಕಣೆ ಕಾರ್ಯ ನಡೆದಿದೆ. ಹೆಚ್ಚಿನ ರೈತರು ರಾಗಿಯನ್ನು ಮೆದೆ ಹಾಕಿ ಬಿಸಿಲಿಗಾಗಿ ಕಾಯತೊಡಗಿದ್ದಾರೆ. ಇನ್ನೂ ಅನೇಕರು ಕಣದಲ್ಲಿ ತೆನೆ ರಾಶಿ ಮಾಡಿ ಒಕ್ಕಣೆಗೆ ನಿಂತಿದ್ದಾರೆ. ಇಂತಹ ಕಡೆಗಳಲ್ಲಿ ಅಕಾಲಿಕ ಮಳೆಯಿಂದಾಗಿ ನಷ್ಟ ಆಗುವ ಸಾಧ್ಯತೆ ಇದೆ. ತೇವಾಂಶ ಹೆಚ್ಚಾದಷ್ಟು ರಾಗಿ ಮೊಳೆಕೆ ಒಡೆಯುವ ಸಾಧ್ಯತೆ ಇದೆ. ಹೀಗಾದಲ್ಲಿ ಕೈಗೆ ಬಂದ ಫಸಲು ಬಾಯಿಗೆ ಬರದಂತೆ ಆಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

***
ಈ ಅವಧಿಯಲ್ಲಿ ಮಾವಿಗೆ ಮಳೆ ಬೇಕಿರಲಿಲ್ಲ. ಹೆಚ್ಚು ಮಳೆಯಾದಷ್ಟು ಹೂವು–ಕಾಯಿ ಉದುರಿ ಬೆಳೆಗೆ ಹಾನಿಯಾಗುತ್ತದೆ
- ಜೋಗಿ ಶಿವರಾಮಯ್ಯ,ಮಾವು ಬೆಳೆಗಾರ, ಅರೇಹಳ್ಳಿ


ಮಳೆ ಹೆಚ್ಚಾದಷ್ಟು ಹೂ ಕೊಳೆಯುವ ಜೊತೆಗೆ ಬೂದಿ ರೋಗ ಕಾಣಿಸಿಕೊಳ್ಳುತ್ತದೆ. ರೈತರು ಶಿಲೀಂದ್ರನಾಶಕ ಸಿಂಪಡಿಸಿ ಬೆಳೆ ರಕ್ಷಿಸಿಕೊಳ್ಳಬೇಕು

- ಮುನೇಗೌಡ, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.