
ಮಾಗಡಿ: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್. ಮಂಜುನಾಥ್ ಅವರು ಗುರುವಾರ ಶಿವಗಂಗೆಯ ಮೂಡಲ ಗಣಪತಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದರು.
ಶ್ರೀಗಿರಿಪುರ, ಕುದೂರು, ತಿಪ್ಪಸಂದ್ರ, ಹೊಸಪಾಳ್ಯ, ಕಲ್ಯಾ, ಅಗಲಕೋಟೆಯಲ್ಲಿ ಮತದಾರರನ್ನು ಭೇಟಿ ಮಾಡಿ ಮತಯಾಚಿಸಿದರು.
ಸಂಜೆ 7ಕ್ಕೆ ಪಟ್ಟಣದ ಕಲ್ಯಾಬಾಗಿಲು ಮೂಲಕ ಮುಖ್ಯರಸ್ತೆಯಲ್ಲಿ ವಿವಿಧ ಜನಪದ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಕೆಂಪೇಗೌಡ ಬಯಲು ರಂಗಮಂದಿರ ತಲುಪಿದರು.
ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಡಾ.ಸಿ.ಎನ್.ಮಂಜುನಾಥ್, ‘ದೇಶದ ಸಮಗ್ರತೆ, ಏಕತೆ, ಅಭಿವೃದ್ದಿಗಾಗಿ ಬಿಜೆಪಿಗೆ ಮತ ಹಾಕಬೇಕು. ಎಚ್.ಡಿ.ದೇವೇಗೌಡ ಮತ್ತು ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯವನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಿದ್ದಾರೆ. ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ನನಗೆ ಮತ ನೀಡಬೇಕು’ ಎಂದು ಕೋರಿದರು.
‘ನಾನು 60ವರ್ಷಗಳ ಕಾಲ ಹೃದ್ರೋಗ ತಜ್ಞನಾಗಿ ಜಯದೇವ ಆಸ್ಪತ್ರೆಯಲ್ಲಿ ಲಕ್ಷಾಂತರ ರೋಗಿಗಳ ಸೇವೆ ಮಾಡಿದ್ದೇನೆ. ಸಾಧನೆಗಳು ಮಾತಾಗಬೇಕು. ಮೋದಿ ಸಾಧನೆಗಳನ್ನು ವಿಶ್ವ ಮೆಚ್ಚಿ ಕೊಂಡಾಡುತ್ತಿರುವುದರಿಂದ ಕೆಲವು ಟೀಕಿಸುತ್ತಿದ್ದಾರೆ. ಕಿತ್ತು ತಿನ್ನಬಾರದು, ಕೊಟ್ಟು ತಿನ್ನಬೇಕು’ ಎಂದರು.
ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ‘ಡಿ.ಕೆ.ಸುರೇಶ್ ನೋಟು ತೆಗೆದುಕೊಂಡು ಡಾ.ಸಿ.ಎನ್.ಮಂಜುನಾಥ್ ಅವರಿಗೆ ಓಟು ಹಾಕಿ’ ಎಂದರು.
ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಯಾಚಿಸಿದರು. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.