ADVERTISEMENT

ಇದೇ 26ರಂದು ಬೃಹತ್ ಪ್ರತಿಭಟನೆ

ಪುಸಭೆ ಅಧಿಕಾರಿಗಳು, ದಲ್ಲಾಳಿಗಳ ವಂಚನೆಗೆ ಕಿಡಿ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 13:19 IST
Last Updated 20 ಆಗಸ್ಟ್ 2019, 13:19 IST

ಮಾಗಡಿ: ‘ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಆ 26ರಂದು ಬೆಳಿಗ್ಗೆ 10.30ಕ್ಕೆ ಪುರಸಭೆ ಎದುರು ಪ್ರತಿಭಟನೆ ನಡೆಯಲಿದೆ’ ಎಂದು ಸೇನೆ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ತರಕಾರಿ, ಕುರಿ, ಮೇಕೆ, ಹೂವು, ಹಣ್ಣು ಮಾರಾಟಕ್ಕೆ ತರುವ ರೈತರಿಂದ ಪುರಸಭೆಯವರು ಹೆಚ್ಚುವರಿ ಸುಂಕ ವಸೂಲು ಮಾಡುತ್ತಿದ್ದಾರೆ. ಆದರೆ ಅಗತ್ಯವಿರುವ ಶೌಚಾಲಯ, ನೀರು, ನೆರಳು, ಬೆಳಕಿನ ವ್ಯವಸ್ಥೆ ಮಾಡುತ್ತಿಲ್ಲ. ಕಂದಕ ಮುಚ್ಚಿ ನಿರ್ಮಿಸಿರುವ ರಸ್ತೆಯಲ್ಲಿ ರಾತ್ರಿ 2.30ರಿಂದಲೇ ತರಕಾರಿ ಸಗಟು ವ್ಯಾಪಾರ ಆರಂಭವಾಗುತ್ತಿದೆ. ರಸ್ತೆ ಬದಿ ಬೆಳಕಿನ ವ್ಯವಸ್ಥೆ ಇಲ್ಲ. ಸಗಟು ಖರೀದಿಸುವ ದಳ್ಳಾಳಿಗಳು ರೈತರನ್ನು ವಂಚಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

‘ಇಮ್ಮಡಿ ಕೆಂಪೇಗೌಡ ನಿರ್ಮಿಸಿರುವ ಸಿಹಿನೀರಿನ ಕೆರೆಗೆ ಪಟ್ಟಣದ ಒಳಚರಂಡಿ ಮತ್ತು ಶೌಚಾಲಯದ ಕಲುಷಿತ ಹರಿಸುತ್ತಿರುವುದನ್ನು ನಿಲ್ಲಿಸಿಲ್ಲ. ಒಳಚರಂಡಿ ಅಧಿಕಾರಿಗಳು ಶಾಸಕ ಎ.ಮಂಜುನಾಥ ಅವರಿಗೆ ಸುಳ್ಳು ಮಾಹಿತಿ ನೀಡಿದ್ದು, ಜನರು ಒಳಚರಂಡಿಯ ಪೈಪ್‌ಗಳಿಗೆ ಗೋಣಿಚೀಲ ಹಾಕುತ್ತಿದ್ದಾರೆ. ರೈತರು ತಮ್ಮ ಹೊಲಗಳಿಗೆ ಒಳಚರಂಡಿ ಚೇಂಬರ್‌ ಒಡೆದು ಕಲುಷಿತ ನೀರು ಹರಿಸಿ ಬೆಳೆ ಬೆಳೆಯುತ್ತಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಶಾಸಕರು ಒಳಚರಂಡಿ ಅಧಿಕಾರಿಗಳೊಂದಿಗೆ ಕೆರೆಗೆ ಭೇಟಿ ನೀಡಿ ಪರಿಶೀಲಿಸಲಿ’ ಎಂದು ಹೇಳಿದರು.

ADVERTISEMENT

‘ಪುರಸಭೆ ಅಧಿಕಾರಿಗಳ ವಂಚನೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವವರೆಗೆ ಬೆಂಗಳೂರು–ಕುಣಿಗಲ್‌ ರಸ್ತೆ ತಡೆ ನಡೆಸಲಾಗುವುದು. ಸಾರ್ವಜನಿಕರು, ಪರಿಸರವಾದಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ರೈತರೊಂದಿಗೆ ಸೇರಿ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಅವರು ತಿಳಿಸಿದರು.

ಕಲ್ಯಾಗೇಟ್‌ ಘಟಕದ ರೈತ ಸಂಘದ ಅಧ್ಯಕ್ಷ ಸಿ.ಆರ್‌.ರಂಗಸ್ವಾಮಿ, ತಾಲ್ಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಧುಗೌಡ, ಕಾರ್ಯದರ್ಶಿ ನೆಸೆಪಾಳ್ಯದ ಮಂಜುನಾಥ್‌, ದೊಡ್ಡರಂಗಯ್ಯ, ರಾಜಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.