ADVERTISEMENT

ಶಿಕ್ಷಕಿ ಅಮಾನತಿಗೆ ಖಂಡನೆ; ಶಿಕ್ಷಕರಿಂದ ಭಾರಿ ಪ್ರತಿಭಟನೆ

ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ರಾಮೋಜಿ ಗೌಡ ನೇತೃತ್ವದಲ್ಲಿ ಶಿಕ್ಷಕರಿಂದ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 14:27 IST
Last Updated 17 ಜೂನ್ 2025, 14:27 IST
ಶಿಕ್ಷಕರ ಮೇಲಿನ ಅಧಿಕಾರಿಗಳ ದಬ್ಬಾಳಿಕೆ ಖಂಡಿಸಿ ವಿವಿಧ ಶಿಕ್ಷಕರ ಸಂಘಟನೆಗಳ ಸದಸ್ಯರು, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಮತ್ತು ರಾಮೋಜಿಗೌಡ ನೇತೃತ್ವದಲ್ಲಿ ರಾಮನಗರದ ಜೂನಿಯರ್ ಕಾಲೇಜು ಮೈದಾನದಿಂದ ಜಿಲ್ಲಾ ಪಂಚಾಯಿತಿ ಭವನದವರೆಗೆ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು
ಶಿಕ್ಷಕರ ಮೇಲಿನ ಅಧಿಕಾರಿಗಳ ದಬ್ಬಾಳಿಕೆ ಖಂಡಿಸಿ ವಿವಿಧ ಶಿಕ್ಷಕರ ಸಂಘಟನೆಗಳ ಸದಸ್ಯರು, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಮತ್ತು ರಾಮೋಜಿಗೌಡ ನೇತೃತ್ವದಲ್ಲಿ ರಾಮನಗರದ ಜೂನಿಯರ್ ಕಾಲೇಜು ಮೈದಾನದಿಂದ ಜಿಲ್ಲಾ ಪಂಚಾಯಿತಿ ಭವನದವರೆಗೆ ಮಂಗಳವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು   

ರಾಮನಗರ: ತರಗತಿಯಲ್ಲಿ ಚೆಲ್ಲಿದ ಹಾಲನ್ನು ವಿದ್ಯಾರ್ಥಿಗಳಿಂದ ಸ್ವಚ್ಛಗೊಳಿಸಿ ನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿಯ ಅಮಾನತು ಹಾಗೂ ಶಿಕ್ಷಕರ ಮೇಲಿನ ಅಧಿಕಾರಿಗಳ ದಬ್ಬಾಳಿಕೆ ಖಂಡಿಸಿ, ಜಿಲ್ಲೆಯ ವಿವಿಧ ಶಿಕ್ಷಕರ ಸಂಘಟನೆಗಳ ಸದಸ್ಯರು ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಮತ್ತು ರಾಮೋಜಿಗೌಡ ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯಿತಿ ಭವನದ ಎದುರು ಮಂಗಳವಾರ ಭಾರಿ ಪ್ರತಿಭಟನೆ ನಡೆಸಿದರು.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ ಜಮಾಯಿಸಿದ ಶಿಕ್ಷಕರು, ಅಲ್ಲಿಂದ ಜಿಲ್ಲಾ ಪಂಚಾಯಿತಿ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ, ‘ಬೇಕೇ ಬೇಕೇ ನ್ಯಾಯ ಬೇಕು’, ‘ಶಿಕ್ಷಕರ ಮೇಲಿನ ಅಧಿಕಾರಿಗಳ ದೌರ್ಜನ್ಯ ನಿಲ್ಲಲಿ’ ಎಂದು ಘೋಷಣೆಗಳನ್ನು ಕೂಗಿದರು.

ಮಾರ್ಗದುದ್ದಕ್ಕೂ ‘ಅಧಿಕಾರಿಗಳೇ ನೀವೂ ಬನ್ನಿ, ಶಾಲೆಯನ್ನು ಸ್ವಚ್ಛಗೊಳಿಸೋಣ’,‘ಶಿಕ್ಷಕರ ಮೇಲಿನ ದಬ್ಬಾಳಿಕೆ ಬಿಡಿ. ನಿಮ್ಮನ್ನು ಕೂಡ ತಿದ್ದಿರುವುದು ಶಿಕ್ಷಕರೇ ಎಂಬುದನ್ನು ಮರೆಯದಿರಿ’, ‘ಅನ್ಯ ಕೆಲಸಗಳಿಗೆ ಕಡಿವಾಣ ಹಾಕಿ. ಶೈಕ್ಷಣಿಕ ಚಟುವಟಿಕೆಗೆ ಒತ್ತು ನೀಡಿ’ ಎಂಬ ಪ್ರತಿಭಟನಾ ಫಲಕಗಳನ್ನು ಪ್ರದರ್ಶಿಸಿ ದೌರ್ಜನ್ಯದ ವಿರುದ್ಧ ಆಕ್ರೋಶ ಹೊರಹಾಕಿದರು.

ADVERTISEMENT

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಪುಟ್ಟಣ್ಣ, ‘ಅಧಿಕಾರಿಗಳು ಶಿಕ್ಷಕರನ್ನು ಸರಿಯಾಗಿ ಪಾಠ ಮಾಡಲು ಬಿಡದೆ ಫಲಿತಾಂಶ ಕೇಳುವ ಪರಿಪಾಠ ಹೆಚ್ಚಾಗಿದೆ. ಶಿಕ್ಷಕರಿಗೆ ಶೈಕ್ಷಣಿಕ ಚಟುವಟಿಕೆಗಳಿಗಿಂತ ಶೈಕ್ಷಣಿಕೇತರ ಕೆಲಸಗಳ ಕಾರ್ಯಭಾರವೇ ಹೆಚ್ಚಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಶಿಕ್ಷಕರು ಬೋಧನೆಗಿಂತ ಶಾಲಾ ಶೌಚಾಲಯ ಸ್ವಚ್ಛತೆ, ಬಿಸಿಯೂಟ ನಿರ್ವಹಣೆ, ಮೊಟ್ಟೆ ವಿತರಣೆ, ಊಟ ಬಡಿಸುವುದು, ಪಾತ್ರೆ ತೊಳೆಯುವುದು ಸೇರಿದಂತೆ ಇತರ ಕೆಲಸಗಳಲ್ಲೇ ಹೆಚ್ಚಾಗಿ ತೊಡಗಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಮಕ್ಕಳು ತರಗತಿ ಮತ್ತು ಶಾಲಾವರಣ ಸ್ವಚ್ಛಗೊಳಿಸಿದ ಕಾರಣಕ್ಕೆ ಶಿಕ್ಷಕರನ್ನು ಅಮಾನತುಗೊಳಿಸಿ, ಅವರ ಮನೋಬಲ ಕುಗ್ಗಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ’ ಎಂದರು.

‘ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತೆ ಮಾಡಿಸುವುದು ತಪ್ಪು. ಉಳಿದಂತೆ ತರಗತಿ ಹಾಗೂ ಶಾಲಾವರಣ ಸ್ವಚ್ಛ ಮಾಡಿದರೆ ತಪ್ಪೇನು? ಸ್ವಚ್ಛತೆ ಸಹ ಶಿಕ್ಷಣದ ಒಂದು ಭಾಗ. ನಮ್ಮ ಪರಿಸರವನ್ನು ನಾವೇ ಶುಚಿಯಾಗಿಟ್ಟುಕೊಳ್ಳಬೇಕು. ಅದನ್ನು ಶಾಲೆಯಲ್ಲೇ ಕಲಿಸಬೇಕು. ಇದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳದೆ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರನ್ನು ಅಮಾನತು ಮಾಡುವ, ನೋಟಿಸ್ ನೀಡುವುದು ಸರಿಯಲ್ಲ’ ಎಂದು ಹೇಳಿದರು.

ನಂತರ ಪುಟ್ಟಣ್ಣ ಮತ್ತು ರಾಮೋಜಿಗೌಡ ನೇತೃತ್ವದ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳ ನಿಯೋಗವು ಜಿ.ಪಂ. ಸಿಇಒ ಅನ್ಮೋಲ್ ಜೈನ್ ಅವರನ್ನು ಭೇಟಿ ಮಾಡಿತು. ಕ್ಷುಲ್ಲಕ ಕಾರಣಕ್ಕೆ ಶಿಕ್ಷಕರನ್ನು ಅಮಾನತು ಮಾಡದೆ, ಅವರ ಮೇಲಿನ ಒತ್ತಡಗಳನ್ನು ತಗ್ಗಿಸುವಂತೆ ಕೋರಿತು. ಅದಕ್ಕೆ ಸಿಇಒ ಸಕಾರತ್ಮಕವಾಗಿ ಸ್ಪಂದಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರಮೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸ್ವಾಮಿ, ಕರ್ನಾಟಕ ರಾಜ್ಯ ಪದವಿಪೂರ್ವ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ವೇಣುಗೋಪಾಲ್ ಕೆ., ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ, ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಶಿಕ್ಷಕರ ಸಂಘ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಹಾಗೂ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ರಾಮನಗರದ ಜಿಲ್ಲಾ ಪಂಚಾಯಿತಿ ಭವನದ ಆವರಣದಲ್ಲಿ ಜಮಾಯಿಸಿದ್ದ ಶಿಕ್ಷಕರು
ಶಿಕ್ಷಕರು ಪ್ರದರ್ಶಿಸಿದ ಪ್ರತಿಭಟನಾ ಫಲಕಗಳು

ಸ್ವಚ್ಛತೆಗೆ ಪರ್ಯಾಯ ವ್ಯವಸ್ಥೆ ಮಾಡಿ’:

‘ಶಾಲೆಗಳಲ್ಲಿ ಸ್ವಚ್ಛತೆ ಕೆಲಸ ನಿರ್ವಹಿಸಲು ಗ್ರೂಪ್ ‘ಡಿ’ ಸಿಬ್ಬಂದಿ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಲೇ ಬಂದಿದ್ದೇನೆ. ಆದರೆ ಇದುವರೆಗೆ ಯಾವ ಸರ್ಕಾರಗಳೂ ಆ ಬಗ್ಗೆ ಗಮನ ಹರಿಸುತ್ತಿಲ್ಲ. ಮಕ್ಕಳೇ ತರಗತಿ ಮತ್ತು ಶಾಲಾವರಣ ಶುಚಿಯಾಗಿಟ್ಟುಕೊಳ್ಳುವ ಪರಿಪಾಠ ಹಿಂದಿನಿಂದಲೂ ಇದೆ. ಇದನ್ನರಿಯದ ಕೆಲ ಅಧಿಕಾರಿಗಳು ಆರ್‌ಟಿಐ ಕಾರ್ಯಕರ್ತರು ಹಾಗೂ ಬ್ಲಾಕ್‌ಮೇಲರ್‌ಗಳ ಮಾತು ಕೇಳಿ ಮಕ್ಕಳಿಂದ ಕೆಲಸ ಮಾಡಿಸಿದರೆಂಬ ಕಾರಣಕ್ಕೆ ಶಿಕ್ಷಕರನ್ನು ಅಮಾನತು ಮಾಡುವುದು ಸರಿಯಲ್ಲ. ಹಾಗೆ ಮಾಡುವುದಾದರೆ ಸ್ವಚ್ಛತೆ ಕೆಲಸಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಶೌಚಾಲಯ ಮತ್ತು ಶಾಲಾವರಣ ಸ್ವಚ್ಛತೆ ಹೊಣೆಯನ್ನು ಹೊರಗುತ್ತಿಗೆ ನೀಡಬೇಕು. ಅವರು ನಿರ್ದಿಷ್ಟ ಶಾಲೆಗಳನ್ನು ವಹಿಸಿಕೊಂಡು ಸ್ವಚ್ಛತೆ ಮಾಡಿದರೆ ಶಿಕ್ಷಕರು ಸಹ ನಿರಾಳರಾಗುತ್ತಾರೆ’ ಎಂದು ಪುಟ್ಟಣ್ಣ ಹೇಳಿದರು.

ಶಿಕ್ಷಕರ ಮೇಲಿನ ಒತ್ತಡ ತಗ್ಗಿಸಿ’:

‘ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಶಿಕ್ಷಕರ ಮೇಲೆ ಕಾರ್ಯೋತ್ತಡ ಹೆಚ್ಚಾಗಿದೆ. ಶೈಕ್ಷಣಿಕೇತರ ಕೆಲಸಗಳ ಒತ್ತಡದಲ್ಲಿ ಸಿಲುಕಿ ನಲುಗುತ್ತಿದ್ದಾರೆ. ಈ ಒತ್ತಡವನ್ನು ಕಡಿಮೆ ಮಾಡಿ ಶಿಕ್ಷಕರು ಮತ್ತಷ್ಟು ಉತ್ತಮವಾಗಿ ಬೋಧನೆ ಮಾಡುವಂತಹ ವಾತಾವರಣ ಸೃಷ್ಟಿಸಲು ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಅದು ಬಿಟ್ಟು ಕ್ಷುಲ್ಲಕ ಕಾರಣಗಳಿಗೆ ಶಿಕ್ಷಕರನ್ನು ಅಮಾನತು ಮಾಡುತ್ತಾ ಕಿರುಕುಳ ನೀಡಬಾರದು’ ಎಂದು ವಿಧಾನ ಪರಿಷತ್ ಸದಸ್ಯ ರಾಮೋಜಿ ಗೌಡ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.