ADVERTISEMENT

ನರೇಗಾ ಸಿಬ್ಬಂದಿಗೆ ರಕ್ಷಣೆ ನೀಡಿ

ತಾಂತ್ರಿಕ ಎಂಜಿನಿಯರ್‌ ರೋಹಿತ್‌ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 5:59 IST
Last Updated 3 ಜನವರಿ 2023, 5:59 IST
ನರೇಗಾ ಯೋಜನೆಯ ಸಿಬ್ಬಂದಿ ಸೋಮವಾರ ಜಿ.ಪಂ. ಭವನದ ಮುಂಭಾಗ ಪ್ರತಿಭಟನೆ ನಡೆಸಿದರು
ನರೇಗಾ ಯೋಜನೆಯ ಸಿಬ್ಬಂದಿ ಸೋಮವಾರ ಜಿ.ಪಂ. ಭವನದ ಮುಂಭಾಗ ಪ್ರತಿಭಟನೆ ನಡೆಸಿದರು   

ರಾಮನಗರ: ನರೇಗಾ ಯೋಜನೆಯ ತಾಂತ್ರಿಕ ಎಂಜಿನಿಯರ್‌ ರೋಹಿತ್‌ ಗೌಡ ಮೇಲಿನ ಹಲ್ಲೆ ಖಂಡಿಸಿ ಹಾಗೂ ನರೇಗಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕರ್ತವ್ಯ ಸಮಯದಲ್ಲಿ ಸೂಕ್ತ ರಕ್ಷಣೆ ಒದಗಿಸಬೇಕೆಂದು ಆಗ್ರಹಿಸಿ ಸೋಮವಾರ ನರೇಗಾ ವಿಭಾಗದ ಸಿಬ್ಬಂದಿ ಪ್ರತಿಭಟನೆ
ನಡೆಸಿದರು.

ಕಪ್ಪುಪಟ್ಟಿ ಧರಿಸಿ ನಗರದ ಜಿಲ್ಲಾ ಪಂಚಾಯಿತಿ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು. ನಂತರ ಜಿ.ಪಂ. ಸಿಇಒ ದಿಗ್ವಿಜಯ್ ಬೋಡ್ಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಡಿವೈಎಸ್‌ಪಿ ಮೋಹನ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಕನಕಪುರ ತಾಲ್ಲೂಕಿನ ತುಂಗಣಿ ಗ್ರಾ.ಪಂ.ನಲ್ಲಿ ತಾಂತ್ರಿಕ ಸಹಾಯಕ ಎಂಜಿನಿಯರ್ ಆಗಿರುವ ರೋಹಿತ್‌ಗೌಡ ಡಿ. 31ರಂದು ಪಿ. ರಾಂಪುರ ಗ್ರಾಮದ ಪ್ರಸಾದ್ ಎಂಬ ವ್ಯಕ್ತಿಯ ಕುರಿ ಶೆಡ್‌ ಕಾಮಗಾರಿಯ ಅಳತೆ ಮಾಡಲು ತೆರಳಿದ್ದರು. ಈ ಸಂದರ್ಭದಲ್ಲಿ ಪ್ರಸಾದ್ ಬೇರೆ ಸ್ಥಳದಲ್ಲಿ ಅಳತೆ
ಮಾಡಿ, ಅಳತೆ ಪುಸ್ತಕದಲ್ಲಿ ದಾಖಲು ಮಾಡಿ ಕೊಡುವಂತೆ ರೋಹಿತ್‌ ಗೌಡಗೆ ಒತ್ತಾಯಿಸಿದ್ದರು. ಆದರೆ, ಇದಕ್ಕೆ ನಿರಾಕರಿಸಿದ್ದರಿಂದ ರೋಹಿತ್ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡಿದ್ದರಿಂದ ಕೈಮೂಳೆ ಮುರಿದಿದ್ದು, ಸಾಕಷ್ಟು ತೊಂದರೆಯಾಗಿದೆ ಎಂದು ಆರೋಪಿಸಿದರು.

ADVERTISEMENT

ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶದಿಂದ ನರೇಗಾದಡಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆದರೆ, ಯೋಜನೆಯನ್ನು ದುರುಪಯೋಗ ಪಡಿಸಿಕೊಂಡು ಹಣ ಮಾಡಲು ಮುಂದಾಗಿರುವ ಕೆಲ ಕಿಡಿಕೇಡಿಗಳು ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾಮಗಾರಿ ಸ್ಥಳ ಪರಿಶೀಲನೆಗೆ ಮುಂದಾದಾಗ, ಅಕ್ರಮಗಳಿಗೆ ಸಹಕಾರ ನೀಡದಂತಹ
ಸಂದರ್ಭದಲ್ಲಿ ಅವರಿಗೆ ಬೆದರಿಕೆ ಹಾಕುವುದು, ಹಲ್ಲೆ ಮಾಡುವುದು ಕಂಡುಬರುತ್ತಿದೆ ಎಂದು ದೂರಿದರು.

ಬೇಡಿಕೆಗಳು: ನೌಕರರು ಕರ್ತವ್ಯದ ವೇಳೆ ಮೃತಪಟ್ಟಲ್ಲಿ ಸಿಬ್ಬಂದಿಗೆ ₹10 ಲಕ್ಷ ಪರಿಹಾರ ನೀಡಬೇಕು. ಅನುಕಂಪದ ಆಧಾರದ ಮೇಲೆ ಕೆಲಸವನ್ನು ನೀಡಬೇಕು. ಕರ್ತವ್ಯದಲ್ಲಿರುವಾಗ ಸಿಬ್ಬಂದಿ ಮೇಲೆ ಹಲ್ಲೆ, ರಸ್ತೆ ಅಪಘಾತಗಳು ಸಂಭವಿಸಿದ ಸಂದರ್ಭದಲ್ಲಿ ಸಿಬ್ಬಂದಿಯ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಮಹಿಳಾ ನೌಕರರಿಗೆ ಸಂಜೆ 6 ಗಂಟೆ ನಂತರ ತುರ್ತು
ಹೊರತುಪಡಿಸಿ ಕಚೇರಿಯಲ್ಲಿ ಇರಿಸಿಕೊಳ್ಳದಂತೆ ಸೂಚನೆ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ
ಮಾಡಿದರು.

ರಾಮನಗರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಡಿಪಿಸಿ ಜಿಲ್ಲಾ ಮತ್ತು ತಾಲ್ಲೂಕು ಎಂ.ಐ.ಎಸ್. ಸಂಯೋಜಕರು, ಜಿಲ್ಲಾ ಮತ್ತು ತಾಲ್ಲೂಕು ಐ.ಇ.ಸಿ. ಸಂಯೋಜಕರು, ತಾಂತ್ರಿಕ ಸಹಾಯಕ ಎಂಜಿನಿಯರ್‌ಗಳು, ಜಿಲ್ಲಾ ಮತ್ತು ತಾಲ್ಲೂಕು ಗಣಕ ಯಂತ್ರ ನಿರ್ವಾಹಕರು, ಬಿ.ಎಫ್.ಟಿಗಳು, ಗ್ರಾಮ ಕಾಯಕ ಮಿತ್ರರು
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.