ರಾಮನಗರದ ಆದಿಚುಂಚನಗಿರಿ ಶಾಖಾ ಮಠದ ಸಭಾಂಗಣದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಂಘದ ನೂತನ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ ಮತ್ತು ಕಾರ್ಯದರ್ಶಿ ಮಂಜುನಾಥ್ ಅವರಿಗೆ ಅನ್ನದಾನೇಶ್ವರನಾಥ ಸ್ವಾಮೀಜಿ ಸಂಘದ ಬಾವುಟ ನೀಡಿದರು.
ರಾಮನಗರ: ‘ಅನ್ನದಾತನಾದ ರೈತ ಲಾಭ–ನಷ್ಟ ಲೆಕ್ಕಿಸದೆ ಬೆಳೆ ಬೆಳೆಯುತ್ತಾನೆ. ಆತನ ಬದುಕು ಹಸನಾಗಿದ್ದರೆ ಜಗತ್ತು ಇನ್ನೂ ಸಮೃದ್ಧವಾಗಿರುತ್ತದೆ. ಆದರೆ, ವರ್ಷದಿಂದ ವರ್ಷಕ್ಕೆ ರೈತನ ಬದುಕು ಸಂಕಷ್ಟಮಯವಾಗುತ್ತಿದೆ. ಇದರಿಂದ ಪಾರು ಮಾಡಲು ಆತ ಬೆಳೆಯುವ ಬೆಳೆಗೆ ಬೆಂಬಲ ಬೆಲೆಯ ಗ್ಯಾರಂಟಿಯ ಬಲ ಸಿಗಬೇಕಿದೆ’ ಎಂದು ನಗರದಲ್ಲಿರುವ ಆದಿಚುಂಚನಗಿರಿ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಒತ್ತಾಯಿಸಿದರು.
ಭಾರತೀಯ ಕಿಸಾನ್ ಸಂಘದ ಕರ್ನಾಟಕ ಪ್ರದೇಶದ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಮಠದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಾರ್ಮಿಕರಿಗೆ ಕನಿಷ್ಠ ವೇತನ ಇರುವಂತೆ, ರೈತ ಬೆಳೆದ ಬೆಳೆಗೆ ಖರ್ಚು ಹೊರತುಪಡಿಸಿದ ಕನಿಷ್ಠ ಲಾಭದ ಖಾತ್ರಿ ಸಿಗಬೇಕು’ ಎಂದರು.
‘ವ್ಯವಸ್ಥೆಯು ರೈತರನ್ನು ಬಳಸಿಕೊಳ್ಳುತ್ತಿದೆಯೇ ಹೊರತು ಅವರ ಶ್ರೇಯೋಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನಗಲಣ್ನು ಮಾಡುತ್ತಿಲ್ಲ. ಇದೇ ಕಾರಣಕ್ಕೆ ಸಾಲದ ಸುಳಿಗೆ ಸಿಲುಕುವ ರೈತರ ಆತ್ಮಹತ್ಯೆಗಳು ಹೆಚ್ಚುತ್ತಲೇ ಇವೆ. ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಕೆಲಸವನ್ನು ಪ್ರಭುತ್ವ ಮಾಡಬೇಕಿದೆ’ ಎಂದು ಹೇಳಿದರು.
ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಮಾತನಾಡಿ, ‘ನಮ್ಮ ದೇಶದಲ್ಲಿ ರೈತರು ಮಾತ್ರವಲ್ಲದೆ, ದೇವ ಮಾನವರು ಹಾಗೂ ರಾಜ ಮಹಾರಾಜರು ಸಹ ಉಳುಮೆ ಮಾಡುತ್ತಿದ್ದ ಉಲ್ಲೇಖವಿದೆ. ನಮ್ಮದು ಸಾಮಾನ್ಯ ಕೃಷಿ ಅಲ್ಲ. ಬದಲಿಗೆ ವೈಜ್ಞಾನಿಕ ಕೃಷಿಯಾಗಿದೆ. ವಿಶ್ವದಲ್ಲಿ ಎಲ್ಲೂ ಇರದ ಕೃಷಿ ಮಾದರಿ ಈ ನೆಲದಲ್ಲಿದ್ದರೂ, ರೈತರ ಪರಿಸ್ಥಿತಿ ಉತ್ತಮವಾಗಿಲ್ಲ’ ಎಂದರು.
‘ಮುಂಚೆ ಕೃಷಿ ಸಾಲದ ಬಡ್ಡಿದರ ಸಾಮಾನ್ಯ ರೈತರ ಕೈಗೆಟುಕುತ್ತಿರಲಿಲ್ಲ. ಅದರ ವಿರುದ್ಧ ಕಿಸಾನ್ ಸಂಘ ನಡೆಸಿದ ಹೋರಾಟದ ಫಲವಾಗಿ ಈಗ ಶೇಕಡ 3ರಿಂದ ಶೂನ್ಯದರಕ್ಕೆ ಇಳಿದಿದೆ. ರೈತ ಪರವಾದ ವಿಷಯಗಳನ್ನು ಆಧರಿಸಿ ಸಂಘವು ನಡೆಸಿಕೊಂಡು ಬಂದಿರುವ ಹೋರಾಟಗಳಿಂದಾಗಿ ರೈತಪರವಾದ ಹಲವು ನಿರ್ಧಾರಗಳನ್ನು ಸರ್ಕಾರ ಕೈಗೊಂಡಿದೆ’ ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ, ‘ರೈತರು ಹಾಗೂ ಕೃಷಿಯ ಏಳಿಗೆಗಾಗಿಯೇ ಇರುವ ಸಂಘವು ಗ್ರಾಮ ಮಟ್ಟದಲ್ಲಿ ಸಮಿತಿಗಳ ರಚನೆಗೆ ಒತ್ತು ನೀಡುವ ಮೂಲಕ, ರೈತರನ್ನು ಒಗ್ಗೂಡಿಸುವ ಕೆಲಸ ಮಾಡಲಿದೆ. ಕೃಷಿಕರು ಒಗ್ಗಟ್ಟಾಗಿದ್ದರೆ ಮಾತ್ರ ಅವರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ’ ಎಂದರು.
ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಕುಮಾರಸ್ವಾಮಿ ಮತ್ತು ಹಾಗೂ ಕಾರ್ಯದರ್ಶಿಯಾಗಿ ಮಂಜುನಾಥ್ ಅವರಿಗೆ ಸಂಘದ ಬಾವುಟ ನೀಡಿ ನೇಮಕ ಮಾಡಲಾಯಿತು. ಸಂಘದ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಮಂಡ್ಯ ಜಿಲ್ಲಾಧ್ಯಕ್ಷ ಅಪ್ಪಾಜಿ ಗೌಡ, ನಿವೃತ್ತ ಯೋಧ ಓಂಕಾರೇಶ್ವರ, ರೈತ ಮುಖಂಡರಾದ ಸಂಪತ್ ಕುಮಾರ್, ನಾಗರಾಜು, ನವೀಶ್ , ಸ್ವಾಮಿ, ರಾಜಣ್ಣ, ಶಂಕರ್, ಅಭಿಷೇಕ್ ಗೌಡ, ಸೋಮಶೇಖರ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.