ರಾಮನಗರ: ಕನಿಷ್ಠ ವೇತನ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ನೇತೃತ್ವದಲ್ಲಿ ವಿವಿಧ ನೌಕರರು ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು.
ನೌಕರರಿಗೆ ಅವೈಜ್ಞಾನಿಕವಾಗಿ ನೀಡುತ್ತಿದ್ದ ಕನಿಷ್ಠ ವೇತನದ ವಿರುದ್ಧ ಸಂಘವು ಹೈಕೋರ್ಟ್ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ನೌಕರರಿಗೆ ಕನಿಷ್ಠ ವೇತನ ನೀಡಬೇಕು ಎಂದು ಹೈಕೋರ್ಟ್ ಕಳೆದ ವರ್ಷ ಇಲಾಖೆಗೆ ಹತ್ತು ದಿನಗಳ ಗಡುವು ನೀಡಿತ್ತು. ಕನಿಷ್ಠ ವೇತನದ ಅಧಿಸೂಚನೆ ರದ್ದು ಮಾಡಿದ್ದ ಸರ್ಕಾರ, 2025ರ ಏ. 11ರಂದು ಕನಿಷ್ಠ ವೇತನ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು ತಿಳಿಸಿದೆ ಎಂದು ಪ್ರತಿಭಟನಕಾರರು ತಿಳಿಸಿದರು.
ಕಸ ವಸೂಲಿಗಾರ, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಈ ಹುದ್ದೆಗಳನ್ನು ಅತಿ ಕುಶಲರಾಗಿ ಪರಿಗಣಿಸಿ ಮೂಲ ವೇತನ ₹38,021, ವಾಟರ್‌ಮ್ಯಾನ್, ಪಂಪ್ ಆಪರೇಟರ್ ಕಂ ಮೆಕ್ಯಾನಿಕ್ ಹುದ್ದೆಗಾಗಿ ಕುಶಲರಾಗಿ ಪರಿಗಣಿಸಿ ಮೂಲವೇತನ ₹33,062, ಅಟೆಂಡರ್ - ಜವಾನರನ್ನು ಅರೆ ಕುಶಲರಾಗಿ ಪರಿಗಣಿಸಿ ಮೂಲವೇತನ ₹28,750 ಹಾಗೂ ಕಸ ಗುಡಿಸುವವರು, ಸ್ವಚ್ಛತಾಗಾರರನ್ನು ಅಕುಶಲರಾಗಿ ಪರಿಗಣಿಸಿ ಮೂಲ ವೇತನ ₹25 ಸಾವಿರ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಕನಿಷ್ಠ ವೇತನವನ್ನು ಸರ್ಕಾರ 2025ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಜಾರಿಗೊಳಿಸಬೇಕು. ಪಂಚಾಯಿತಿಗಳಲ್ಲಿ ದುಡಿಯುವ ಸಿಬ್ಬಂದಿಗೆ ಸೇವಾ ಹಿರಿತನದ ಮಾನ್ಯತೆ ನೀಡಿ, ವೇತನದಲ್ಲಿ ಶೇ 2ರಷ್ಟು ಹೆಚ್ಚಳ ಮಾಡಬೇಕು. ಪ್ರತಿ ವರ್ಷ ಅದನ್ನು ಪರಿಗಣಿಸಿ ಹೆಚ್ಚುವರಿ ಭತ್ಯೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮೂಲಕ ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾಧ್ಯಕ್ಷ ಪ್ರದೀಪ್ , ಕಾರ್ಯದರ್ಶಿ ಜಯಲಿಂಗ, ಮುಖಂಡರಾದ ರಾಜೇಶ್, ಸುರೇಶ್, ಖಮರುದ್ದೀನ್ ಪಾಷ, ಶೇಖರ್, ನಂದೀಶ್, ಭವ್ಯ, ಲಿಂಗು, ಮಹದೇವಯ್ಯ, ರೇಣುಕಯ್ಯ ನಾಗರಾಜ್, ವೀರಭದ್ರಯ್ಯ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.