ADVERTISEMENT

ಮಾಗಡಿಗೆ ಸೀಮಿತವಾದ ಉಸ್ತುವಾರಿ ಸಚಿವ: ಟೀಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 15:20 IST
Last Updated 16 ಜೂನ್ 2020, 15:20 IST
ಚನ್ನಪಟ್ಟಣದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಣ್ಣ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
ಚನ್ನಪಟ್ಟಣದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಣ್ಣ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು   

ಚನ್ನಪಟ್ಟಣ: ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಮಾಗಡಿ ತಾಲ್ಲೂಕಿಗೆ ಮಾತ್ರ ಸೀಮಿತರಾಗಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಣ್ಣ ಟೀಕಿಸಿದರು.

ಮಂಗಳವಾರ ಬುಧವಾರ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವರು ತಾಲ್ಲೂಕಿನ ಸಮಸ್ಯೆಗಳನ್ನು ಮೊದಲು ಅರಿತುಕೊಂಡಾಗ ಮಾತ್ರ ಅವುಗಳನ್ನು ಪರಿಹರಿಸಲು ಸಾಧ್ಯ. ಗ್ರಾ.ಪಂ. ತಾ.ಪಂ. ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ಕರೆದು ಮೊದಲು ಚರ್ಚಿಸಬೇಕು. ಕೇವಲ ಅಧಿಕಾರಿಗಳ ಜತೆ ಸಭೆ ನಡೆಸುವುದರಿಂದ ಏನೂ ಪ್ರಯೋಜನವಿಲ್ಲ’ ಎಂದರು.

‘ಪ್ರತಿ ತಾಲ್ಲೂಕಿನಲ್ಲಿಯೂ ಸಹ ಶಾಸಕರ ಜತೆಗೆ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಬೇಕು. ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಬೇಕು. ಆಶ್ರಯ, ಬಸವ ವಸತಿ ಯೋಜನೆ, ನರೇಗಾ ಸೇರಿದಂತೆ ವಿವಿಧ ಇಲಾಖೆಗಳಿಂದ ಯಾವುದೇ ಪ್ರಗತಿ ಆಗುತ್ತಿಲ್ಲ. ಕೆಲಸಗಳು ಸಹ ಆಗುತ್ತಿಲ್ಲ. ವಸತಿ ಅನುದಾನ ಸ್ಥಗಿತಗೊಂಡಿದೆ. ಬಡವರು ಹಣ ಬರುತ್ತದೆಂದು ಇರುವ ಮನೆ ಕೆಡವಿ ಸೂರಿಲ್ಲದೆ ಕಾಯುತ್ತಿದ್ದಾರೆ. ನರೇಗಾದಲ್ಲಿ ಕೋಟ್ಯಂತರ ರೂಪಾಯಿ ಬಾಕಿ ಬರಬೇಕಿದೆ. ಇದೆಲ್ಲವನ್ನೂ ಸರ್ಕಾರದ ಮೂಲಕ ಸರಿಪಡಿಸುವ ಕೆಲಸ ಮಾಡಬೇಕು’ ಎಂದರು.
ರೇಷ್ಮೆ ಇಲಾಖೆಯ ಮೂಲಕ ಕೆಲವರು ರೇಷ್ಮೆ ಸಾಕಾಣಿಕಾ ಮನೆಗಳನ್ನು ಕಟ್ಟಕೊಂಡಿದ್ದಾರೆ. ಅವರಿಗೂ ಹಣ ಬಿಡುಗಡೆಯಾಗಿಲ್ಲ. ಕೃಷಿ, ತೋಟಗಾರಿಕೆ ಬೆಳೆಗಳಿಗೆ ಪರಿಹಾರ ಬಂದಿಲ್ಲ. ಇಲಾಖೆಗಳ ಮೂಲಕ ಹಲವು ಸವಲತ್ತುಗಳು ದೊರೆಯುತ್ತಿದ್ದರೂ ಅವು ಜನರಿಗೆ ತಲುಪುತ್ತಿಲ್ಲ. ಈ ಬಗ್ಗೆ ಗಮನಹರಿಸಬೇಕು’ ಎಂದು ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು, ‘ಶಾಸಕರು ಹಾಗೂ ಸಂಸದರು ಈ ಎಲ್ಲ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸುವ ಮೂಲಕ ಬಡವರಿಗೆ ನ್ಯಾಯ ದೊರಕಿಸಬೇಕು. ಸ್ಥಗಿತಗೊಂಡಿರುವ ಎಲ್ಲ ಅನುದಾನಗಳನ್ನು ಬಿಡುಗಡೆಗೊಳಿಸುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದರು.
ತಾ.ಪಂ. ಸದಸ್ಯರಾದ ಪ್ರಭು, ಶ್ರೀನಿವಾಸ್, ಸಿದ್ದರಾಮಯ್ಯ, ಪ್ರಕಾಶ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.