ADVERTISEMENT

ತನಿಖಾ ಸಂಸ್ಥೆಗಳ ದುರುಪಯೋಗ: ಕಾಂಗ್ರೆಸ್ ಕಿಡಿ

ಯುವ ಕಾಂಗ್ರೆಸ್ ವಕ್ತಾರರ ಆಯ್ಕೆಗೆ ಭಾಷಣ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 1:39 IST
Last Updated 16 ಜೂನ್ 2022, 1:39 IST
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಸಚಿನ್‌ ಗೌಡ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಸಚಿನ್‌ ಗೌಡ ಮಾತನಾಡಿದರು   

ರಾಮನಗರ: ಸ್ವತಂತ್ರ ತನಿಖಾ ಸಂಸ್ಥೆಗಳನ್ನು ಬಿಜೆಪಿ ಸರ್ಕಾರವು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಸಚಿನ್‌ ಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಈಗ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿಯವರಿಗೆ ಅಧಿಕಾರದ ಮದ ಏರಿದ್ದು, ಅದಕ್ಕಾಗಿಯೇ ಇದನ್ನೆಲ್ಲ ಮಾಡುತ್ತಿದ್ದಾರೆ. ನ್ಯಾಷನಲ್‌ ಹೆರಾಲ್ಡ್‌ ಹಗರಣದ ತನಿಖೆಯನ್ನು ರಾಜಕಾರಣಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಹಿಂದೆ ಈ ಪ್ರಕರಣದ ವಿಚಾರಣೆ ಮುಗಿದಿತ್ತು. ಇದೀಗ ಮತ್ತೆ ವಿವಾದ ಮಾಡಲಾಗುತ್ತಿದೆ. ಬಿಜೆಪಿ ಸೇಡಿನ ರಾಜಕಾರಣ ಮುಂದುವರಿದರೆ ಬೀದಿಗೆ ಇಳಿದು ಪ್ರತಿಭಟಿಸಲಾಗುವುದು’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ವಕ್ತಾರರ ಆಯ್ಕೆಗೆ ಸ್ಪರ್ಧೆ: ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಭವ್ಯಾ ಮಾತನಾಡಿ, ಯುವ ಕಾಂಗ್ರೆಸ್ ವಕ್ತಾರರನ್ನು ಆಯ್ಕೆ ಸಲುವಾಗಿ ‘ಯಂಗ್ ಇಂಡಿಯಾ ಕೇ ಬೋಲ್-2’ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದ್ದು, ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಹೇಳಿದರು.
18 ರಿಂದ 35 ವರ್ಷದೊಳಗಿನ ಯುವಜನರು ₹100 ಶುಲ್ಕ ಪಾವತಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರಜಾಪ್ರಭುತ್ವದ ಕಗ್ಗೊಲೆ , ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸೇರಿದಂತೆ ಹಲವು ವಿಷಯಗಳ ಕುರಿತು ಎರಡು ನಿಮಿಷ ಭಾಷಣ ಮಾಡಬೇಕು ಎಂದು ಹೇಳಿದರು.

ADVERTISEMENT

ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ 10 ಮಂದಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯಮಟ್ಟದ ಮೊದಲ ಮೂವರು ವಿಜೇತರಿಗೆ ಮೊಬೈಲ್ ಬಹುಮಾನ ನೀಡಲಾಗುವುದು. ರಾಜ್ಯಮಟ್ಟದಲ್ಲಿ ಆಯ್ಕೆಯಾದ ಮೊದಲ 10 ವಿಜೇತರಿಗೆ ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತದೆ. ವಿಜೇತರನ್ನು ಯುವ ಕಾಂಗ್ರೆಸ್ ವಕ್ತಾರರನ್ನಾಗಿ ನೇಮಕ ಮಾಡಲಾಗುತ್ತದೆ ಎಂದು
ತಿಳಿಸಿದರು.

ಯಂಗ್ ಇಂಡಿಯಾ ಕೇ ಬೋಲ್ ಕಾರ್ಯಕ್ರಮದ ಉಸ್ತುವಾರಿ ವಿನಯ್, ಯುವ ಕಾಂಗ್ರೆಸ್ ಮುಖಂಡರಾದ ವಿನಯ್ ಗೌಡ, ಶಿವಕುಮಾರ್, ಲೋಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.