ADVERTISEMENT

ಬಂದ್‌: ರಾಮನಗರದಲ್ಲಿ ಒಗ್ಗಟ್ಟಿನ ಪ್ರತಿಭಟನೆ

ವರ್ತಕ, ಕಾರ್ಮಿಕ ವಲಯದಿಂದ ಬೆಂಬಲ; ಜನಜೀವನಕ್ಕಿಲ್ಲ ಧಕ್ಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 14:04 IST
Last Updated 28 ಸೆಪ್ಟೆಂಬರ್ 2020, 14:04 IST
ಐಜೂರು ವೃತ್ತದಲ್ಲಿ ವಿವಿಧ ಸಂಘಟನೆಗಳು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದವು
ಐಜೂರು ವೃತ್ತದಲ್ಲಿ ವಿವಿಧ ಸಂಘಟನೆಗಳು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದವು   

ರಾಮನಗರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರಲು ಹೊರಟಿರುವ ವಿವಿಧ ಕಾಯ್ದೆ ಹಾಗೂ ಮಸೂದೆಗಳ ವಾಪಸ್‌ಗೆ ಆಗ್ರಹಿಸಿ ಸೋಮವಾರ ಕರೆ ನೀಡಲಾಗಿದ್ದ ಕರ್ನಾಟಕ ಬಂದ್‌ ಅಂಗವಾಗಿ ಪ್ರತಿಭಟನೆಗಳು ನಡೆದವು. ಆದರೆ ಜನಜೀವನಕ್ಕೆ ಹೆಚ್ಚಿನ ತೊಂದರೆ ಆಗಲಿಲ್ಲ.

ಬಂದ್‌ ಕರೆ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಓಡಾಟ ಕಡಿಮೆ ಇದ್ದು, ಹೆದ್ದಾರಿ ಬಿಕೋ ಎನ್ನುತ್ತಿತ್ತು. ಕೆಎಸ್‌ಆರ್‌ಟಿಸಿ ಬಸ್‌ಗಳ ಓಡಾಟ ಇತ್ತಾದರೂ ಪ್ರಯಾಣಿಕರೇ ಇರಲಿಲ್ಲ. ಹೀಗಾಗಿ ಪರಿಸ್ಥಿತಿ ನೋಡಿಕೊಂಡು ಬೇಡಿಕೆಗೆ ಅನುಗುಣವಾಗಿ ಬಸ್‌ಗಳು ಸಂಚಾರ ನಡೆಸಿದವು. ನಗರದಲ್ಲಿ ಬಹುತೇಕ ವರ್ತಕರು ಅಂಗಡಿ ಮುಂಗಟ್ಟು ಮುಚ್ಚಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಆದರೆ ಅಗತ್ಯ ವಸ್ತುಗಳ ವ್ಯಾಪಾರ ಮಳಿಗೆಗಳು ಎಂದಿನಂತೆ ತೆರೆದಿದ್ದವು. ಮಧ್ಯಾಹ್ನದ ಬಳಿಕ ಕೆಲವು ವರ್ತಕರು ಅಂಗಡಿಗಳ ಬಾಗಿಲು ತೆರೆದು ವ್ಯಾಪಾರ ನಡೆಸಿದರು. ಆಸ್ಪತ್ರೆ ಮತ್ತು ‌ಕ್ಲಿನಿಕ್‌ಗಳು, ಔಷಧಾಲಯಗಳ ಸೇವೆಗೆ ಯಾವುದೇ ಅಡ್ಡಿ ಆಗಲಿಲ್ಲ.

ಪೆಟ್ರೋಲ್ ಬಂಕ್‌ಗಳು ತೆರೆದಿದ್ದು, ನಗರದೊಳಗೆ ಖಾಸಗಿ ವಾಹನಗಳ ಓಡಾಟ ಎಂದಿನಂತೆ ಇತ್ತು. ಹೋಟೆಲ್‌ಗಳೂ ಎಂದಿನಂತೆ ತೆರೆದಿದ್ದವು. ಸರ್ಕಾರಿ ಕಚೇರಿಗಳು ತೆರೆದಿದ್ದು, ಬ್ಯಾಂಕುಗಳು ಎಂದಿನಂತೆ ವಹಿವಾಟು ನಡೆಸಿದವು. ರೇಷ್ಮೆಗೂಡು ಮಾರುಕಟ್ಟೆಯಲ್ಲೂ ಎದಿನಂತೆ ವಹಿವಾಟು ನಡೆಯಿತು.

ADVERTISEMENT

ಪ್ರತಿಭಟನೆ: ಕಾರ್ಮಿಕ ಕಾನೂನು, ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್‌ ಪಡೆಯುವಂತೆ ಆಗ್ರಹಿಸಿ ರೈತಪರ, ಕಾರ್ಮಿಕ ಪರ ಹಾಗೂ ಕನ್ನಡಪರ ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದವು. ರೈತ ಸಂಘದ ವಿವಿಧ ಬಣಗಳು ಒಗ್ಗೂಡಿದ್ದು ವಿಶೇಷವಾಗಿತ್ತು. ರಾಮನಗರದ ಎಂಪಿಎಂಸಿ ಮಾರುಕಟ್ಟೆ ಆವರಣದಿಂದ ಆರಂಭವಾದ ಪಾದಯಾತ್ರೆಯು ಐಜೂರು ವೃತ್ತದಲ್ಲಿ ಸಮಾವೇಶಗೊಂಡಿತು. ಪಾದಯಾತ್ರೆಯಲ್ಲಿ ವಿವಿಧ ಸಂಘಟನೆಗಳ ನೂರಾರು ಮಂದಿ ಮಂದಿ ಪಾಲ್ಗೊಂಡು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು. ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತರಲು ಹೊರಟಿರುವ ಕಾಯ್ದೆಗಳನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿದರು.

ಈ ವೇಳೆ ರೈತ ಮುಖಂಡರು, ಕಾರ್ಮಿಕ ಮುಖಂಡರು ಹಾಗೂ ಕನ್ನಡಪರ ಸಂಘಟನೆಯ ಮುಖಂಡರು ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದರು. ಉದ್ದೇಶಿತ ಕಾಯ್ದೆಗಳು ರೈತವಿರೋಧಿ ಆಗಿವೆ. ಇದರಿಂದ ಕೃಷಿಕರ ಬದುಕು ಬೀದಿಗೆ ಬೀಳಲಿದೆ. ಹೀಗಾಗಿ ಈ ಎಲ್ಲ ಕಾಯ್ದೆಗಳನ್ನೂ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು. ಜಿಲ್ಲೆಯ ಉಳಿದ ತಾಲ್ಲೂಕುಗಳಲ್ಲಿಯೂ ರಸ್ತ ತಡೆ ನಡೆಸಿ, ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಚನ್ನಪಟ್ಟಣದಲ್ಲಿ ಬೆಂಗಳೂರು ಮೈಸೂರು ಹೆದ್ದಾರಿ ತಡೆ ನಡೆಯಿತು. ಕನಕಪುರದಲ್ಲಿ ರಸ್ತೆ ತಡೆ ನಡೆದರೆ, ಮಾಗಡಿ ತಾಲ್ಲೂಕಿನ ಕಲ್ಯಾಗೇಟ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಯಿತು.

ಬಿಗಿ ಭದ್ರತೆ: ಪೊಲೀಸರ ಕಣ್ಗಾವಲು

ಬಂ‌ದ್‌ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್‌ ವ್ಯವಸ್ಥೆ ಮಾಡಿದ್ದರು. ಜಿಲ್ಲೆಯ ವಿವಿಧೆಡೆ 700 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಜಿಲ್ಲೆಯ ಪ್ರಮುಖ ವೃತ್ತಗಳು, ಜನ ಸಂದಣಿ ಪ್ರದೇಶಗಳು, ಸರ್ಕಾರಿ ಕಚೇರಿಗಳ ಮುಂಭಾಗವು ಪೊಲೀಸರು ಕಾವಲು ಕಾದರು. ಸೂಕ್ಷ್ಮ ಪ್ರದೇಶಗಳಲ್ಲಿ ಬ್ಯಾರಿಕೇಡ್ ಹಾಕಿ, ಏಳು ಡಿಎಆರ್‌ ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಯಾವುದೇ ಅಹಿತರಕ ಘಟನೆ ಜರುಗಿಲ್ಲ.

ಕೈಗಾರಿಕಾ ಪ್ರದೇಶಗಳಲ್ಲೂ ಪ್ರತಿಭಟನೆ

ಕಾರ್ಮಿಕ ಕಾನೂನಿಗೆ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳೂ ಪ್ರತಿಭಟನೆಯಲ್ಲಿ ಕೈಜೋಡಿಸಿದ್ದವು. ಬಂದ್ ಕರೆಗೆ ಬಿಡದಿ ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಸಾಕಷ್ಟು ಕೈಗಾರಿಕೆಗಳು ಬಂದ್‌ ಆಗಿದ್ದವು. ಬಿಡದಿಯಲ್ಲಿ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.