ADVERTISEMENT

ಎಚ್‌ಡಿಕೆ ಶಾಶ್ವತವಾಗಿ ಭೂಮಿ ಮೇಲಿರಲಿ; ನಾವೆಲ್ಲ ಸರ್ವನಾಶವಾಗುತ್ತೇವೆ: ಬಾಲಕೃಷ್ಣ

ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ತಿರುಗೇಟು

​ಪ್ರಜಾವಾಣಿ ವಾರ್ತೆ
Published 29 ಜುಲೈ 2024, 14:27 IST
Last Updated 29 ಜುಲೈ 2024, 14:27 IST
ಎಚ್‌.ಸಿ. ಬಾಲಕೃಷ್ಣ, ಶಾಸಕ
ಎಚ್‌.ಸಿ. ಬಾಲಕೃಷ್ಣ, ಶಾಸಕ   

ರಾಮನಗರ: ‘ಜಿಲ್ಲೆ ಹೆಸರು ಬದಲಾವಣೆ ಮಾಡಿದವರು ಸರ್ವನಾಶ ಆಗುತ್ತಾರೆ ಎಂದಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಮಾತನಾಡಿದವರನ್ನೆಲ್ಲಾ ಸರ್ವನಾಶ ಮಾಡಿಕೊಂಡೇ ಬಂದಿದ್ದಾರೆ. ಸೂರ್ಯ,ಚಂದ್ರ ಇರುವವರೆಗೆ ಅವರೇ ಭೂಮಿ ಮೇಲಿರಲಿ. ನಾವೆಲ್ಲಾ ಸರ್ವನಾಶವಾಗುತ್ತೇವೆ’ ಎಂದು ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.  

ಜಿಲ್ಲೆ ಹೆಸರು ಬದಲಾವಣೆ ಕುರಿತು ನಗರದಲ್ಲಿ ಸೋಮವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಹೆಸರು ಬದಲಾವಣೆಗೆ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆ. ಗೆಜೆಟ್ ಅಧಿಸೂಚನೆ ಬರುವುದೊಂದೇ ಬಾಕಿ ಇದೆ. ಬೆಂಗಳೂರು ಹೆಸರಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯವೇ ಎನ್ನುವವರು ರಾಮನಗರ ಹೆಸರಿದ್ದರೆ ಅಭಿವೃದ್ಧಿ ಆಗುತ್ತದೆಯೇ ಎಂಬುದರ ಬಗ್ಗೆ ಯೋಚಿಸಬೇಕು’ ಎಂದರು.

‘ಕುಮಾರಸ್ವಾಮಿ ಅವರು ಜಿಲ್ಲೆಯಲ್ಲಿ 20 ವರ್ಷ ರಾಜ್ಯಭಾರ ಮಾಡಿ ಏನು ಅಭಿವೃದ್ಧಿ ಮಾಡಿದ್ದಾರೆ? ಕೇವಲ ನಾಲ್ಕೈದು ಕಟ್ಟಡ ಕಟ್ಟಿದ್ದರೆ ಸಾಕೇ? ರಾಮನಗರ ಕಸದ ತೊಟ್ಟಿಯಂತಿದೆ. ಕನಕಪುರ ಮತ್ತು ರಾಮನಗರದ ಅಭಿವೃದ್ಧಿ ನಡುವಿನ ವ್ಯತ್ಯಾಸ ಹೇಗಿದೆ ಎಂದು ಅವರಿಗೆ ಗೊತ್ತಾ? ನಮಗೂ 20 ವರ್ಷ ಕೊಡಿ ಅಭಿವೃದ್ಧಿ ಮಾಡಿ ತೋರಿಸುತ್ತೇವೆ’ ಎಂದು ಸವಾಲು ಹಾಕಿದರು.

ADVERTISEMENT

‘ನಾವು ಅಭಿವೃದ್ಧಿ ಮಾಡದಿದ್ದರೆ ಮತ್ತೆ ಅವರು ಹೆಸರು ಬದಲಾವಣೆ ಮಾಡಲಿ. ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿ ಮುಖ್ಯಮಂತ್ರಿ ಈಗಾಗಲೇ ಅನುದಾನ ಬಿಡುಗಡೆ ಮಾಡಿದ್ದಾರೆ. ಕಾದು ನೋಡಿ, ಮುಂದೆ ರಾಮನಗರ ಹೇಗೆ ಬದಲಾಗಲಿದೆ ಎಂದು ಗೊತ್ತಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.