ಚನ್ನಪಟ್ಟಣ: ಇಲ್ಲಿಯ ನಗರಸಭೆ ವ್ಯಾಪ್ತಿಯ ಚಿಕ್ಕಮಳೂರು, ಮಂಗಳವಾರಪೇಟೆ, ಮರಳುಹೊಲ ವಾರ್ಡ್‌ಗಳಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಸೋಮವಾರ ನಗರ ಸಂಚಾರ ನಡೆಸಿದರು.
ಸಾರ್ವಜನಿಕರ ಅಹವಾಲು ಆಲಿಸಿದ ಅವರು, ಗರಸಭೆಯ ಎಲ್ಲ 31 ವಾರ್ಡುಗಳ ಅಭಿವೃದ್ಧಿಗೆ ತಲಾ ₹1 ಕೋಟಿ ಅನುದಾನ ಬಿಡುಗಡೆಯಾಗಿದೆ. ಅಭಿವೃದ್ಧಿಗೆ ಕಾಮಗಾರಿ ಅಂತಿಮ ರೂಪುರೇಷೆ, ಯೋಜನೆ ರೂಪಿಸಲು ಸಿದ್ಧತೆ ನಡೆದಿರುವುದಾಗಿ ಹೇಳಿದರು.
ಸಾತನೂರು ಸರ್ಕಲ್‌ನಿಂದ ಹೊಂಗನೂರುವರೆಗೆ ರಸ್ತೆ ವಿಸ್ತರಣೆಗೆ ಟೆಂಡರ್ ಕರೆಯಲಾಗಿದೆ. ಅಲ್ಲಿ ಒಳಚರಂಡಿ ಕಾಮಗಾರಿ ಕೈಗೊಳ್ಳಬೇಕಿರುವ ಕಾರಣ ಸದ್ಯಕ್ಕೆ ರಸ್ತೆಯನ್ನು ಮರು ಡಾಂಬರೀಕರಣ ಮಾಡುತ್ತೇವೆ. ಶೀಘ್ರ ರಸ್ತೆ ವಿಸ್ತರಣೆ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಒಳಚರಂಡಿ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದು, ಶೀಘ್ರ ಯುಜಿಡಿ ಕಾಮಗಾರಿ ಆರಂಭವಾಗುತ್ತದೆ. ಖಾಸಗಿ ಬಡಾವಣೆಗಳಿಂದಾಗಿ ಪಟ್ಟಣದ ಕೊಳಚೆ ನೀರು ಸಾರಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಕೊಳಚೆ ನೀರು ಹರಿದುಹೋಗಲು ಅಗತ್ಯ ವ್ಯವಸ್ಥೆಗೆ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಅಮೃತ ಯೋಜನೆ ಅಡಿ ನಗರದ 1 ರಿಂದ 8 ನೇ ವಾರ್ಡುಗಳಲ್ಲಿ ಆರಂಭಿಸಲಾಗಿದ್ದ ಹೊಸ ಪೈಪ್‌ಲೈನ್ ಕಾಮಗಾರಿ ಸ್ಥಗಿತಗೊಂಡಿತ್ತು. ಎಲ್ಲ ಅಡೆತಡೆ ನಿವಾರಿಸಿ ಮತ್ತೆ ಪೈಪ್‌ಲೈನ್ ಕಾಮಗಾರಿ ಮುಂದುವರೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಯೋಗೇಶ್ವರ್ ತಿಳಿಸಿದರು.
ನಗರಸಭಾ ಅಧ್ಯಕ್ಷ ವಾಸಿಲ್ ಆಲಿಖಾನ್, ನಗರಸಭಾ ಆಯುಕ್ತ ಮಹೇಂದ್ರ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಕುಮಾರ್, ಮಲುವೇಗೌಡ, ಪಿ.ಡಿ.ರಾಜು, ಲೋಕೇಶ್, ಕೀಕರ್ ಚೇತನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.