ADVERTISEMENT

ರೇಷ್ಮೆಗೂಡು ಮಾರುಕಟ್ಟೆಗೆ ಸೌಕರ್ಯ: ಶಾಸಕ

ಮಾರುಕಟ್ಟೆಗೆ ಭೇಟಿ ನೀಡಿದ ಇಕ್ಬಾಲ್ ಹುಸೇನ್; ರೀಲರ್ಸ್‌ ಜೊತೆ ಸಭೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 5:16 IST
Last Updated 31 ಜನವರಿ 2025, 5:16 IST
ರಾಮನಗರದ ರೇಷ್ಮೆಗೂಡು ಮಾರುಕಟ್ಟೆಗೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಗುರುವಾರ ಭೇಟಿ ನೀಡಿ ರೀಲರ್ಸ್‌ಗಳೊಂದಿಗೆ ಮಾತನಾಡಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್, ಮಾರುಕಟ್ಟೆ ಉಪ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಹಾಗೂ ಇತರರು ಇದ್ದಾರೆ
ರಾಮನಗರದ ರೇಷ್ಮೆಗೂಡು ಮಾರುಕಟ್ಟೆಗೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಗುರುವಾರ ಭೇಟಿ ನೀಡಿ ರೀಲರ್ಸ್‌ಗಳೊಂದಿಗೆ ಮಾತನಾಡಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್, ಮಾರುಕಟ್ಟೆ ಉಪ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ ಹಾಗೂ ಇತರರು ಇದ್ದಾರೆ   

ರಾಮನಗರ: ‘ರಾಜ್ಯದಲ್ಲಿಯೇ ಹೆಚ್ಚು ರೇಷ್ಮೆ ವಹಿವಾಟು ನಡೆಸುವ ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಗೃಹ ಇಲ್ಲದಿರುವುದು ಸೇರಿದಂತೆ ಮೂಲಸೌಕರ್ಯ ಕೊರತೆ ಇದೆ. ನಿತ್ಯ ನೂರಾರು ರೈತರು ಬರುವ ಮಾರುಕಟ್ಟೆಗೆ ಅಗತ್ಯ ಸೌಲಭ್ಯ ಒದಗಿಸಲಾಗುವುದು’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ನಗರದ ಬೆಂಗಳೂರ–ಮೈಸೂರು ರಸ್ತೆಯಲ್ಲಿರುವ ಮಾರುಕಟ್ಟೆಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ ರೀಲರ್ಸ್‌ಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ‘ರೇಷ್ಮೆಯನ್ನೇ ನೆಚ್ಚಿಕೊಂಡು ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ನಾನು ರೈತನ ಮಗನಾಗಿದ್ದು, ರೇಷ್ಮೆ ಸಾಕಣೆಯ ಕಷ್ಟ ಮತ್ತು ಸುಖದ ಅರಿವಿದೆ’ ಎಂದರು.

‘ಮಾರುಕಟ್ಟೆ ಅಭಿವೃದ್ಧಿಗೆ ಸರ್ಕಾರಕ್ಕೆ ₹5 ಕೋಟಿ ಅನುದಾನ ಕೇಳಲಾಗಿತ್ತು. ಸದ್ಯ ₹1.60 ಲಕ್ಷ ಅನುದಾನ ಬಂದಿದೆ. ಇಲ್ಲಿರುವ ಹಳೆ ಕಟ್ಟಡವು ಶಿಥಿಲಾವಸ್ಥೆ ತಲುಪಿಸಿದ್ದು, ಅದನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲಾಗುವುದು. ರೇಷ್ಮೆ ನೂಲು ಬಿಚ್ಚಣಿಕೆ ಘಟಕಗಳ ಸಹಾಯಧನ ಹೆಚ್ಚಳ, ನಿಯಮಗಳ ಸಡಿಲಗೊಳಿಸುವುದು ಸೇರಿದಂತೆ ರೀಲರ್ಸ್‌ಗಳಿಗೆ ಸರ್ಕಾರದಿಂದ ಸಿಗುವ ಸೌಕರ್ಯ ಒದಗಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ನಮ್ಮ ಜಿಲ್ಲೆಯ ರೇಷ್ಮೆಗೂಡುಗಳಲ್ಲಷ್ಟೇ ಉತ್ತಮ ನೂಲು ಬರುತ್ತಿದೆ. ಬೇರೆ ಜಿಲ್ಲೆ ಹಾಗೂ ಹೊರ ರಾಜ್ಯಗಳ ಗೂಡುಗಳಲ್ಲಿ ಗುಣಮಟ್ಟದ ರೇಷ್ಮೆ ಸಿಗುತ್ತಿಲ್ಲ. ಉತ್ತಮ ತಳಿಯ ರೇಷ್ಮೆ ಬಿತ್ತನೆ ಅವರಿಗೆ ಸಿಗದಿರುವುದೇ ಇದಕ್ಕೆ ಕಾರಣ. ಇದರಿಂದಾಗಿ 6 ಕೆ.ಜಿ. ರೇಷ್ಮೆಗೆ 1 ಕೆ.ಜಿ ರೇಷ್ಮೆ ಬರುವ ಬದಲು 7ರಿಂದ 8 ಕೆ.ಜಿ ರೇಷ್ಮೆಗೂಡಿಗೆ 1 ಕೆ.ಜಿ ರೇಷ್ಮೆ ಬರುತ್ತಿದೆ. ಇದರಿಂದ ರೀಲರ್‌ಗಳಿಗೆ ನಷ್ಟವಾಗುತ್ತಿದೆ. ಗುಣಮಟ್ಟದ ಗೂಡು ಮಾರುಕಟ್ಟೆಗೆ ಬರುತ್ತಿಲ್ಲ. ರೇಷ್ಮೆ ಇಲಾಖೆಯು ಬೇರೆ ಜಿಲ್ಲೆಯ ರೈತರಿಗೆ ಉತ್ತಮ ರೇಷ್ಮೆ ಬಿತ್ತನೆ ತಳಿ ಪರಿಚಯಿಸಬೇಕು ಎಂದು ಸಭೆಯಲ್ಲಿದ್ದ ರೀಲರ್‌ಗಳು ಒತ್ತಾಯಿಸಿದರು. ಅದಕ್ಕೆ ಶಾಸಕರು, ‘ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕು’ ಎಂದರು.

‘ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ (ಕೆಎಸ್‌ಎಂಬಿ)ಮುಖಾಂತರ ಬಿಚ್ಚಣಿಕೆ ಮಾಡಿದ ರೇಷ್ಮೆಯನ್ನು ರಾಮನಗರದಲ್ಲೇ ಖರೀದಿಸುವ ವ್ಯವಸ್ಥೆ ಇತ್ತು. ಆದರೆ, ಎರಡು ವರ್ಷಗಳಿಂದ ಖರೀದಿಸುತ್ತಿಲ್ಲ. ಇದರಿಂದಾಗಿ ರೀಲರ್‌ಗಳು ಬೆಂಗಳೂರಿಗೆ ಹೋಗಿ ಮಾರಾಟ ಮಾಡಬೇಕಿದೆ. ಹಾಗಾಗಿ, ರಾಮನಗರದಲ್ಲೇ ರೇಷ್ಮೆ ನೂಲು ಖರೀದಿ ಮಾರುಕಟ್ಟೆ ಸ್ಥಾಪಿಸಬೇಕು’ ಎಂದು ರೀಲರ್ ಗುರುವೇಗೌಡ ಆಗ್ರಹಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್‍ಕುಮಾರ್, ಮಾರುಕಟ್ಟೆಯ ಉಪ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ರೀಲರ್‌ಗಳಾದ ಶಫಿ, ಮೊಹಸಿನ್, ಹಬೀಬುಲ್ಲಾ, ನಯಾಜ್, ರಮೇಶ್ ಹಾಗೂ ಇತರರು ಇದ್ದರು.

ರಾಮನಗರದ ರೇಷ್ಮೆ ಮಾರುಕಟ್ಟೆಗೆ 100 ವರ್ಷಗಳಷ್ಟು ಹಳೆಯದಾಗಿದ್ದು ಅದು ಇಲ್ಲಿಯೇ ಉಳಿಯಬೇಕು. ಆ ನಿಟ್ಟಿನಲ್ಲಿ ಮಾರುಕಟ್ಟೆಗೆ ಹೊಸ ರೂಪ ನೀಡುವುದಕ್ಕಾಗಿ ರೇಷ್ಮೆ ಸಚಿವರು ಹಾಗೂ ಸಿ.ಎಂ ಜೊತೆ ಮಾತನಾಡಿ ಅನುದಾನ ತರುವೆ
ಎಚ್‌.ಎ. ಇಕ್ಬಾಲ್ ಹುಸೇನ್ ಶಾಸಕ

‘ನಿಯಮ ಸಡಿಲಗೊಳಿಸಿ’

ರೇಷ್ಮೆ ನೂಲು ಬಿಚ್ಚಣಿಕೆ ಘಟಕಗಳಿಗೆ ಸರ್ಕಾರದಿಂದ ಹೆಚ್ಚಿನ ಸವಲತ್ತು ಸಿಗುವಂತೆ ಮಾಡಬೇಕು. ಘಟಕ ನಿರ್ಮಾಣಕ್ಕೆ ಇರುವ ನಿಯಮಗಳನ್ನು ಸಡಿಲಗೊಳಸಬೇ. ಆಗ ಚಿಕ್ಕ ರೀಲರ್‌ಗಳು ಆಧುನಿಕ ಘಟಕ ಸ್ಥಾಪಿಸಬಹುದು. ರಾಮನಗರದ ರೇಷ್ಮೆ ಏಷ್ಯಾ ಖಂಡದಲ್ಲೇ ಪ್ರಸಿದ್ದಿಯಾಗಿದೆ. ಅದಕ್ಕಾಗಿಯೇ ನಗರವನ್ನು ರೇಷ್ಮೆ ನಗರಿ ಎಂದೂ ಕರೆಯುತ್ತಾರೆ. ಇಷ್ಟೊಂದು ಜನಪ್ರಿಯತೆ ಹೊಂದಿರುವ ನಗರದ ರೇಷ್ಮೆ ಮಾರುಕಟ್ಟೆಯನ್ನು ಅಭಿವೃದ್ಧಿಗೊಳಿಸಿ ಹೊಸ ರೂಪ ನೀಡಬೇಕು ಎಂದು ರೀಲರ್ಸ್ ಸಂಘದ ಅಧ್ಯಕ್ಷ ಪರ್ವೀಜ್ ಪಾಷ ಶಾಸಕರಿಗೆ ಒತ್ತಾಯಿಸಿದರು ‘ಅನುದಾನ ಹೆಚ್ಚಿಸಬೇಕು’ ‘ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳ ರೈತರು ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಆದರೆ ರೇಷ್ಮೆ ಇಲಾಖೆಯನ್ನು ಸಬಲಗೊಳಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಬಜೆಟ್‌ನಲ್ಲೂ ಕೇವಲ ₹300 ಕೋಟಿ ಒದಗಿಸಲಾಗುತ್ತಿದೆ. ಈ ಮೊತ್ತ ನೌಕರರ ಸಂಬಳಕ್ಕೆ ಸಾಕಾಗುತ್ತಿದೆ. ರೇಷ್ಮೆ ಕ್ಷೇತ್ರದ ಬೆಳವಣಿಗೆಗೆ ಯೋಜನೆ ರೂಪಿಸಲು ಸಾಧ್ಯವಾಗುತ್ತಿಲ್ಲ. ಇಲಾಖೆಗೆ ಹೆಚ್ಚು ಅನುದಾನ ನೀಡುವಂತೆ ರೇಷ್ಮೆ ಸಚಿವರು ಹಾಗೂ ಮುಖ್ಯಮಂತ್ರಿ ಬಳಿ ಶಾಸಕರು ಮಾತನಾಡಬೇಕು. ಇಲಾಖೆಯನ್ನು ಮತ್ತಷ್ಟು ಸಬಲೀಕರಣಗೊಳಿಸಬೇಕು’ ಎಂದು ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ರವಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.