ADVERTISEMENT

ಜಿಲ್ಲಾಡಳಿತ ನಿರ್ಲಕ್ಷ್ಯದಿಂದ ಮಾನವ ಹಕ್ಕುಗಳ ಉಲ್ಲಂಘನೆ : ಎಚ್‌.ಎಂ ರೇವಣ್ಣ ಆರೋಪ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 13:29 IST
Last Updated 16 ಡಿಸೆಂಬರ್ 2019, 13:29 IST
ಮಾಗಡಿ ಕೊಳಗೇರಿಗಳಿಗೆ ಮುಕ್ತಿ ದೊರಕಿಸಿಕೊಡುವಂತೆ ನಿವಾಸಿಗಳು ಎಂಎಲ್‌ಸಿ, ಎಚ್‌.ಎಂ.ರೇವಣ್ಣ ಅವರಿಗೆ ಮನವಿ ಸಲ್ಲಿಸಿದರು.
ಮಾಗಡಿ ಕೊಳಗೇರಿಗಳಿಗೆ ಮುಕ್ತಿ ದೊರಕಿಸಿಕೊಡುವಂತೆ ನಿವಾಸಿಗಳು ಎಂಎಲ್‌ಸಿ, ಎಚ್‌.ಎಂ.ರೇವಣ್ಣ ಅವರಿಗೆ ಮನವಿ ಸಲ್ಲಿಸಿದರು.   

ಮಾಗಡಿ: ಕೊಳೆಗೇರಿ ನಿವಾಸಿಗಳಿಗೆ ಮೂಲಸವಲತ್ತು ಮತ್ತು ಹಕ್ಕುಪತ್ರ ವಿಷಯವಾಗಿ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರನ್ನು ಕೂಡಲೇ ಭೇಟಿ ಮಾಡುವುದಾಗಿ ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ ತಿಳಿಸಿದರು.

ಪಟ್ಟಣದ ಕಾಳಿಯಪ್ಪ ಕೊಳೆಗೇರಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಿಂದ ಸೋಮವಾರ ಮನವಿ ಸ್ವೀಕರಿಸಿ ಮಾತನಾಡಿದರು.

‘ಪ್ರಜಾವಾಣಿ ನಮ್ಮನಗರ ನಮ್ಮಧ್ವನಿ’ ಸರಣಿಯಲ್ಲಿ ಸೋಮವಾರ ಪ್ರಕಟವಾದ ‘ಕೊಳೆಗೇರಿ ಬದುಕಿಗೆ ಸಿಗಲಿದೆಯೇ ಮುಕ್ತಿ?’ ಲೇಖನ ಓದಿ ವ್ಯಥೆಯಾಯಿತು. 30ವರ್ಷಗಳ ಹಿಂದೆ ನೆಲೆ ಇಲ್ಲದ ಕಡುಬಡವರನ್ನು ಗುರುತಿಸಿ ಕೊಳೆಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಮನೆಗಳನ್ನು ನಿರ್ಮಿಸಿಕೊಡಲಾಗಿತ್ತು. ಇದುವರೆಗೂ ಹಕ್ಕುಪತ್ರ ನೀಡದೆ ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ. ಸಂವಿಧಾನದ ಆಶಯದಂತೆ ಸರ್ವರಿಗೆ ಸಮಬಾಳು, ಸರ್ವರಿಗೆ ಸಮಪಾಲು ತತ್ವ ಗಾಳಿಗೆ ತೂರಲಾಗಿದೆ. ಸೂಕ್ತ ಕ್ರಮಕೈಗೊಳ್ಳಲು ಒತ್ತಾಯಿಸುವುದಾಗಿ ತಿಳಿಸಿದರು.

ADVERTISEMENT

ಪಟ್ಟಣದಲ್ಲಿ ಬೀದಿ ದೀಪಗಳಿಲ್ಲದೆ ಜನರು ಶಪಿಸುತ್ತಿದ್ದಾರೆ. ಐಡಿಎಸ್‌ಎಂಟಿ ಲೇಔಟ್‌ ನಿವೇಶನ ವಿತರಿಸುವಲ್ಲಿ ತೀರಾ ವಿಳಂಬವಾಗಿದೆ. ಜೋಗಿ ಕಟ್ಟೆ ಇತರೆಡೆ ನನ್ನ ಅಧಿಕಾರದ ಅವಧಿಯಲ್ಲಿ ಬಡವರಿಗೆ ನೀಡಿದ್ದ ನಿವೇಶನಗಳ ಬಗ್ಗೆ ಇಂದಿಗೂ ಸೂಕ್ತ ದಾಖಲೆ ಒದಗಿಸುವಲ್ಲಿ ಪುರಸಭೆ ವಿಫಲವಾಗಿದೆ. ರಾಜೀವ್‌ಗಾಂಧಿ ನಗರದ ಕೊಳೆಗೇರಿ ಜನರ ಬದುಕು ನರಕ ಸದೃಶವಾಗಿದೆ ಎಂದು ನಿವಾಸಿಗಳು ಮನವಿ ಮಾಡಿದ್ದಾರೆ. ಪರಿಶಿಷ್ಟ ಪಂಗಡಕ್ಕೆ ಸೇರಿರುವ ಹಂದಿ ಜೋಗಿಗಳ ವರಾಹ ಕಾಲೊನಿ ಕೂಡ ಅಭಿವೃದ್ಧಿ ಕಂಡಿಲ್ಲ. ಇದೆಲ್ಲದಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಕೊಳೆಗೇರಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಜಯಶ್ರೀ ಸೂರ್ಯನಾರಾಯಣ ಮಾತನಾಡಿ, ಕಾಳಿಯಪ್ಪ ಕೊಳೆಗೇರಿಯಲ್ಲಿ ಬಡವರಿಗೆ ವಿತರಿಸಿರುವ ಮನೆಗಳನ್ನು ಬೇರೆಯವರಿಗೆ ಮಾರಾಟ ಮಾಡುತ್ತಿರುವುದನ್ನು ತಡೆಗಟ್ಟಬೇಕು. ತಿರುಮಲೆ ಸ್ಮಶಾನ ಅಕ್ರಮ ಒತ್ತುವರಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಸಂಘದ ಉಪಾಧ್ಯಕ್ಷ ಕಾಳಿಯಪ್ಪ ಮಾತನಾಡಿ, ಬಡವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಬೆಲೆ ಬಾಳುತ್ತಿದ್ದ ಸ್ವಂತ ಜಮೀನು ಕಡಿಮೆ ಬೆಲೆಗೆ ನೀಡಲಾಗಿದೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಹಂತದ ಕಟ್ಟಡಗಳ ನಿರ್ಮಾಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದರು.

ಹೊಸಪೇಟೆ ಚಂದ್ರಯ್ಯ, ಎಚ್‌.ಆರ್‌.ಮಂಜುನಾಥ್, ಎಚ್‌.ಶಿವಕುಮಾರ್‌, ನರಸಿಂಹಮೂರ್ತಿ, ರಾಜಣ್ಣ, ಚಿಕ್ಕಅರುವಯ್ಯ, ವೆಂಕಟೇಶ್‌, ವರಾಹ ಕಾಲೊನಿ ಗಂಗಮ್ಮ, ತಿರುಮಲೆ ಕೊಳೆಗೇರಿ ಬಸವರಾಜು, ನಾಗರತ್ನಮ್ಮ, ರಾಜೀವ್‌ ಗಾಂಧಿ ನಗರದ ಮಾರಿಮುತ್ತು, ದೊರೈ, ಧನಲಕ್ಷ್ಮೀ ಎಚ್‌.ಎಂ ರೇವಣ್ಣ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.