ADVERTISEMENT

ಶಾಲಾ ಮಕ್ಕಳೊಂದಿಗೆ ಊಟ ಸವಿದ ಸಂಸದ ಸಿ.ಎನ್. ಮಂಜುನಾಥ್

ಕಣ್ವ ಮಹರ್ಷಿ ಸಮುದಾಯ ಭವನಕ್ಕೆ ಡಾ. ಸಿ.ಎನ್. ಮಂಜುನಾಥ್ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2025, 4:52 IST
Last Updated 28 ಫೆಬ್ರುವರಿ 2025, 4:52 IST
ರಾಮನಗರ ತಾಲ್ಲೂಕಿನ ಆನುಮಾನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಗುರುವಾರ ಭೇಟಿ ನೀಡಿದ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು, ವಿದ್ಯಾರ್ಥಿಗಳೊಂದಿಗೆ ಊಟ ಸವಿದರು
ರಾಮನಗರ ತಾಲ್ಲೂಕಿನ ಆನುಮಾನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಗುರುವಾರ ಭೇಟಿ ನೀಡಿದ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು, ವಿದ್ಯಾರ್ಥಿಗಳೊಂದಿಗೆ ಊಟ ಸವಿದರು   

ರಾಮನಗರ: ತಾಲ್ಲೂಕಿನ ಕೂಟಗಲ್ ಹೋಬಳಿಯ ಆನುಮಾನಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ಅವರು ಮಧ್ಯಾಹ್ನ ಅನಿರೀಕ್ಷಿತವಾಗಿ ಭೇಟಿ ನೀಡಿದರು. ಶಾಲಾ ಕಟ್ಟಡ, ಕಲಿಕಾ ಸೌಕರ್ಯಗಳನ್ನು ಪರಿಶೀಲಿಸಿ ಪ್ರಾಂಶುಪಾಲರು ಹಾಗೂ ಶಿಕ್ಷಕರನ್ನು ವಿಚಾರಿಸಿದರು. ನಂತರ ವಿದ್ಯಾರ್ಥಿಗಳೊಂದಿಗೆ ಮಧ್ಯಾಹ್ನದ ಊಟ ಸವಿದರು.

ಶಾಲೆಯಲ್ಲಿ ಸಿಗುತ್ತಿರುವ ಶಿಕ್ಷಣ ಹಾಗೂ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದ ಡಾ. ಮಂಜುನಾಥ್, ‘ಇಲ್ಲಿ ಓದುತ್ತಿರುವ ವಿದ್ಯಾರ್ಥಿಗಳೆಲ್ಲರೂ ಅದೃಷ್ಟವಂತರು. ಹಿಂದೆ ಇಂತಹ ಸೌಲಭ್ಯಗಳಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಹೆಚ್ಚಿನ ಆಸ್ಥೆ ವಹಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ವಸತಿ ಶಾಲೆಗಳನ್ನು ನಿರ್ಮಿಸಿ ಅತ್ಯುತ್ತಮ ಸೌಲಭ್ಯಗಳನ್ನು ನೀಡುತ್ತಿದೆ’ ಎಂದರು.

‘ವಿದ್ಯಾರ್ಥಿಗಳು ಇಲ್ಲಿರುವ ಕಲಿಕಾ ಸೌಕರ್ಯಗಳ ಪ್ರಯೋಜನ ಪಡೆದು ಚನ್ನಾಗಿ ಓದಬೇಕು. ಇದೀಗ ಸಮೀಪಿಸುತ್ತಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಚನ್ನಾಗಿ ತಯಾರಿ ನಡೆಸಬೇಕು. ಪಠ್ಯಕ್ಕೆ ಸಂಬಂಧಿಸಿದ ಗೊಂದಲ ಹಾಗೂ ಅನುಮಾನಗಳ ಕುರಿತು ಶಿಕ್ಷಕರನ್ನು ಕೇಳಿ ಪರಿಹರಿಸಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಉತ್ತಮ ಫಲಿತಾಂಶ ಪಡೆಯಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಶಿಕ್ಷಣ ಮಾತ್ರವೇ ಮನುಷ್ಯನ ಬದುಕಿನ ದಿಕ್ಕು ಬದಲಿಸಬಲ್ಲದು. ಜ್ಞಾನ ಎಂಬುದು ಯಾರೂ ಕದಿಯಲಾಗದ ಆಸ್ತಿ. ತಮ್ಮ ಮಕ್ಕಳು ಉತ್ತಮ ಜ್ಞಾನ ಸಂಪಾದಿಸಿ ಭವಿಷ್ಯದಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳಬೇಕೆಂಬ ಹೆಬ್ಬಯಕೆಯಿಂದ ಗಿ ತಂದೆ–ತಾಯಿ ಕಷ್ಟಪಟ್ಟು ಓದಿಸುತ್ತಾರೆ. ವಿದ್ಯಾರ್ಥಿಗಳು ತಮ್ಮನ್ನು ಹೆತ್ತವರು, ಕಲಿಸಿದ ಗುರುಗಳು ಹಾಗೂ ಓದಿದ ಶಾಲೆಗೆ ಕೀರ್ತಿ ತರಬೇಕು’ ಎಂದು ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲ ಮಹೇಶ ಎಂ., ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಗೂ ಸ್ಥಳಿಯ ಮುಖಂಡರು ಇದ್ದರು.

ಭೂಮಿ ಪೂಜೆ: ಕಣ್ವ ಗ್ರಾಮಕ್ಕೆ ಭೇಟಿ ನೀಡಿದ ಡಾ. ಮಂಜುನಾಥ್, ಗ್ರಾಮದಲ್ಲಿ ನೂತನವಾಗಿ ಕಣ್ವ ಮಹರ್ಷಿ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಹೊಸೂರು ಗ್ರಾಮಕ್ಕೆ ಭೇಟಿ ನೀಡಿದ ಅವರು, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಜೆಡಿಎಸ್ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ಶಿವಲಿಂಗಯ್ಯ, ದಿಶಾ ಸಮಿತಿ ಸದಸ್ಯರಾದ ನರಸಿಂಹಮೂರ್ತಿ, ಶಿವಣ್ಣ, ಅಧಿಕಾರಿಗಳು ಹಾಗೂ ಸ್ಥಳೀಯ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಇದ್ದರು.

ರಾಮನಗರ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಡಾ. ಸಿ.ಎನ್. ಮಂಜುನಾಥ್ ಗುರುವಾರ ಭೂಮಿಪೂಜೆ ನೆರವೇರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.